ಬೆಂಗಳೂರು: ನಾನು ರಾಜಕೀಯಕ್ಕೆ ಬರಲು ಮಾರ್ಗರೇಟ್ ಆಳ್ವಾ ಅವರೇ ಸ್ಫೂರ್ತಿ. ಮಾರ್ಗರೇಟ್ ಆಳ್ವಾ ಅವರು ನನಗೆ ಅವಕಾಶ ಕೊಡಲಿಲ್ಲ ಅಂದರೆ ನಾನು ರಾಜಕೀಯವಾಗಿ ಬೆಳೆಯಲು ಸಾಧ್ಯವಿರಲಿಲ್ಲ. ಬೂತ್ ಏಜೆಂಟ್ ಆಗಿ ಕೆಲಸ ಮಾಡಿರುವೆ, ನನ್ನನ್ನು ಗುರುತಿಸಿದ್ದು ಮಾರ್ಗರೇಟ್ ಆಳ್ವಾ. ನನ್ನ ಎಲ್ಲಾ ಶ್ರೇಯಸ್ಸು ಪಕ್ಷದ ಮುಖಂಡರಿಗೆ, ಕಾರ್ಯಕರ್ತರಿಗೆ ಸಲ್ಲುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ.
ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಇಂದು (ಸೋಮವಾರ ಜೂನ್ 02) ರಂದು ಕಾರ್ಯಕರ್ತರಿಂದ ಅಹವಾಲು ಸ್ವೀಕರಿಸಿ ಮಾತನಾಡಿದ ಅವರು, 25 ವರ್ಷಗಳ ಹಿಂದೆ ಪಕ್ಷದ ಕಚೇರಿಗೆ ಮೊದಲ ಬಾರಿಗೆ ಸಾಮಾನ್ಯ ಕಾರ್ಯಕರ್ತೆಯಾಗಿ ಭೇಟಿ ನೀಡಿದ್ದು, ನನ್ನ ಮನಸ್ಸಿನಲ್ಲಿ ಇನ್ನು ಹಚ್ಚಹಸಿರಾಗಿ ನೆನಪಿದೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷದ ಕಚೇರಿ ಕಾರ್ಯಕರ್ತರ ಪಾಲಿಗೆ ದೇವಾಲಯ ಇದ್ದಂತೆ. ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಪಕ್ಷ, ಸಿದ್ದರಾಮಯ್ಯ ನೇತೃತ್ವದಲ್ಲಿ ಸರ್ಕಾರ ಬಲಿಷ್ಠವಾಗಿದೆ ಎಂದರು. ಇದನ್ನೂ ಓದಿ: ರಾಜ್ಯದ ಹಿತರಕ್ಷಣೆಗೆ ಕೈ ಜೋಡಿಸುವಂತೆ ಕೇಂದ್ರ ಸಚಿವರು, ಸಂಸದರಿಗೆ ಡಿಸಿಎಂ ಮನವಿ
ಸಾಮಾನ್ಯ ಕಾರ್ಯಕರ್ತೆಯಾಗಿ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡೆ. ಇಂದು ಇಡೀ ಕ್ಯಾಬಿನೆಟ್ ನಲ್ಲಿ ಒಬ್ಬಳೇ ಮಹಿಳಾ ಮಂತ್ರಿ ಆಗಿರುವೆ. 2 ಬಾರಿ ಚುನಾವಣೆಯಲ್ಲಿ ಸೋತರೂ ಮತ್ತೆ ನನಗೆ ಚುನಾವಣೆಯಲ್ಲಿ ನಿಲ್ಲಲು ಅವಕಾಶ ಮಾಡಿಕೊಟ್ಟ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಋಣಿಯಾಗಿರುವೆ. ಕಾಂಗ್ರೆಸ್ ಪಕ್ಷಕ್ಕೆ ಯಾರೇ ಬಂದರೂ ಪಕ್ಷದ ಸಿದ್ದಾಂತದ ಮೇಲೆ ನಂಬಿಕೆ ಇಟ್ಟುಕೊಂಡು ಬರಬೇಕು ಎಂದು ಸಚಿವರು ಹೇಳಿದರು.