ಬೆಂಗಳೂರು: ಕಾಂಗ್ರೆಸ್ ಸರ್ಕಾರವನ್ನು ಅಭದ್ರಗೊಳಿಸಿ, ಹಾಗೂ ನನಗೆ ಕಪ್ಪು ಮಸಿ ಬಳಿಯಲು ಬಿಜೆಪಿ ಜೆಡಿಎಸ್ ನಡೆಸುತ್ತಿರುವ ಪ್ರಯತ್ನಕ್ಕೆ ಸೋಲು ಖಚಿತ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಉಚ್ಛ ನ್ಯಾಯಾಲಯದ ಆದೇಶ ಹೊರಬಂದ ನಂತರ ಪತ್ರಿಕಾ ಗೋಷ್ಠಿ ನಡೆಸಿ, ಮಾತನಾಡಿದ ಅವರು, ಕಾನೂನು ತಜ್ಞರೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದರು. ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ, ಬಿಎನ್ ಎಸ್ ಎಸ್ ಪ್ರಕಾರ 218 ಹಾಗೂ ಪಿಸಿ ಕಾಯ್ದೆ19ರಂತೆ ತನಿಖೆಗೆ ಅನುಮತಿ ನೀಡುವುದನ್ನು ತಿರಸ್ಕರಿಸಿ, ಪಿಸಿ ಕಾಯ್ದೆಯ 17 ಎ ಪ್ರಕಾರ ತನಿಖೆಗೆ ಉಚ್ಛನ್ಯಾಯಾಲಯ ಆದೇಶ ನೀಡಿದೆ. ಈ ತೀರ್ಪಿನ ಮೇಲೆ ಕಾನೂನು ಹೋರಾಟದ ಬಗ್ಗೆ ಕಾನೂನು ತಜ್ಞರೊಂದಿಗೆ ಚರ್ಚೆ ಮಾಡಿ, ಮುಂದಿನ ಕ್ರಮದ ಬಗ್ಗೆ ತೀರ್ಮಾನ ಮಾಡಲಾಗುವುದು ಎಂದರು. ಇದನ್ನೂ ಓದಿ: ರಾಜಕೀಯ ಜೀವನದುದ್ದಕ್ಕೂ ಸೇಡು, ಸಂಚುಗಾರರನ್ನ ನೋಡಿದ್ದೇನೆ: ಸಿಎಂ
ಬಿಜೆಪಿ ಜೆಡಿಎಸ್ ನ ಪಿತೂರಿಗೆ ಹೆದರುವುದಿಲ್ಲ
ಬಿಜೆಪಿ ಜೆಡಿಎಸ್ ನ ಪಿತೂರಿಗೆ ನಾನು ಎಂದೂ ಹೆದರುವುದಿಲ್ಲ. ಬಿಜೆಪಿ ಜೆಡಿಎಸ್ ಸಂಚು, ರಾಜಭವನ ದುರುಪಯೋಗ ಹಾಗೂ ದುರ್ಬಳಕೆಗೆ ನಾನು ಹೆದರುವುದಿಲ್ಲ. ರಾಜ್ಯದ ಜನ, ಪಕ್ಷದ ಹೈಕಮಾಂಡ್, ಶಾಸಕರು, ಸಚಿವರು, ಕಾರ್ಯಕರ್ತರು ನನ್ನೊಂದಿಗಿದ್ದಾರೆ. ಕಾನೂನು ಹೋರಾಟಕ್ಕೆ ಹೈಕಮಾಂಡ್ ಸಹಕಾರ ನೀಡಲಿದೆ. ನರೆಂದ್ರ ಮೋದಿಯವರ ಬಿಜೆಪಿ ಸರ್ಕಾರ , ಕೇವಲ ನನ್ನ ಮೇಲಷ್ಟೇ ಅಲ್ಲ , ಇಡೀ ದೇಶದ ವಿರೋಧಪಕ್ಷಗಳ ವಿರುದ್ಧ ಮೇಲೆ ಸೇಡಿನ ರಾಜಕೀಯ ಮಾಡುತ್ತಿದ್ದಾರೆ. ಮಾಡುತ್ತಿದ್ದಾರೆ ಎಂದರು.
ಆಪರೇಷನ್ ಕಮಲದ ಪ್ರಯತ್ನ ವಿಫಲ
ಬಿಜೆಪಿ ಹಾಗೂ ಜೆಡಿಎಸ್ ನವರು ಸ್ವಂತ ಶಕ್ತಿಯ ಮೇಲೆ ಅಧಿಕಾರಕ್ಕೆ ಬಂದಿಲ್ಲ. ವಿಧಾನಸಭೆ ಚುನಾವಣೆಯಲ್ಲಿಯೂ ಸೋತಿದ್ದಾರೆ. ಅವರು ಹಣಬಲದಿಂದ, ಆಪರೇಷನ್ ಕಮಲ ಮಾಡಿ ಹಿಂಬಾಗಿಲಿನಿಂದ ಅಧಿಕಾರಕ್ಕೆ ಬಂದರೇ ಹೊರತು, ಜನರ ಆಶೀರ್ವಾದದೊಂದಿಗೆ ಎಂದಿಗೂ ಬಿಜೆಪಿ-ಜೆಡಿಎಸ್ ಅಧಿಕಾರಕ್ಕೆ ಬಂದಿಲ್ಲ. ವಿಧಾನಸಭಾ ಚುನಾವಣೆಯಲ್ಲಿ 136 ಸ್ಥಾನ ಗೆದ್ದಿರುವ ಕಾಂಗ್ರೆಸ್ ಪಕ್ಷ ಬಂದಿದ್ದರಿಂದ ಆಪರೇಷನ್ ಕಮಲ ಮಾಡಲು ಅವರಿಗೆ ಸಾಧ್ಯವಾಗಲಿಲ್ಲ. ದುಡ್ಡನ್ನು ಕೊಟ್ಟು ಶಾಸಕರನ್ನು ಖರೀದಿಸುವ ಪ್ರಯತ್ನ ಮಡಿದರು. ನಮ್ಮ ಯಾವ ಶಾಸಕರೂ ದುಡ್ಡಿನ ಹಿಂದೆ ಹೋಗದ ಕಾರಣ, ಅವರ ಪ್ರಯತ್ನ ವಿಫಲವಾಯಿತು ಎಂದರು.