ಬೆಂಗಳೂರು: ಉಪಚುನಾವಣೆ ಸಮೀಪಿಸುತ್ತಿದ್ದಂತೆ ರಾಜ್ಯ ರಾಜಕೀಯದಲ್ಲಿ ಮೂರು ಪಕ್ಷಗಳ ನಡುವೆ ಟಿಕೆಟ್ಗಾಗಿ ಬಾರಿ ಪೈಪೋಟಿ ನಡೆದಿದ್ದು, ಅದರಲ್ಲೂ ಕೂಡ ಹೈ ವೋಲ್ಟೇಜ್ ಆಗಿ ಪರಿಣಮಿಸಿರುವ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಮಧ್ಯೆ ಈಗಾಗಲೇ ಹಲವಾರು ಬಾರಿ ವಾಕ್ ಸಮರ ನಡೆದಿದ್ದು, ಇದೀಗ ಬೈ ಎಲೆಕ್ಷನ್ ಸಂದರ್ಭದಲ್ಲಿ ಕೂಡ ಇಬ್ಬರ ಮಧ್ಯೆ ವಾಕ್ ಸಮರ ಜೋರಾಗಿಯೇ ನಡೆಯುತ್ತಿದೆ.
ಹೌದು, ಡಿಸಿಎಂ ಡಿಕೆ ಶಿವಕುಮಾರ್ ಅವರು ಇದೀಗ ಜೆಡಿಎಸ್ ಪಕ್ಷದ ಮೇಲೆ ಹರಿಹಾಯ್ದಿದ್ದಾರೆ.
ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ- ಜೆಡಿಎಸ್ ಅವರ ನಡುವೆ ಗೊಂದಲಗಳಿರುವ ಬಗ್ಗೆ ನನಗೆ ಗೊತ್ತಿಲ್ಲ. ಮಾಧ್ಯಮಗಳಲ್ಲಿ ವರದಿಯಾಗುತ್ತಿದೆ. ಚನ್ನಪಟ್ಟಣ ಸ್ವಾಭಾವಿಕವಾಗಿ ಜೆಡಿಎಸ್ ಕ್ಷೇತ್ರ. ಕುಮಾರಸ್ವಾಮಿ ಹಾಲಿ ಕ್ಷೇತ್ರ. ಆದರೆ ಅವರು ಬಿಜೆಪಿಗೆ ಬಿಟ್ಟುಕೊಟ್ಟಿರುವ ಬಗ್ಗೆ ಮಾಧ್ಯಮಗಳ ವರದಿ ಬರುತ್ತಿವೆ. ಈ ಕ್ಷೇತ್ರ ಬಿಟ್ಟುಕೊಟ್ಟರೆ ಅವರು ಪಕ್ಷದ ಅಸ್ಥಿತ್ವ ಕಳೆದುಕೊಂಡಂತಾಗುತ್ತದೆ. ಈಗಾಗಲೇ ಅವರ ಬಾಮೈದರನ್ನು ಬಿಜೆಪಿ ಚಿಹ್ನೆ ಅಡಿ ನಿಲ್ಲಿಸಿದ್ದಾರೆ. ಈಗ ಇದನ್ನೂ ಬಿಟ್ಟುಕೊಟ್ಟರೆ ಅವರು ಅಸ್ಥಿತ್ವ ಕಳೆದುಕೊಳ್ಳುತ್ತಾರೆ. ಇದು ಎಲ್ಲರಿಗೂ ಅರ್ಥವಾಗುವ ವಿಚಾರ. ಇದರಲ್ಲಿ ನಾವ್ಯಾಕೆ ಹಸ್ತಕ್ಷೇಪ ಮಾಡೋಣ? ಎಂದು ತಿಳಿಸಿದರು.
ಶೇ 80 ರಷ್ಟು ಕಾರ್ಯಕರ್ತರು ಸುರೇಶ್ ಅವರ ಸ್ಪರ್ಧೆಗೆ ಬೇಡಿಕೆ ಇಟ್ಟಿದ್ದಾರೆ. ಹೈಕಮಾಂಡ್ ಯಾರನ್ನು ಕಣಕ್ಕಿಳಿಸುತ್ತಾರೆ ಅವರ ಪರವಾಗಿ ಕೆಲಸ ಮಾಡಬೇಕು ಎಂದು ಕಾರ್ಯಕರ್ತರಿಗೆ ಸ್ಪಷ್ಟಪಡಿಸಿದ್ದೇನೆ. ಲೋಕಸಭೆ ಚುನಾವಣೆ ಸೋಲಿನ ಆಘಾತದಿಂದ ನಾವಿನ್ನೂ ಹೊರಗೆ ಬಂದಿಲ್ಲ. ಸುರೇಶ್ ಅಷ್ಟರ ಮಟ್ಟಿಗೆ ಕೆಲಸ ಮಾಡಿದ್ದಾರೆ. ಕಡಿಮೆ ಅಂತರದಲ್ಲಿ ಸೋತಿದ್ದರೆ ಒಂದು ಪಕ್ಷ ಸುಧಾರಿಸಿಕೊಳ್ಳಬಹುದಿತ್ತು. ಹೀಗಾಗಿ ನಾವು ಸೋಲನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ. ಸೋತ ಮಾತ್ರಕ್ಕೆ ಜನರ ಸೇವೆಯನ್ನು ಬಿಡಲು ಆಗುವುದಿಲ್ಲ ಎಂದು ತಿಳಿಸಿದರು.
ಸುರೇಶ್ ಹಗಲಿರುಳು ಕೆಲಸ ಮಾಡಿದ್ದರು. ಈಗ ನಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಗೆಲ್ಲಿಸುವ ವಿಶ್ವಾಸ ನಮಗಿದೆ ಎಂದರು.