ತುಮಕೂರಿಗೆ ಮೋದಿ, ಪೊಲೀಸ್ ಸರ್ಪಗಾವಲು ಸಂಚಾರ ಮಾರ್ಗ ಬದಲು

ತುಮಕೂರಿಗೆ ಮೋದಿ, ಪೊಲೀಸ್ ಸರ್ಪಗಾವಲು ಸಂಚಾರ ಮಾರ್ಗ ಬದಲು

ತುಮಕೂರು, ಜ. 01: ಪ್ರಧಾನಿ ನರೇಂದ್ರಮೋದಿ ತುಮಕೂರಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ಸಮಾರಂಭ ನಡೆಯುವ ಸ್ಥಳ ಪರಿಶೀಲನೆ ನಡೆಸಿ, ಅಧಿಕಾರಿಗಳ ಜತೆ ಸಭೆ ನಡೆಸಿದರು.

ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ವೇದಿಕೆ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರಿಗೆ ಮಾಹಿತಿ ನೀಡಿದರು. ಜನಪ್ರತಿನಿಧಿಗಳು, ಅಧಿಕಾರಿಗಳ ಜತೆ ಸಭೆ ನಡೆಸಿದ್ದು ಸೂಚನೆಗಳನ್ನು ನೀಡಿದ್ದೇನೆ. ಐತಿಹಾಸಿಕ ಕಾರ್ಯಕ್ರಮದಲ್ಲಿ 1.50 ಲಕ್ಷ ಜನ ಭಾಗವಹಿಸುವ ನಿರೀಕ್ಷೆ ಇದ್ದು ಎಲ್ಲ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

ಮೋದಿ ಅವರು ಸಿದ್ಧಗಂಗಾ ಮಠಕ್ಕೆ ಮಧ್ಯಾಹ್ನ 2.15ಕ್ಕೆ ಬರಲಿದ್ದು ಡಾ.ಶಿವಕುಮಾರ ಸ್ವಾಮೀಜಿ ಗದ್ದುಗೆ ದರ್ಶನ ಪಡೆದು ವಿದ್ಯಾರ್ಥಿಗಳ ಜತೆ ಸಂವಾದ ನಡೆಸಲಿದ್ದಾರೆ. 3.30 ರಿಂದ 5 ರವರೆಗೆ ಜೂನಿಯರ್ ಕಾಲೇಜು ಮೈದಾನದಲ್ಲಿ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಲಿದ್ದಾರೆ ಎಂದರು.

ವಸ್ತು ಸಂಗ್ರಹಾಲಯಕ್ಕೆ ಶಂಕುಸ್ಥಾಪನೆ

ಸಿದ್ಧಗಂಗಾ ಮಠದಲ್ಲಿ ಡಾ.ಶಿವಕುಮಾರ ಸ್ವಾಮೀಜಿ ಅವರಿಗೆ ಸಂಬಂಧಿಸಿದಂತೆ ವಸ್ತು ಸಂಗ್ರಹಾಲಯ ನಿರ್ಮಾಣಕ್ಕೆ ಶ್ರೀಮಠ ಮುಂದಾಗಿದ್ದು ಕಟ್ಟಡ ಶಂಕುಸ್ಥಾಪನೆಯನ್ನು ಪ್ರಧಾನಿ ಮೋದಿ ಜ.2ರಂದು ನೆರವೇರಿಸಲಿದ್ದಾರೆ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ತಿಳಿಸಿದರು. ಮಠದ ಖಾಸಗಿ ಕಾರ್ಯಕ್ರಮದಲ್ಲಿ ಆಯ್ದ ಗಣ್ಯರು ಮಾತ್ರ ಭಾಗವಹಿಸಲಿದ್ದು ಮಕ್ಕಳೊಂದಿಗೆ ಪ್ರಧಾನಿ ಮೋದಿ ಸಂವಾದ ನಡೆಸಲಿದ್ದಾರೆ ಎಂದರು.

ಭದ್ರತೆಗೆ 3 ಸಾವಿರ ಪೊಲೀಸರು

ಕೃಷಿ ಸಮ್ಮಾನ್ ಯೋಜನೆ 2ನೇ ಹಂತದ ಲೋಕಾರ್ಪಣೆ ಸಮಾರಂಭದಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಭದ್ರತೆಗಾಗಿ ೩ ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ.

ಇಂದು ಮಧ್ಯಾಹ್ನ 2.15ಕ್ಕೆ ತುಮಕೂರಿನ ವಿಶ್ವವಿದ್ಯಾಲಯ ಹೆಲಿಪ್ಯಾಡ್‌ಗೆ ಬಂದಿಳಿಯುವ ಮೋದಿ ಮೊದಲಿಗೆ ಸಿದ್ದಗಂಗಾಮಠಕ್ಕೆ ಭೇಟಿ ನೀಡುವರು. ಅಲ್ಲಿಂದ ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಆಯೋಜಿಸಿರುವ ಕೃಷಿ ಸಮ್ಮಾನ್ ಹಾಗೂ ಕೃಷಿ ಕರ್ಮಣ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸುವರು. ಈ ಕಾರ್ಯಕ್ರಮ ಮಧ್ಯಾಹ್ನ 3.30 ರಿಂದ ಸಂಜೆ 5 ಗಂಟೆವರೆಗೆ ನಡೆಯಲಿದೆ. ನಂತರ ವಿವಿ ಹೆಲಿಪ್ಯಾಡ್‌ಗೆ ಮರಳಿ ಬೆಂಗಳೂರಿನತ್ತ ವಾಯುಮಾರ್ಗದಲ್ಲಿ ತೆರಳುವರು.

ಸಿದ್ದಗಂಗಾ ಶ್ರೀಗಳಿಗೆ ಬಾರತ ರತ್ನಕ್ಕೆ ಒತ್ತಾಯ

ಅಕ್ಷರ ಮತ್ತು ಅನ್ನದಾಸೋಹಿ,ಕಾಯಕ ಯೋಗಿ ಲಿಂಗೈಕ್ಯ ಡಾ.ಶ್ರೀ ಶಿವಕುಮಾರ ಸ್ವಾಮಿಗಳಿಗೆ ಮರಣೋತ್ತರ ಭಾರತ ರತ್ನ ಪ್ರಶಸ್ತಿ ನೀಡುವಂತೆ ಜಿಲ್ಲೆಯ ಎಲ್ಲೆಡೆಯಿಂದ ಒತ್ತಾಯ ಕೇಳಿ ಬರುತ್ತಿದ್ದು, ಮುಖ್ಯಮಂತ್ರಿ ಯಡಿಯೂರಪ್ಪ ಅವರು ಪ್ರಧಾನಿಯವರಿಗೆ ಮನವಿ ನೀಡುವಂತೆ ಜಿಲ್ಲೆಯ ಬುದ್ದಿ ಜೀವಿಗಳ ಒತ್ತಾಯವಾಗಿದೆ. ಈ ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಶ್ರೀಗಳಿಗೆ ಭಾರತ ರತ್ನ ನೀಡುವಂತೆ ಪತ್ರ ಬರೆದು ಒತ್ತಾಯಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಅಗತ್ಯ ಕ್ರಮ

ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‌ಕುಮಾರ್ ಮನವಿ ಮಾಡಿ ರಾಷ್ಟ್ರ ಮಟ್ಟದ ಕಾರ್ಯಕ್ರಮ ಜಿಲ್ಲೆಗೆ ಹೆಮ್ಮೆಯಾಗಿದ್ದು ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದರು. ದೇಶದ ಪ್ರಗತಿಪರ ರೈತರಿಗೆ ‘ಕೃಷಿ ಕರ್ಮಣಿ’ ಪ್ರಶಸ್ತಿ ಪ್ರದಾನ ಹಾಗೂ ಕೃಷಿ ಸಮ್ಮಾನ್ 4ನೇ ಕಂತು ಪಾವತಿ ಯೋಜನೆಗೆ ಪ್ರಧಾನಮಂತ್ರಿಗಳು ಚಾಲನೆ ನೀಡಲಿದ್ದು ರೈತರು ಅಪಾರ ಸಂಖ್ಯೆಯಲ್ಲಿ ಭಾಗವಹಿಸುವ ಹಿನ್ನೆಲೆಯಲ್ಲಿ ಎಲ್ಲ ಅಗತ್ಯಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಸಂಚಾರ ಮಾರ್ಗ ಬದಲಾವಣೆ

ಜ.2ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಆಗಮನದ ಹಿನ್ನೆಲೆಯಲ್ಲಿ ತುಮಕೂರಿನ ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರದಲ್ಲಿ ಮಾರ್ಗ ಬದಲಾವಣೆ ಮತ್ತು ಬಸ್ ಹಾಗೂ ಇತರೆ ಭಾರಿ ವಾಹನಗಳ ನಿಲುಗಡೆ ಹಾಗೂ ಸಮಾರಂಭಕ್ಕೆ ಬರುವ ಲಘು ವಾಹನಗಳ ನಿಲುಗಡೆಗೆ ಪೊಲೀಸರು ಕೆಲವು ಸೂಚನೆಗಳನ್ನು ನೀಡಿದ್ದು ಅದನ್ನು ಪಾಲಿಸಲು ಮನವಿ ಮಾಡಿದ್ದಾರೆ.

ರಿಂಗ್‌ರೋಡ್‌ನಿಂದ ಜೆ.ಸಿ.ರಸ್ತೆ, ಮಂಡಿಪೇಟೆ ರಸ್ತೆ, ಜನರಲ್ ಕಾರಿಯಪ್ಪ ರಸ್ತೆ, ಗಂಗೋತ್ರಿ ರಸ್ತೆ, ಎಸ್‌ಐಟಿ ಮುಖ್ಯರಸ್ತೆ, ಎಸ್‌ಎಸ್ ಪುರಂ ಮುಖ್ಯರಸ್ತೆಯಿಂದ ಉಪ್ಪಾರಹಳ್ಳಿ ಪ್ಲೈಒವರ್ ವರೆಗೆ, ಮಿರ್ಜಿ ಪೆಟ್ರೋಲ್ ಬಂಕ್‌ನಿಂದ ರೋಟಿಘರ್, ಗೆದ್ದಲಹಳ್ಳಿಯಿಂದ ಉಪ್ಪಾರಹಳ್ಳಿ ಪ್ಲೈಒವರ್ ವರೆಗೆ ಸಾರ್ವಜನಿಕ ವಾಹನ ನಿಲುಗಡೆ ನಿಷೇಧಿಸಲಾಗಿದೆ. ಬಿ.ಎಚ್.ರಸ್ತೆಯಲ್ಲಿ ವಾಹನಗಳ ಸಂಚಾರ ನಿರ್ಭಂಧಿಸಲಾಗಿದ್ದು ಬೆಂಗಳೂರು ಕಡೆಯಿಂದ ಬರುವ ವಾಹನಗಳು ರಿಂಗ್‌ರಸ್ತೆ ಮೂಲಕ ನಗರ ದಾಟಬಹುದು, ಗುಬ್ಬಿ ಕಡೆಯಿಂದ ಬರುವ ವಾಹನಗಳು ಮಂಡಿಪೇಟೆ ರಸ್ತೆ ಮೂಲಕ ರಾಷ್ಟ್ರೀಯ ಹೆದ್ದಾರಿ ಸಂಪರ್ಕ ಸಾಧಿಸಲು ಸೂಚಿಸಿದೆ.

 

ಫ್ರೆಶ್ ನ್ಯೂಸ್

Latest Posts

Featured Videos