ರಾಮಮಂದಿರಕ್ಕೆ ಭೂಮಿ ಪೂಜೆ ಎಲ್ಲೆಲ್ಲೂ ರಾಮನ ಜಪ

ರಾಮಮಂದಿರಕ್ಕೆ ಭೂಮಿ ಪೂಜೆ ಎಲ್ಲೆಲ್ಲೂ ರಾಮನ ಜಪ

ಕಳೆದ ಒಂದು ವಾರದಿಂದ ಎಲ್ಲರ ಮನದಲ್ಲಿ ಇದ್ದದ್ದು ರಾಮ ಜಪ.. ಜೈ ಶ್ರೀರಾಮ್ ಮಂತ್ರ….ರಾಮ ಜೊತೆಯಲ್ಲಿದ್ದರೆ ಎಲ್ಲ ಕಷ್ಟ ದಾರದಂತೆ ಹಗುರ ಎಂಬುದು ನಮ್ಮ ಜನರಲ್ಲಿರುವ ನಂಬಿಕೆ. ಇಷ್ಟೊಂದು ಭಾವನಾತ್ಮಕ ನಂಟು ನಮ್ಮ ಭಾರತೀಯರಿಗೂ ಹಾಗೂ ಅಯೋಧ್ಯೆಯ ರಾಮಮಂದಿರಕ್ಕೂ..ಈ ನಿಮಿತ್ತ ರಾಜ್ಯ, ಜಿಲ್ಲೆ, ಗ್ರಾಮಗಳಲ್ಲಿ ರಾಮನ ಧ್ಯಾನವೇ. ಅಯೋಧ್ಯೆಯ ರಾಮಮಂದಿರ ಭೂಮಿ ಪೂಜೆಯನ್ನು ಇದ್ದಲ್ಲಿಯೇ ಜನರು ವೀಕ್ಷಿಸಿ ಖುಷಿ ಪಟ್ಟರು.

ಇಡೀ ದೇಶದ ಪ್ರತಿನಿಧಿಯಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದರು. ಶ್ರಾವಣ ಮಾಸ, ಕೃಷ್ಣಪಕ್ಷ, ಅಭಿಜಿನ್ ಮುಹೂರ್ತದಲ್ಲಿ 12.45ಕ್ಕೆ ಯಾವುದೇ ಅಡೆತಡೆಯಿಲ್ಲದೇ ಸಾಂಗವಾಗಿ ಪೂಜೆ ನೆರವೇರಿತು.

ಶಿಲಾನ್ಯಾಸದ ನೆನಪಿಗೆ ಪಾರಿಜಾತ ಗಿಡನೆಟ್ಟು ಮೋದಿ ಅವರು, 22.6 ಕೆಜಿ ತೂಕದ ನಂದಾ, ಭದ್ರಾ, ಜಯಾ, ರಿಕ್ಷಾ, ಪೂರ್ಣ ಎಂಬ ಐದು ಬೆಳ್ಳಿ ಇಟ್ಟಿಗೆಗಳನ್ನು ಪೂಜೆಗೆ ಇಡಲಾಗಿದೆ. ಇವಲ್ಲದೇ ಭೂಮಿ ಪೂಜೆಗೆ ಒಂಬತ್ತು ಇಟ್ಟಿಗೆಗಳನ್ನು ಇಡಲಾಗಿದೆ. ಇವುಗಳನ್ನು ವಿಶ್ವದಾದ್ಯಂತದ ಇರುವ ಭಗವಾನ್ ರಾವi ಭಕ್ತರು ಕಳುಹಿಸಿದ್ದು ಅಂತಹ 2 ಲಕ್ಷ 75 ಸಾವಿರ ಇಟ್ಟಿಗೆಗಳಿವೆ, ಅದರಲ್ಲಿ ‘ಜೈ ಶ್ರೀ ರಾಮ್’ ಕೆತ್ತನೆ ಇರುವ 100 ಇಟ್ಟಿಗೆಗಳನ್ನು ತೆಗೆದುಕೊಳ್ಳಲಾಗಿದೆ.

ಭೂಮಿ ಪೂಜೆಗೆ ನಿಗದಿಪಡಿಸಿದ್ದ ಸ್ಥಳದ ಪೂಜೆ ಮಾಡಿದ ಮೋದಿ ಅವರು ಸಮಸ್ತ ದೇಶದ ಪ್ರತಿನಿಧಿಯಾಗಿ ನರೇಂದ್ರ ಮೋದಿ ಹೆಸರಿನ ನಾನು ದೇಶದ ಪ್ರತಿನಿಧಯಾಗಿ ಪೂಜೆ ಮಾಡುತ್ತೇನೆ ಎಂದು ಸಂಕಲ್ಪ ಮಾಡಿ 2000 ಪುಣ್ಯಭೂಮಿಗಳ ಮಣ್ಣು ಹಾಗೂ 100ಕ್ಕೂ ಹೆಚ್ಚು ನದಿಗಳ ನೀರನ್ನು ಭೂಮಿಪೂಜೆಗೆ ಅರ್ಪಿಸಿ ನಮಸ್ಕರಿಸಿದ ಮೋದಿ ಅವರು ಪುರೋಹಿತರ ಮಂತ್ರಘೋಷಗಳ ಮಧ್ಯೆ ಭೂಮಿಪೂಜೆಯನ್ನು ಶಾಸ್ತ್ರೋಕ್ತವಾಗಿ ನೆರವೇರಿಸಿದರು. ಈ ಮೂಲಕ 28 ವರ್ಷಗಳ ವಿವಾದಕ್ಕೆ ತೆರೆಬಿದ್ದಂತಾಗಿದೆ.

ಈ ವೇಳೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಆರ್‍ಎಸ್ ರಾಷ್ಟ್ರೀಯ ಅಧ್ಯಕ್ಷ ಮೋಹನ್ ಭಾಗವತ್, ರಾಮ್‍ಮಂದಿರ ಟ್ರಸ್ಟ್‍ನ ಅಧ್ಯಕ್ಷ ನಿತ್ಯ ಗೋಪಾಲ್ ದಾಸ್ ಸೇರಿದಂತೆ 170 ಮಂದಿ ಈ ದಿವ್ಯ ಕ್ಷಣಕ್ಕೆ ಸಾಕ್ಷಿಯಾಗಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos