ಮೈಸೂರು: ರಾಜ್ಯ ಸರ್ಕಾರ ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರವನ್ನು ರಚಿಸಿದ್ದು, ಇದಕ್ಕೆ ರಾಜಮಾತೆ ಪ್ರಮೋದಾದೇವಿಯವರು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದರು. ಆ.22 ರಂದು ತಡೆಯಾಜ್ಞೆ ತೆರವುಗೊಂಡಿದೆ. ನ್ಯಾಯಾಲಯದ ತೀರ್ಮಾನವಾದಂತೆ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನ್ಯಾಯಾಲಯ ತಡೆಯಾಜ್ಞೆ ತೆರವುಗೊಳಿಸಿದ ಬಳಿಕ ಪ್ರಾಧಿಕಾರದ ಮೊದಲ ಸಭೆ ಕರೆಯಲಾಗಿದೆ ಎಂದು ತಿಳಿಸಿದರು.
ರಾಜಮಾತೆ ಪ್ರಮೋದಾದೇವಿಯವರು ಹಾಗೂ ಸಂಸದ ಯದುವೀರ್ ಅವರು ಸಭೆ ನಡೆಸುವುದು ಕಾನೂನುಬಾಹಿರ ಎಂದು ಆಡಳಿತ ಮಂಡಳಿ ಕಾರ್ಯದರ್ಶಿಗಳಿಗೆ ಪತ್ರ ಬರೆದಿರುವ ಬಗ್ಗೆ ಮಾತನಾಡಿ ಹಿಂದೆಯೂ ಆಡಳಿತ ಮಂಡಳಿ ಇತ್ತು. ಹಿಂದೆ ಸದಸ್ಯರನ್ನು, ಅಧ್ಯಕ್ಷರನ್ನು ಸರ್ಕಾರ ನೇಮಿಸುತ್ತಿತ್ತು. ಸರ್ಕಾರದ ಅಧೀನದಲ್ಲಿಯೇ ಇತ್ತು ಎಂದರು.
ಕೋವಿಡ್ ಭ್ರಷ್ಟಾಚಾರ ಕುರಿತ ವರದಿ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಕ್ರಮ
ಕೋವಿಡ್ ಸಂದರ್ಭದಲ್ಲಿ ಆಗಿರುವ ಭ್ರಷ್ಟಾಚಾರ ಕುರಿತ ವರದಿ ಸಲ್ಲಿಕೆಯಾಗಿದ್ದು ಈ ಬಗ್ಗೆ ಗುರುವಾರ ಸಚಿವ ಸಂಪುಟ ಸಭೆ ಕರೆಯಲಾಗಿದೆ. ಅಂದು ವರದಿ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು. ಇದನ್ನೂ ಓದಿ: ಮೊದಲ ಸಭೆಯ ನಿರ್ಣಯಗಳನ್ನು ಚಾಚೂ ತಪ್ಪದೆ, ಗುಣಮಟ್ಟದಿಂದ ನಿರ್ವಹಿಸಿ: ಸಿಎಂ
ರಾಜಕೀಯ ಉದ್ದೇಶದಿಂದ ವರದಿ ತರಿಸಲಾಗಿದೆ ಎಂದು ಸಂಸದ ಸುಧಾಕರ್ ಹೇಳಿಕೆ ನೀಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಏಕೆ ಮುಟ್ಟಿ ನೋಡಿಕೊಳ್ಳುತ್ತಾರೆ ಎಂದು ಮುಖ್ಯಮಂತ್ರಿಗಳು ಪ್ರಶ್ನಿಸಿದರು.
ವರದಿಯಲ್ಲಿ ಏನಿದೆ ಎಂದು ನನಗೆ ತಿಳಿದಿಲ್ಲ. ತಪ್ಪು ಮಾಡಿರುವುದರಿಂದ ಚಡಪಡಿಸುತ್ತಿದ್ದಾರೆ. ಸುಳ್ಳು ವರದಿ ತರಸಿಕೊಂಡಿದ್ದಾರೆ ಎಂದು ಹೇಳಿಕೆ ನೀಡಲು ವರದಿ ಬಹಿರಂಗವಾಗಿಲ್ಲ. ಆದರೂ ಈ ರೀತಿ ಹೇಳಿಕೆ ನೀಡುತ್ತಾರೆ ಎಂದರೆ ಮನಸ್ಥಿತಿ ಏನಾಗಿದೆ ತಿಳಿಯುತ್ತದೆ ಎಂದರು .
ಏಳು ಸಾವಿರ ಕೋಟಿ ರೂಪಾಯಿ ಭ್ರಷ್ಟಾಚಾರ ಆಗಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿ ವರದಿ ಬಗ್ಗೆ ನನಗೆ ತಿಳಿದಿಲ್ಲ, ಸಚಿವ ಸಂಪುಟದಲ್ಲಿ ಚರ್ಚಿಸಿ ತೀರ್ಮಾನ ಮಾಡಲಾಗುವುದು ಎಂದರು.