ನೈಜ ಘಟನಾಧಾರಿತ ಚಿತ್ರವನ್ನು ತೆರೆಗೆ ತರಲು ಕಿಚ್ಚನ ತಯಾರಿ

ನೈಜ ಘಟನಾಧಾರಿತ ಚಿತ್ರವನ್ನು ತೆರೆಗೆ ತರಲು ಕಿಚ್ಚನ ತಯಾರಿ

ಬೆಂಗಳೂರು, ಡಿ. 12: ಕನ್ನಡ ಚಿತ್ರರಂಗದಲ್ಲಿ ಸಾಲು ಸಾಲು ಹಿಟ್ ಗಳನ್ನು ಕೊಟ್ಟ ಬಳಿಕ ಕಿಚ್ಚ ಸುದೀಪ್ ಇದೀಗ ಡೈರೆಕ್ಟರ್ ಕ್ಯಾಪ್ ಹಾಕಲು ಮನಸ್ಸು ಮಾಡಿದ್ದಾರೆ. ‘ಮೈ ಆಟೋಗ್ರಾಫ್’, ‘ನಂ.73 ಶಾಂತಿ ನಿವಾಸ’, ‘ವೀರ ಮದಕರಿ’, ‘ಜಸ್ಟ್ ಮಾತ್ ಮಾತಲ್ಲಿ’, ‘ಕೆಂಪೇಗೌಡ’, ‘ಮಾಣಿಕ್ಯ’ ಚಿತ್ರಗಳನ್ನು ನಿರ್ದೇಶನ ಮಾಡಿರುವ ಸುದೀಪ್ ಇದೀಗ ಒಂದು ಹೊಸ ಪ್ರಯೋಗಕ್ಕೆ ಕೈ ಹಾಕಲಿದ್ದಾರೆ. ಫ್ಯಾಂಟಸಿ ಮತ್ತು ನೈಜ ಘಟನಾಧಾರಿತ ಚಿತ್ರವನ್ನು ತೆರೆಗೆ ತರಲು ‘ಅಭಿನಯ ಚಕ್ರವರ್ತಿ’ ಸುದೀಪ್ ಸಕಲ ತಯಾರಿ ಮಾಡಿಕೊಂಡಿದ್ದಾರೆ. ಚಿತ್ರದಲ್ಲಿ ಇರುವ ಒಂದು ಬಹುಮುಖ್ಯ ಪಾತ್ರಕ್ಕೆ ಧೂಮ್ ವಿಲನ್ ಜಾನ್ ಅಬ್ರಹಾಂ ರನ್ನ ಕರೆ ತರಲು ಸುದೀಪ್ ಮುಂದಾಗಿದ್ದಾರೆ.

ತಮ್ಮ ನಿರ್ದೇಶನದ ಚಿತ್ರದ ಬಗ್ಗೆ ಸುದೀಪ್ ಮಾತು ”ನಿರ್ದೇಶನ ಮಾಡಲು ಪ್ಲಾನ್ ಮಾಡುತ್ತಿದ್ದೇನೆ. ಇತಿಹಾಸದ ನೈಜ ಘಟನೆಗಳು ಮತ್ತು ಫ್ಯಾಂಟಸಿ.. ಎರಡನ್ನೂ ಮಿಕ್ಸ್ ಮಾಡಿ ಒಂದು ಸಿನಿಮಾ ಮಾಡುವ ಯೋಚನೆ ಇದೆ. ಆ ಚಿತ್ರದಲ್ಲಿ ನಟನೆ ಜೊತೆಗೆ ನಿರ್ದೇಶನವೂ ಮಾಡುತ್ತೇನೆ” ಎಂದು ಸಂದರ್ಶನವೊಂದರಲ್ಲಿ ನಟ ಸುದೀಪ್ ಹೇಳಿದ್ದಾರೆ.

ಜಾನ್ ಅಬ್ರಹಾಂ ಪರ್ಫೆಕ್ಟ್ ಆಗಿ ಸೂಟ್ ಆಗುತ್ತಾರೆ ”ಸಿನಿಮಾದಲ್ಲಿ ಇರುವ ಒಂದು ಪಾತ್ರ ಬಹು ಮುಖ್ಯವಾಗಿದೆ. ಅದಕ್ಕೆ ಬಹುಶಃ ಜಾನ್ ಅಬ್ರಹಾಂ ರನ್ನ ಕರೆ ತರುವ ಬಗ್ಗೆ ಮಾತುಕತೆ ನಡೆಸಬೇಕಿದೆ. ಆ ಪಾತ್ರಕ್ಕೆ ಜಾನ್ ಅಬ್ರಹಾಂ ಪರ್ಫೆಕ್ಟ್ ಆಗಿ ಸೂಟ್ ಆಗುತ್ತಾರೆ. ಆ ಪಾತ್ರವನ್ನು ಬರೆಯುವಾಗ ಜಾನ್ ಅಬ್ರಹಾಂ ನನ್ನ ತಲೆಯಲ್ಲಿ ಇದ್ದರು” ಎಂದಿದ್ದಾರೆ ಕಿಚ್ಚ ಸುದೀಪ್.

ಹಿಂದಿ ಮಾರ್ಕೆಟ್ ಗಾಗಿ ಹೀಗೆ ಮಾಡುತ್ತಿಲ್ಲ ”ಜಾನ್ ಅಬ್ರಹಾಂಗೆ ಈ ಕಥೆ ಮತ್ತು ಪಾತ್ರದ ಬಗ್ಗೆ ಹೇಳಿದರೆ, ಖಂಡಿತ ಅವರಿಗೆ ಇಷ್ಟ ಆಗುತ್ತೆ ಎಂಬ ನಂಬಿಕೆ ನನಗೆ ಇದೆ. ತೆರೆಮೇಲೆ ಜಾನ್ ಅಬ್ರಹಾಂ ತುಂಬಾ ಚೆನ್ನಾಗಿ ಕಾಣ್ತಾರೆ. ಹಿಂದಿ ಮಾರ್ಕೆಟ್ ಗಾಗಿ ನಾನು ಜಾನ್ ಅಬ್ರಹಾಂ ರನ್ನು ಬಳಸಿಕೊಳ್ಳುತ್ತಿಲ್ಲ. ಆ ಪಾತ್ರಕ್ಕೆ ಅವರ ಅವಶ್ಯಕತೆ ಇದೆ” ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ ಸುದೀಪ್.

ನಟನೆಯಲ್ಲಿ ಸುದೀಪ್ ಬಿಜಿ ‘ಮಾಣಿಕ್ಯ’ ಚಿತ್ರದ ಬಳಿಕ ಸುದೀಪ್ ಯಾವುದೇ ಚಿತ್ರವನ್ನು ನಿರ್ದೇಶನ ಮಾಡಿಲ್ಲ. 5 ವರ್ಷಗಳ ಗ್ಯಾಪ್ ಬಳಿಕ ಸುದೀಪ್ ನಿರ್ದೇಶನದ ಕಡೆ ಮುಖ ಮಾಡಿದ್ದಾರೆ. ಸದ್ಯ ‘ದಬಾಂಗ್-3’ ಚಿತ್ರ ಪ್ರಚಾರ ಕಾರ್ಯಕ್ರಮಗಳಲ್ಲಿ ಬಿಜಿಯಾಗಿರುವ ಸುದೀಪ್ ಕೈಯಲ್ಲಿ ‘ಕೋಟಿಗೊಬ್ಬ-3’, ‘ಬಿಲ್ಲಾ ರಂಗ ಬಾಷಾ’ ಚಿತ್ರಗಳಿವೆ. ಅದು ಮುಗಿದ ಬಳಿಕ ಸುದೀಪ್ ಡೈರೆಕ್ಟರ್ ಕ್ಯಾಪ್ ತೊಡುವ ಸಾಧ್ಯತೆ ಇದೆ.

 

ಫ್ರೆಶ್ ನ್ಯೂಸ್

Latest Posts

Featured Videos