ಬೇಲೂರಿನ ಹೊಸನಗರ ಬಡಾವಣೆಯಲ್ಲಿ ಪಡಿತರದಾರರು ಪ್ರತಿಭಟನೆ

ಬೇಲೂರಿನ ಹೊಸನಗರ ಬಡಾವಣೆಯಲ್ಲಿ ಪಡಿತರದಾರರು ಪ್ರತಿಭಟನೆ

ಬೇಲೂರು, ಡಿ. 10: ಒಂದನೆ ವಾರ್ಡಿನ ಹೊಸನಗರ ಬಡಾವಣೆಯಲ್ಲಿನ ಪಡಿತರ ಚೀಟಿದಾರರ ದಿಕ್ಕುತಪ್ಪಿಸಿ ನೆಹರೂನಗರದ ಟಿಎಪಿಸಿಎಂಎಸ್ ನ್ಯಾಯಬೆಲೆ ಅಂಗಡಿಯಲ್ಲಿದ್ದ ಪಡಿತರ ಕಾರ್ಡುಗಳನ್ನು ಪಟ್ಟಣದ ಚನ್ನೇಗೌಡರ ಬೀದಿಯಲ್ಲಿರುವ ಬದಲಾವಣೆ ಮಾಡಿಕೊಂಡು ಪಡಿತರದಾರರಿಗೆ ಪಡಿತರ ಸಿಗದಂತೆ ಮಾಡಿರುವ ನ್ಯಾಯಬೆಲೆ ಅಂಗಡಿ ಮಾಲೀಕ ಮಂಜುನಾಥಶೆಟ್ಟಿ ವಿರುದ್ಧ ಹೊಸನಗರದ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ನ್ಯಾಯಬೆಲೆ ಅಂಗಡಿ ಮಾಲೀಕ ಮಂಜುನಾಥಶೆಟ್ಟಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ನಿವಾಸಿಗಳು ದಿಕ್ಕಾರ ಕೂಗಿದರು. ಈ ಸಂದರ್ಭ ಮಾತನಾಡಿದ ನಿವಾಸಿ, ನಹೀಂ, ನಾವುಗಳು ಈವರಗೆ ನೆಹರೂನಗರದಲ್ಲಿರುವ ಟಿಎಪಿಸಿಎಂಎಸ್ ಸೊಸೈಟಿಯ ನ್ಯಾಯಬೆಲೆ ಅಂಗಡಿಯಲ್ಲಿ ರೇಷನ್ ಪಡೆಯುತ್ತಿದ್ದೆವು. ಇದೀಗ ಪಟ್ಟಣದ ಚನ್ನೇಗೌಡರ ಬೀದಿಯಲ್ಲಿರುವ ನ್ಯಾಯಬೆಲೆ ಅಂಗಡಿ ಮಾಲೀಕ ಮಂಜುನಾಥಶೆಟ್ಟಿ ಹೊಸನಗರಕ್ಕೆ ಆಗಮಿಸಿ ಅವಿದ್ಯಾವಂತರಿರುವ ಮನೆಗೆ ತೆರಳಿ ಹೊಸನಗರದಲ್ಲಿಯೆ ನ್ಯಾಯಬೆಲೆ ಅಂಗಡಿ ಆರಂಭಿಸಿ ರೇಷನ್ ಅನ್ನು ಮನೆ ಬಳಿಯೆ ಸಿಗುವಂತೆ ಮಾಡುತ್ತೇನೆಂದು ಹೇಳಿ ಮನೆಯವರ ಹೆಬ್ಬೆಟ್ಟು ಪಡೆದು ಹೋಗಿದ್ದಾರೆ. ನೆಹರೂನಗರದ ನ್ಯಾಯಬೆಲೆ ಅಂಗಡಿಯಲ್ಲಿ ರೇಷನ್ ತರಲು ಹೋದಾಗ, ನಿಮ್ಮ ಕಾರ್ಡುಗಳು ಚನ್ನೇಗೌಡರ ಬೀದಿ ನ್ಯಾಯಬೆಲೆ ಅಂಗಡಿಗೆ ಬದಲಾವಣೆ ಆಗಿದ್ದು, ಪಡಿತರ ಕೊಡಲು ಆಗುವುದಿಲ್ಲ ಎಂದು ತಿಳಿಸಿದ್ದಾರೆ.

ಕೂಲಿಕಾರ್ಮಿಕರಾದ ನಮಗೆ ತೊಂದರೆ ಆಗಿದ್ದು, ಹೊಸನಗರದಿಂದ ಒಂದೂವರೆ ಕಿ.ಮೀ.ದೂರದ ಚನ್ನೇಗೌಡರ ಬೀದಿಗೆ ಹೋಗಿಬರಲು ಸಾಧ್ಯವಿಲ್ಲ. ಹತ್ತಿರದ ನೆಹರೂನಗರಕ್ಕೆ ಬದಲಾವಣೆ ಮಾಡಿಕೊಡಬೇಕು ಹಾಗೂ ನಮಗೆ ಸುಳ್ಳುಹೇಳಿದ ಮಂಜುನಾಥಶೆಟ್ಟರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಜಯಕರ್ನಾಟಕ ಸಂಘಟನೆ ತಾಲೂಕು ಅಧ್ಯಕ್ಷ ಅರುಣಕುಮಾರ್ ಮಾತನಾಡಿ, ಹೊಸನಗರ ಬಡಾವಣೆಯಲ್ಲಿ 400 ಕ್ಕೂ ಹೆಚ್ಚು ಪಡಿತರ ಚೀಟಿ ಹೊಂದಿದ ನಿವಾಸಿಗಳು ಇದ್ದಾರೆ. ಇಲ್ಲಿ ಕೂಲಿಕಾರ್ಮಿಕರೆ ಹೆಚ್ಚಿದ್ದು, ಇವರುಗಳ ಮನೆಗೆ ಬಂದಿರುವ ಮಂಜುನಾಥಶೆಟ್ಟಿ, ಹೊಸನಗರದಲ್ಲ ಹೊಸದಾಗಿ ನ್ಯಾಯಬೆಲೆ ಅಂಗಡಿ ಆರಂಭಿಸಲಾಗುವುದು. ಇದಕ್ಕಾಗಿ ಹೆಬ್ಬೆಟ್ಟು ಕೊಡಬೇಕು ಎಂದು ಪಡಿತರ ಚೀಟಿಗಳನ್ನು ಪಡೆದಿದ್ದಾರೆ.

ಅಲ್ಲದೆ ಮುಂದಿನ ತಿಂಗಳಿನಿಂದ ಹೊಸನಗರಕ್ಕೆ ಬಂದು ಪಡಿತರ ನೀಡುವುದಾಗಿ ತೆರಳಿದ್ದಾರೆ. ಆಹಾರ ಇಲಾಖೆ ಅಧಿಕಾರಿಗಳಿಗೆ ತಿಳಿಸಿದಾಗ ತನಿಖೆ ಮಾಡುವುದಾಗಿ ತಿಳಿಸಿದ್ದರೂ ಈವರಗೆ ಕ್ರಮ ಕೈಗೊಂಡಿಲ್ಲ. ಇದೀಗ 85 ಪಡಿತರದಾರರಿಗೆ ಪಡಿತರ ಇಲ್ಲದಂತೆ ಆಗಿದೆ. ಈ ಬಗ್ಗೆ ತಹಸೀಲ್ದಾರ್ ಅವರು ತನಿಖೆ ನಡೆಸಿ ಮಂಜುನಾಥಶೆಟ್ಟಿ ಅವರ ನ್ಯಾಯಬೆಲೆ ಅಂಗಡಿ ರದ್ಧುಪಡಿಸಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಕಲಾ ಅವರು ಮಾತನಾಡಿ, ಹೊಸನಗರದಲ್ಲೆ ರೇಷನ್  ನೀಡುವುದಾಗಿ ತಿಳಿಸಿ ನಾವುಗಳು ಮನೆಯಲ್ಲಿ ಇಲ್ಲದೆ ಇದ್ದಾಗ ಮನೆಬಳಿಗೆ ಬಂದು ಮನೆಯಲ್ಲಿ ಇದ್ದ ಒಬ್ಬೊಬ್ಬರ ಹೆಬ್ಬೆಟ್ಟು ತೆಗೆದುಕೊಂಡು ಉಳಿದವರ ಹೆಬ್ಬೆಟ್ಟು ತೆಗೆದುಕೊಳ್ಳದೆ ತೆರಳಿದ್ದಾರೆ. ಇದೀಗ ನಮಗೆ ಪಡಿತರ ದೊರೆಯುತ್ತಿಲ್ಲ. ನಮಗೆ ಆಗಿರುವ ನಷ್ಟ ಯಾರು ಕೊಡುತ್ತಾರೆ. ಕೂಲಿಕಾರ್ಮಿಕರಾಗಿರುವ ನಮಗೆ ಈ ರೀತಿ ತೊಂದರೆ ಕೊಡುವುದು ಸರಿಯೆ? ಕೂಲಿ ಕೆಲಸ ಬಿಟ್ಟು ರೇಷನ್‌ಗಾಗಿ ಒಂದೂವರೆ ಕಿ.ಮೀ.ದೂರಕ್ಕೆ ಹೋಗಿಬರಲು ಆಗುವುದಿಲ್ಲ. ಮುಂಚಿನಂತೆ ನೆಹರೂನಗರದ ಟಿಎಪಿಸಿಎಂಎಸ್ ನ್ಯಾಯಬೆಲೆ ಅಂಗಡಿಯಲ್ಲೆ ರೇಷನ್ ಕೊಡುವ ವ್ಯವಸ್ಥೆ ಮಾಡಬೇಕೆಂದು ಮನವಿ ಮಾಡಿದರು. ಕ್ರಮ ಕೈಗೊಳ್ಳದಿದ್ದರೆ 85 ಜನರು ಸೇರಿ ತಹಸೀಲ್ದಾರ್ ಕಚೇರಿ ಎದಿರು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು. ಈ ಸಂದರ್ಭ ಶಾಂತಲಾ, ಮಂಜುಳಾ, ಪೊನ್ನಮ್ಮ, ಶಿಲ್ಪ, ಕಾಮಾಕ್ಷಮ್ಮ, ಸೀತಮ್ಮ, ಅಂಜಲಿ, ಶಾಂತ, ಅಂಬಿಕಾ, ಲಲಿತಾ, ಗೀತಾ, ಶಾಕೀರ್, ಶಹೀಂ ಇತರರು ಇದ್ದರು.

 

 

 

 

ಫ್ರೆಶ್ ನ್ಯೂಸ್

Latest Posts

Featured Videos