ಕೆಪಿಸಿಸಿ ಅಧ್ಯಕ್ಷ ಸ್ಥಾನ ಆಯ್ಕೆ ಕಸರತ್ತು

ಕೆಪಿಸಿಸಿ ಅಧ್ಯಕ್ಷ ಸ್ಥಾನ ಆಯ್ಕೆ ಕಸರತ್ತು

ಬೆಂಗಳೂರು, ಜ.16: ಕೆಪಿಸಿಸಿ ಅಧ್ಯಕ್ಷ ಗಾದಿಗೆ ಏರುವ ನಿರೀಕ್ಷೆಯಲ್ಲಿರುವ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಪಾಲಿಗೆ ಜಾರಿ ನಿರ್ದೇಶನಾಲಯ ಎಂಬ ‘ಭೂತ’ ಮುಳುವಾಗಿ ಪರಿಣಮಿಸುವ ಸಾಧ್ಯತೆ ಬಹುತೇಕ ಹೆಚ್ಚಾಗಿದೆ. ಅಕ್ರಮ ಹಣಕಾಸು ವರ್ಗಾವಣೆ ಆರೋಪದ ಅಡಿಯಲ್ಲಿ ಡಿಕೆಶಿ ವಿರುದ್ಧ ಇಡಿ ಪ್ರಕರಣ ದಾಖಲಿಸಿ ಬಂಧನಕ್ಕೆ ಒಳಪಡಿಸಿತ್ತು. 49 ದಿನಗಳ ಕಾಲ ತಿಹಾರ್ ಜೈಲಿನಲ್ಲಿದ್ದು ಬಿಡುಗಡೆಗೊಂಡರೂ ಇಡಿ ಬಲೆಯಿಂದ ಸಂಪೂರ್ಣವಾಗಿ ಇನ್ನೂ ಬಿಡುಗಡೆಗೊಂಡಿಲ್ಲ.

ಡಿಕೆಶಿ ಬಂಧನ ರಾಜಕೀಯ ಉದ್ದೇಶದಿಂದ ನಡೆದಿದೆ ಎಂದು ಕಾಂಗ್ರೆಸ್ ಆರೋಪಿಸಿದರೂ ಕೆಪಿಸಿಸಿ ಅಧ್ಯಕ್ಷ ಸ್ಥಾನ ಆಯ್ಕೆ ಸಂದರ್ಭದಲ್ಲಿ ಇಡಿ ಪ್ರಕರಣ ಹೈಕಮಾಂಡ್‌ ಮಟ್ಟದಲ್ಲಿ ಚರ್ಚೆ ನಡೆದಿದೆ. ಒಂದು ವೇಳೆ ಡಿಕೆಶಿಗೆ ಕೆಪಿಸಿಸಿ ಪಟ್ಟ ನೀಡಿದರೆ ಮುಂದಿನ ದಿನಗಳಲ್ಲಿ ಪಕ್ಷ ಮುಜುಗರ ಎದುರಿಸುವ ಸಾಧ್ಯತೆ ಇದೆ. ಪ್ರಕರಣದ ತನಿಖೆ ನಡೆಯುತ್ತಿರುವುದರಿಂದ ಪದೇ ಪದೇ ವಿಚಾರಣೆಗೂ ಹಾಜರಾಗಬೇಕಾಗುತ್ತದೆ.

ಪಕ್ಷಕ್ಕೆ ಇರುಸುಮುರುಸು ಉಂಟು ಮಾಡಲು ಈ ಸಂದರ್ಭವನ್ನು ಬಿಜೆಪಿ ಕೂಡಾ ಬಳಸಿಕೊಳ್ಳುವ ಸಾಧ್ಯತೆ ಇರುವುದರಿಂದ ಸದ್ಯಕ್ಕೆ ಅಧ್ಯಕ್ಷ ಪಟ್ಟ ನೀಡುವುದು ಬೇಡ ಎಂಬ ಅಭಿಪ್ರಾಯವನ್ನು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಜೊತೆಗಿನ ಚರ್ಚೆಯ ಸಂದರ್ಭದಲ್ಲಿ ಸಿದ್ದರಾಮಯ್ಯ ವ್ಯಕ್ತಪಡಿಸಿದ್ದಾರೆ ಎನ್ನುತ್ತಿವೆ ಮೂಲಗಳು.

ರಾಹುಲ್ ಗಾಂಧಿ ಜೊತೆಗಿನ ಮಾತುಕತೆ ಸಂದರ್ಭದಲ್ಲೂ ಇದೇ ಅಭಿಪ್ರಾಯವನ್ನು ಸಿದ್ದರಾಮಯ್ಯ ವ್ಯಕ್ತಪಡಿಸಿದ್ದಾರೆ ಎನ್ನಲಾಗುತ್ತಿದೆ. ಆದರೆ ಸೋನಿಯಾ ಗಾಂಧಿ ಈ ಕುರಿತಾಗಿ ಯಾವುದೇ ನಿರ್ಧಾರವನ್ನು ಇದುವರೆಗೂ ಕೈಗೊಂಡಿಲ್ಲ. ಡಿಕೆ ಶಿವಕುಮಾರ್ ಹಾಗೂ ಹಿರಿಯ ಕಾಂಗ್ರೆಸ್ ಮುಖಂಡರ ಜೊತೆಗೆ ಮಾತುಕತೆ ನಡೆಸಿ ಶುಕ್ರವಾರ ಅಥವಾ ಶನಿವಾರ ಕೆಪಿಸಿಸಿ ಸಾರಥಿಯನ್ನು ಘೋಷಣೆ ಮಾಡುವ ಸಾಧ್ಯತೆ ಇದೆ.

ಸದ್ಯ ಡಿಕೆ ಶಿವಕುಮಾರ್ ಹಾಗೂ ಎಂಬಿ ಪಾಟೀಲ್‌ ಇಬ್ಬರೂ ಅಧ್ಯಕ್ಷ ಸ್ಥಾನ ನಮಗೇ ಸಿಗುತ್ತದೆ ಎಂಬ ಭರವಸೆಯಲ್ಲಿದ್ದರೂ ಅಂತಿಮ ತೀರ್ಮಾನ ಹೈ ಕಮಾಂಡ್‌ ತೆಗೆದುಕೊಳ್ಳಲಿದೆ. ನಿರ್ಧಾರದಿಂದ ಪಕ್ಷದಲ್ಲಿ ಮತ್ತಷ್ಟು ಗೊಂದಲ ಸೃಷ್ಟಿಯಾಗದಂತೆ ನೋಡಿಕೊಳ್ಳಬೇಕು ಎಂದು ಹಿರಿಯ ಮುಖಂಡರಿಗೂ ಸೂಚನೆ ನೀಡಲಾಗಿದೆ ಎಂಬುವುದು ಮೂಲಗಳ ಮಾಹಿತಿ.

 

ಫ್ರೆಶ್ ನ್ಯೂಸ್

Latest Posts

Featured Videos