ಬಿಜೆಪಿ ಬಿಟ್ಟು ಜೆಡಿಎಸ್ ಸೇರಿದ ನಾಯಕರು

ಬಿಜೆಪಿ ಬಿಟ್ಟು ಜೆಡಿಎಸ್ ಸೇರಿದ ನಾಯಕರು

ತುಮಕೂರು: ಜಿಲ್ಲೆಯ ಶಿರಾ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಕಣದಲ್ಲಿ ಪ್ರಚಾರ ಜೋರಾಗಿದೆ. ನವೆಂಬರ್ ೩ರಂದು ನಡೆಯಲಿರುವ ಚುನಾವಣೆಗೆ ವಿವಿಧ ಪಕ್ಷಗಳು ಬಿರುಸಿನ ಪ್ರಚಾರವನ್ನು ನಡೆಸುತ್ತಿವೆ.
ಶಿರಾ ೨೦೧೮ರಲ್ಲಿ ಜೆಡಿಎಸ್ ಗೆದ್ದ ಕ್ಷೇತ್ರ. ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಬಿ. ಸತ್ಯನಾರಾಯಣ ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗಿದ್ದ ಟಿ. ಬಿ. ಜಯಚಂದ್ರ ಅವರನ್ನು ಸೋಲಿಸಿದ್ದರು. ಸತ್ಯಾನಾರಾಯಣ ಅವರ ಅಕಾಲಿಕ ಮರಣದಿಂದಾಗಿ ಉಪ ಚುನಾವಣೆ ಎದುರಾಗಿದೆ.
ಉಪ ಚುನಾವಣೆಗೆ ಜೆಡಿಎಸ್ ಬಿ. ಸತ್ಯನಾರಾಯಣ ಪತ್ನಿ ಅಮ್ಮಾಜಮ್ಮಗೆ ಟಿಕೆಟ್ ನೀಡಿದೆ. ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ, ಮಾಜಿ ಸಚಿವ ಎಚ್. ಡಿ. ರೇವಣ್ಣ, ಹಾಸನ ಸಂಸದ ಪ್ರಜ್ವಲ್ ರೇವಣ್ಣ, ತುಮಕೂರು ಗ್ರಾಮಾಂತರ ಶಾಸಕ ಡಿ. ಸಿ. ಗೌರಿ ಶಂಕರ್ ಕ್ಷೇತ್ರದಲ್ಲಿ ಪ್ರಚಾರ ನಡೆಸುತ್ತಿದ್ದಾರೆ.
ಶುಕ್ರವಾರ ಕ್ಷೇತ್ರದ ವ್ಯಾಪ್ತಿಯ ಕಳ್ಳಂಬೆಳ್ಳ ಹೋಬಳಿಯ ಸಿಬಿ ಗ್ರಾಮ ಪಂಚಾಯತಿ ಮಾಜಿ ಉಪಾಧ್ಯಕ್ಷರಾದ ರಮೇಶ್ ಜೆಡಿಎಸ್ ಪಕ್ಷದ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಬಿಜೆಪಿ ತೊರೆದು ಶಾಸಕ ಡಿ. ಸಿ. ಗೌರಿಶಂಕರ್ ನೇತೃತ್ವದಲ್ಲಿ ಜೆಡಿಎಸ್ ಸೇರ್ಪಡೆಗೊಂಡರು.
ನವೆಂಬರ್ ೩ರಂದು ನಡೆಯಲಿರುವ ಶಿರಾ ಕ್ಷೇತ್ರ ಉಪ ಚುನಾವಣೆಗೆ ಜೆಡಿಎಸ್‌ನಿಂದ ಅಮ್ಮಾಜಮ್ಮ, ಬಿಜೆಪಿಯಿಂದ ಡಾ. ರಾಜೇಶ್ ಗೌಡ ಮತ್ತು ಕಾಂಗ್ರೆಸ್‌ನಿಂದ ಟಿ. ಬಿ. ಜಯಚಂದ್ರ ಅಭ್ಯರ್ಥಿಗಳು.
ಟಿ. ಬಿ. ಜಯಚಂದ್ರ ಪರವಾಗಿ ಗುರುವಾರ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಚಾರ ನಡೆಸಿದರು. ಡಾ. ರಾಜೇಶ್ ಗೌಡ ಪರವಾಗಿ ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ, ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಪ್ರಚಾರ ನಡೆಸಿದ್ದಾರೆ.
೨೦೧೮ರ ಚುನಾವಣೆಯಲ್ಲಿ ಗೆದ್ದ ಕ್ಷೇತ್ರವನ್ನು ಉಳಿಸಿಕೊಳ್ಳಬೇಕು ಎಂದು ಜೆಡಿಎಸ್ ವರಿಷ್ಠ ಎಚ್. ಡಿ. ದೇವೇಗೌಡರು ತಂತ್ರ ಹಣೆದಿದ್ದಾರೆ. ಸ್ವತಃ ತಾವೇ ಪ್ರಚಾರದ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದಾರೆ.
ಕುಡೂರು ಕ್ಷೇತ್ರದ ಮಾಜಿ ಶಾಸಕ ವೈ. ಎಸ್. ವಿ. ದತ್ತಾ, ಚಿತ್ರದುರ್ಗ ಜಿಲ್ಲೆಯ ಜೆಡಿಎಸ್ ನಾಯಕ ವೀರೇಂದ್ರ ಪಪ್ಪಿ ಮುಂತಾದವರು ಕ್ಷೇತ್ರದಲ್ಲಿ ಪ್ರಚಾರದಲ್ಲಿ ಸಕ್ರಿಯರಾಗಿದ್ದಾರೆ. ನವೆಂಬರ್ ೧೦ರಂದು ಉಪ ಚುನಾವಣೆ ಫಲಿತಾಂಶ ಪ್ರಕಟವಾಗಲಿದೆ.

ಫ್ರೆಶ್ ನ್ಯೂಸ್

Latest Posts

Featured Videos