ಪಾಳುಬಿದ್ದಿರುವ ಡಾ.ಅಂಬೇಡ್ಕರ್ ಸಮುಧಾಯ ಭವನ

ಪಾಳುಬಿದ್ದಿರುವ ಡಾ.ಅಂಬೇಡ್ಕರ್ ಸಮುಧಾಯ ಭವನ

ಬೇಲೂರು, ನ. 25: ಅರೇಹಳ್ಳಿ ಹೋಬಳಿ ಕೋಗೋಡು ಗ್ರಾಮದಲ್ಲಿ ಸಮಾಜಕಲ್ಯಾಣ ಇಲಾಖೆಯಿಂದ ನಿರ್ಮಿಸುತ್ತಿರುವ ಡಾ.ಅಂಬೇಡ್ಕರ್ ಸಮುದಾಯ ಭವನ ಅನುದಾನ ಕೊರತೆಯಿಂದ ನೆನೆಗುದಿಗೆ ಬಿದ್ದಿದೆ.

ಆರ್‌ಸಿಸಿ ವರಗೆ ಗೋಡೆ ಎದ್ದಿದ್ದು ಪಾಳುಬಿದ್ದಿರುವ ಸಮುಧಾಯ ಭವನದ ಕಟ್ಟಡದ ಸುತ್ತಮುತ್ತ ಗಿಡಗಂಟೆಗಳು ಬೆಳೆದಿವೆ. ಜಾನುವಾರುಗಳ ವಾಸಸ್ಥಾನವಾಗಿದೆ. ಕೆಲವು ಸಂದರ್ಭ ಮಲಮೂತ್ರ ವಿಸರ್ಜನೆಗೂ ಇದನ್ನು ಬಳಸಿಕೊಳ್ಳಲಾಗುತ್ತಿದೆ ಎಂಬ ದೂರೂ ಇದೆ.

ವೈ.ಎನ್.ರುದ್ರೇಶಗೌಡರು ಶಾಸಕರಾಗಿದ್ದ ಅವಧಿಯಲ್ಲಿ ಅರೇಹಳ್ಳಿ ಹೋಬಳಿ ಚೀಕನಹಳ್ಳಿ ಗ್ರಾ.ಪಂ.ಗೆ ಸೇರಿದ ಸ್ಥಳದಲ್ಲಿ ಪರಿಶಿಷ್ಟಜಾತಿ ವರ್ಗದವರ ವಿಶೇಷ ಅನುದಾಯ ಯೋಜನೆಯಡಿ 8 ಲಕ್ಷರೂ. ಯೋಜನಾ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದ್ದ ಸಮುದಾಯ ಭವನದ ಕಟ್ಟಡ ನಿರ್ಮಾಣವು ಆರ್‌ಸಿಸಿ ವರಗೆ ಆಗಿದ್ದರೂ ನಂತರ ಅನುದಾನದ ಕೊರತೆಯಿಂದ ಸ್ಥಗಿತಗೊಂಡಿದೆ.

ಹಂತ ಹಂತವಾಗಿ ಅನುದಾನ ನೀಡುವ ಯೋಜನೆಯಡಿ ಆರಂಭಗೊಂಡ ಭವನದ ನಿರ್ಮಾಣದ ಆರಂಭದಲ್ಲಿ ತಳಪಾಯಕ್ಕೆಂದು 50 ಸಾವಿರ ರೂ. ನೀಡಲಾಗಿತ್ತು. ನಂತರದಲ್ಲಿ ಗೋಡೆನಿರ್ಮಾಣಕ್ಕೆ ಹಂತ ಹಂತವಾಗಿ 3 ಲಕ್ಷ ರೂ.ವರಗೆ ಪಾವತಿಸಲಾಗಿದೆ. ಆನಂತರ ಅನುದಾನ ಬಾರದೆ ಕಟ್ಟಡ ನಿರ್ಮಾಣ ಕಾರ್ಯ ಸ್ಥಗಿತಗೊಂಡಿತೆಂಬುದು ಸ್ಥಳೀಯರ ಹೇಳಿಕೆ.

ಇದೀಗ ಹಾಲಿ ಶಾಸಕ ಕೆ.ಎಸ್.ಲಿಂಗೇಶ್ ಅವರು ಮನಸ್ಸು ಮಾಡಿದರೆ, ಸಮುದಾಯ ಭವನ ಪೂರ್ಣಗೊಳ್ಳುವುದಕ್ಕೆ ಅಭ್ಯಂತರವಿಲ್ಲ. ಸಮಾಜಕಲ್ಯಾಣ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಶಾಸಕರೊಂದಿಗೆ ಚರ್ಚಿಸಿ ಉಳಿಕೆ ಅನುದಾನವನ್ನು ಕೊಡಿಸಿದರೆ ಭವನ ಪೂರ್ಣಗೊಳ್ಳುತ್ತದೆ ಎನ್ನುತ್ತಾರೆ ಗ್ರಾಮಸ್ಥರಾದ ಭರತ್ ಅವರು.

ಪಾಳುಬಿದ್ದಿರುವ ಸಮುದಾಯ ಭವನ ಪೂರ್ಣಪ್ರಮಾಣದಲ್ಲಿ ನಿರ್ಮಾಣಗೊಳ್ಳುವಂತೆ ಸಮಾಜಕಲ್ಯಾಣಾಧಿಕಾರಿಗಳು ಪ್ರಯತ್ನಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಎಂಜಿನಿಯರ್ ಹೇಳಿಕೆ

ಸಮುದಾಯ ನಿರ್ಮಾಣಕ್ಕೆ ಈವರಗೆ 3 ಲಕ್ಷರೂ. ಮಾತ್ರ ಅನುದಾನ ಬಿಡುಗಡೆಯಾಗಿದ್ದು, ಅನುದಾನದ ಕೊರತೆಯಿಂದ ಕಾಮಗಾರಿ ಸ್ಥಗಿತಗೊಂಡಿದೆ. ಈಗಲೂ ಸಹ ಶಾಸಕರ, ಸಂಸದರ ಅನುದಾನ ದೊರೆತರೆ ಭವನ ನಿರ್ಮಾಣಕಾರ್ಯ ಪೂರ್ಣವಾಗಲಿದೆ ಎಂದು ವರುಣ್, ಎಂಜಿನಿಯರ್ ಅವರು ತಿಳಿಸಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos