1 ಕೊಡಗಿನ ಚಳಿಯಲ್ಲಿ ಕೊಡಗು ಅಂದರೆ ಹಿತವಾದ ಪರಿಸರ ಕಣ್ಮುಂದೆ ಹಾದು ಹೋಗುತ್ತೆ. ಡಿಸೆಂಬರ್ ಜನವರಿ ಹೊತ್ತಲ್ಲಿ ಇಲ್ಲಿ ಕುಟು ಕುಟು ಚಳಿ. ಮದುವೆಯಾದ ಹೊಸತರಲ್ಲಿ ಬರುವ ಜಗಳ, ಮುನಿಸು ಎಲ್ಲ ಮರೆಯಾಗಿ ದಂಪತಿಗಳಲ್ಲಿ ಪ್ರೀತಿಯ ಚಿಗುರು ಬೆಳೆಯುವ ಟೈಮು. ಕೊಡಗಿನಲ್ಲಿ ಅನೇಕ ಹೋಂ ಸ್ಟೇಗಳು, ರೆಸಾರ್ಟ್ಗಳು ಇವೆ. ನಿಮ್ಮ ಆರ್ಥಿಕತೆಗೆ ತಕ್ಕದ್ದನ್ನು ಆರಿಸಬಹುದು. ಮಡಿಕೇರಿ ಸಿಟಿಯಲ್ಲಿ ರಾಜಾಸೀಟ್ನಂಥಾ ಜಾಗಗಳಿಗೆ ವಿಸಿಟ್ ಮಾಡಬಹುದು.
ಆದರೆ ಇಲ್ಲೆಲ್ಲ ಜನದಟ್ಟಣೆ ಹೆಚ್ಚು. ಹಾಗಾಗಿ ಜನ ಕಡಿಮೆ ಇರುವ ಸುಂಠಿಕೊಪ್ಪ, ವಿರಾಜಪೇಟೆಯ ಕಡೆ ಹೋಗಿ. ಇಲ್ಲಿ ನಿಮಗೆ ಬೇಕಾದ ಏಕಾಂತ ಸಿಗುತ್ತದೆ. ರಮಣೀಯವಾದ ಜಾಗಗಳೂ ಇವೆ. ಜನ ಸಂಚಾರ ಕಡಿಮೆ. ಕಾಫಿ ತೋಟಗಳು, ನದಿ ದಂಡೆಗಳ ಮೇಲೆ ಚೆಂದದ ಹೋಂ ಸ್ಟೇಗಳು ಇರುತ್ತವೆ. ರೀಸನೇಬಲ್ ದರಕ್ಕೆ ನಿಮಗೊಂದು ಆಹ್ಲಾದಕರ ಅನುಭವ ನೀಡುತ್ತವೆ. ಮಂಜು ಸುರಿವ ಬೆಳಗು, ದಿನವಿಡೀ ಎಳೆ ಬಿಸಿಲು, ಸಂಜೆಯಾದರೆ ಮತ್ತೆ ಆವರಿಸುವ ಬೆಳ್ಳನೆ ಪರದೆಯಂಥಾ ಮಂಜು.. ನವ ದಾಂಪತ್ಯದ ದಿನಗಳನ್ನು ಲೈಪ್ಟೈಮ್ ನೆನೆಸುವಂತೆ ಮಾಡುತ್ತವೆ.
2 ಹೊನ್ನೆಮರಡು ಹೊನ್ನೇಮರಡು ಶಿವಮೊಗ್ಗ ಜಿಲ್ಲೆಯ ಸಾಗರದಿಂದ 25 ಕಿಮಿ ದೂರದಲ್ಲಿರುವ ಪ್ರವಾಸಿ ತಾಣ. ಇದು ಶರಾವತಿ ನದಿಯ ದಡದಲ್ಲಿರುವ ಹಿನ್ನೀರು ಪ್ರದೇಶ. ಹೊನ್ನೇಮರಡು ನಿಸರ್ಗದ ಸುಂದರ ನೋಟವನ್ನು ನಿಮ್ಮ ಮುಂದೆ ಅನಾವರಣ ಗೊಳಿಸುತ್ತದೆ. ಶರಾವತಿ ನದಿಯ ನೀರಿಗೆ ಲಿಂಗನಮಕ್ಕಿಯಲ್ಲಿ ಕಟ್ಟಿರುವ ಅಣೆಕಟ್ಟೆಯು ಹೊನ್ನೇಮರಡು ಅಂತಹ ನಿಸರ್ಗ ಸಹಜ ಸೌಂದರ್ಯವನ್ನು ಸೃಷ್ಟಿ ಮಾಡಿದೆ. ಅತೀ ದೂರದವರೆಗೆ ಶುಭ್ರ ನೀರಿನ ನೋಟ ಯಾವುದೇ ರೀತಿಯ ಮಾಲಿನ್ಯಕ್ಕೆ ಅವಕಾಶವಿಲ್ಲದೆ ಪ್ರವಾಸಿಗರನ್ನು ಸೆಳೆಯುತ್ತದೆ.ತೆಪ್ಪದಲ್ಲಿ ಒಂದು ಸುತ್ತು ಹಾಕಿ, ನೀರಿನ ನಡುವೆ ಇರುವ ನಡುಗಡ್ಡೆಗಳಿಗೆ ಹೋಗಿಬಂದರೆ ಆ ಪ್ರವಾಸದ ರುಚಿಯ ನೆನಪು ಸಾಕಷ್ಟು ದಿನ ಕಾಡುತ್ತಲೇ ಇರುತ್ತೆ.
ಇನ್ನೂ ನವ ದಂಪತಿಗಳಿಬ್ಬರೂ ಪ್ರಕೃತಿಪ್ರಿಯರಾಗಿದ್ದರೆ ಈ ಜಾಗ ನಿಮಗೆ ಬಹಳ ಇಷ್ಟ ಆಗೋದ್ರಲ್ಲಿ ಡೌಟೇ ಇಲ್ಲ. ಇದೊಂದು ಹಿನ್ನೀರಿನ ಪ್ರದೇಶ. ಉತ್ತರ ಕನ್ನಡ ಜಿಲ್ಲೆ ಸಾಗರದ ಸಮೀಪ ಇದೆ. ಇಲ್ಲೇ ಕ್ಯಾಂಪಿಂಗ್ ಗೆ ಅವಕಾಶ ಇದೆ. ಅಡ್ವೆಂಚರ್ ಎಂಬ ಸಂಸ್ಥೆ ಪ್ರಕೃತಿ ಪ್ರೇಮಿಗಳಿಗೋಸ್ಕರವೇ ಇದನ್ನು ನಿರ್ವಹಿಸುತ್ತಿದೆ.
ದಟ್ಟವಾದ ಕಾಡು, ಹಿನ್ನೀರು, ಪ್ರಕೃತಿಯ ಮರ್ಮರ, ಎಲ್ಲಕ್ಕಿಂತ ಮುಖ್ಯವಾಗಿ ಒಂದು ಗಾಢವಾದ ಮೌನ.. ನೀವಿಬ್ಬರೂ ಒಬ್ಬರನ್ನೊಬ್ಬರು ಅರಿಯಲು ಸಹಾಯ ಮಾಡುತ್ತದೆ. ಹಿನ್ನೀರಿನಲ್ಲಿ ಅನೇಕ ಸಾಹಸ ಕ್ರೀಡೆಗಳನ್ನು ಆಡಬಹುದು. ಕೈ ಕೈ ಹಿಡಿದು ಹಿನ್ನೀರಿನ ದಂಡೆಯುದ್ದಕ್ಕೂ ಹೆಜ್ಜೆ ಹಾಕಬಹುದು. ಇಲ್ಲೇ ಕ್ಯಾಂಪ್ ಮಾಡೋದಾದ್ರೆ ಮೂರು ವಾರ ಮೊದಲೇ ಅಡ್ವೆಂಚರ್ ಸಂಸ್ಥೆಗೆ ಕರೆ ಮಾಡಿ ಬುಕ್ ಮಾಡಬೇಕು.