ಬೆಂಗಳೂರು: ಕುಮಾರಸ್ವಾಮಿ ಅವರು ರಾಜಕಾರಣ, ಬೇರೆ ಮಾತು ಎಲ್ಲವನ್ನು ಬಿಟ್ಟು ರಾಜ್ಯದಲ್ಲಿ 50 ಸಾವಿರದಿಂದ 1 ಲಕ್ಷ ಜನರಿಗೆ ಉದ್ಯೋಗ ನೀಡುವಂತಹ ಕೆಲಸ ಮಾಡಲಿ. ಕಾಂಗ್ರೆಸ್ ಸರ್ಕಾರ ಅವರಿಗೆ ಬೇಕಾದಂತಹ ಸಹಕಾರ ನೀಡುತ್ತದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.
ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿಗೆ ಮೋದಿ ಅವರು ಉಕ್ಕು, ಕೈಗಾರಿಕೆ ಎನ್ನುವ ದೊಡ್ಡ ಹಾಗೂ ಉತ್ತಮ ಖಾತೆ ಕೊಟ್ಟಿದ್ದಾರೆ. ಅವರಿಗೆ ಸಿಕ್ಕಿರುವ ಒಳ್ಳೇ ಅವಕಾಶ ಬಳಸಿಕೊಳ್ಳಲಿ ಎಂದರು.
ಯೋಗಕ್ಕಿಂತ ಯೋಗಕ್ಷೇಮ ಮುಖ್ಯವಾದುದು. ಹಾಸನ, ಬೆಂಗಳೂರು, ಮಂಡ್ಯ, ಬೀದರ್, ಕಲಬುರ್ಗಿ ಸೇರಿದಂತೆ ಇತರೇ ಭಾಗಗಳಿಗೆ ಉತ್ತಮ ಕೆಲಸ ಮಾಡಿ, ಏನಾದರೂ ಸಾಕ್ಷಿ ಬಿಟ್ಟು ಹೋಗಲಿ. ರಾಜಕೀಯ ಇದ್ದಿದ್ದೇ… ಏಕೆ ಇಂತಹ ಅವಕಾಶವನ್ನು ಕಳೆದುಕೊಳ್ಳುತ್ತಾ ಇದ್ದಾರೆ ಎಂದು ವ್ಯಂಗ್ಯವಾಡಿದರು.
ನಿಮಗೆ ರಾಜಕೀಯ ಬಿಟ್ಟು ಬೇರೆ ವಿಚಾರಗಳು ಕಾಣಿಸುವುದಿಲ್ಲವೇ?. ಜನರು ನಮ್ಮ ಮೇಲೆ ವಿಶ್ವಾಸವನ್ನಿಟ್ಟು ಅಧಿಕಾರ ಕೊಟ್ಟಿದ್ದಾರೆ, ಅವರ ಆಶೋತ್ತರಗಳನ್ನು ಈಡೇರಿಸಬೇಕು ಎಂದರು.
ನಾವೆಲ್ಲಾ ಪ್ರತಿದಿನ ರಾಜಕೀಯ ಮಾಡುತ್ತಲೇ ಇರುತ್ತೇವೆ. ಅಭಿವೃದ್ದಿಯಿದ್ದರೇ ತಾನೇ ರಾಜಕೀಯ. ಐದು ಗ್ಯಾರಂಟಿಗಳನ್ನು ಈಡೇರಿಸಿದ್ದೇವೆ. ಎತ್ತಿನಹೊಳೆ ಕೆಲಸ ಮುಗಿಸಬೇಕು, ಪ್ರಣಾಳಿಕೆಗಳಲ್ಲಿ ನೀಡಿರುವ ಭರವಸೆಗಳನ್ನು ಈಡೇರಿಸಬೇಕು. ಪ್ರತಿದಿನ ಸಮಯ ಓಡುತ್ತಿರುತ್ತದೆ ಎಂದರು.
ನಾವು 136 ಕಾಂಗ್ರೆಸ್ ಶಾಸಕರು ಒಟ್ಟಿಗೆ ಇದ್ದೇವೆ. ಇಲ್ಲಿ ಚರ್ಚೆ ಮಾಡುವಾಗ ಅಧಿಕಾರಿಗಳು ಬೇಕಾಗಿಲ್ಲ. ನಾಯಕರ ಹಿಂದೆ ಅಧಿಕಾರಿಗಳು ಬೇಕಾಗಿಲ್ಲ. ನಾವು ಆಲೋಚಿಸುತ್ತೇವೆ, ಚರ್ಚೆ ಮಾಡುತ್ತೇವೆ, ಅಭಿಪ್ರಾಯ ಕೇಳುತ್ತೇವೆ. ಮಾತನಾಡುವವರು ಹಾಗೂ ತೀರ್ಮಾನಿಸುವವರು ಒಬ್ಬರೇ ” ಎಂದು ಹೇಳಿದರು.