ಉಡುಪಿ: ಇಂದಿನ ಆಧುನಿಕ ಜಗತ್ತಿಗೆ ಯೋಗ ಬೇಕೇ ಬೇಕು. ಯೋಗದಿಂದ ನಮ್ಮ ಮನಸ್ಸಿನ ಶಾಂತಿ ಸಮೃದ್ಧಿ ಜೊತೆಗೆ ಆರೋಗ್ಯವೂ ಕೂಡ ಸುಧಾರಿಸುತ್ತದೆ ಹಾಗಾಗಿ ಪ್ರತಿನಿತ್ಯ 30 ನಿಮಿಷಗಳ ಕಾಲ ವ್ಯಾಯಾಮ ಮಾಡಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಅಜ್ಜರಕಾಡುವಿನಲ್ಲಿರುವ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿಇಂದು (ಶನಿವಾರ ಜೂ. 21) ನಡೆದ 11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ಯೋಗದಿಂದ ಮಾತ್ರ ಮನಸ್ಸಿಗೆ ಉಲ್ಲಾಸ ಸಿಗುತ್ತದೆ ಎಂದರು.
ಇಡೀ ವಿಶ್ವವೇ ಭಾರತದ ಆರೋಗ್ಯ ಪದ್ಧತಿಯನ್ನು ಅಳವಡಿಸಿಕೊಂಡಿದೆ. ಪ್ರತಿಯೊಬ್ಬರು ಯೋಗವನ್ನು ನಿತ್ಯ ಪರಂಪರೆಯಾಗಿ ಅಳವಡಿಸಿಕೊಳ್ಳಬೇಕು, ಪ್ರತಿದಿನ ಕನಿಷ್ಠ 30 ನಿಮಿಷವಾದರೂ ಯೋಗ ಮಾಡಬೇಕು ಎಂದರು.
ನಾನು ಕಳೆದ 25 ವರ್ಷಗಳಿಂದ ಯೋಗಾಭ್ಯಾಸ ಮಾಡುತ್ತಿದ್ದೇನೆ. ನಾನು ದಿನಕ್ಕೆ 15 ಗಂಟೆ ಕೆಲಸ ಮಾಡುವ ಸಾಮರ್ಥ್ಯದ ಹಿಂದೆ ಯೋಗವಿದೆ. ಇದೇ ಜನವರಿ 14 ರಂದು ನನಗೆ ಅಪಘಾತ ಆಯಿತು, ಬೆನ್ನು ನೋವಿನಿಂದಾಗಿ ಇಂದು ಯೋಗ ಮಾಡಲು ಸಾಧ್ಯವಾಗಲಿಲ್ಲ ಎಂದು ಹೇಳಿದರು.
ನಾನು ವಾರಕ್ಕೆ ಐದು ದಿನ ಯೋಗ ಮಾಡುತ್ತೇನೆ. ಇವತ್ತಿನ ಆಧುನಿಕ ಜಗತ್ತಿನಲ್ಲಿ ಯೋಗ ಬೇಕೇ ಬೇಕು. ಪ್ರತಿ ದಿನ 25 ರಿಂದ 50 ಸೂರ್ಯ ನಮಸ್ಕಾರ ಮಾಡುತ್ತಿದ್ದೆ. ಭುಜಂಗಾಸನ, ವೀರಭದ್ರಾಸನ, ಪ್ರಾಣಾಯಾಮ ನನ್ನ ಆರೋಗ್ಯದ ಗುಟ್ಟು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಉಡುಪಿ ಜಿಲ್ಲೆ ಎಸ್ಎಸ್ ಎಲ್ಸಿಯಲ್ಲಿ ಎರಡನೇ, ಪಿಯುಸಿಯಲ್ಲಿ ಮೊದಲ ಸ್ಥಾನ ಪಡೆದಿದ್ದು, ಶೈಕ್ಷಣಿಕವಾಗಿ ಜಿಲ್ಲೆ ತನ್ನ ಸಾಮರ್ಥ್ಯ ಹೆಚ್ಚಿಸಿಕೊಂಡಿದೆ. ದೇಶದ ಸಂಸ್ಕೃತಿ ಆಚಾರ, ವಿಚಾರವನ್ನು ಎಲ್ಲರೂ ಅಳವಡಿಸಿ ಕೊಳ್ಳಬೇಕು, ತಂದೆ ತಾಯಂದಿರು ನಮ್ಮ ಮಕ್ಕಳೇ ನಮಗೆ ಆಸ್ತಿ ಎನ್ನುತ್ತಾರೆ. ಮಕ್ಕಳು ಕೂಡ ನಮ್ಮ ತಂದೆ ತಾಯಿಯೇ ನಮ್ಮ ಆಸ್ತಿ ಎನ್ನುವಂತೆ ಆಗಲಿ ಎಂದು ಹೇಳಿದರು.
ಯೋಗವೆಂದರೆ ಕೇವಲ ವ್ಯಾಯಾಮ, ಪ್ರಾಣಾಯಾಮ ಮಾತ್ರ ಅಲ್ಲ, ಅದೊಂದು ಆರೋಗ್ಯಕರ ಜೀವನದ ವಿಧಾನ, ಯೋಗವಿದ್ದಲ್ಲಿ ರೋಗವಿಲ್ಲ, ಯೋಗವೇ ಭೋಗವಾದರೆ ಮನುಷ್ಯನ ಎಲ್ಲಾ ಚಟುವಟಿಕೆಗಳು ಸ್ವಾಭಿಮಾನದ ಸ್ವಾತಂತ್ರ್ಯವನ್ನು ಗಳಿಸುತ್ತದೆ. ನಮ್ಮ ಪ್ರಧಾನಿ ಮೋದಿ ಅವರು ಇಡೀ ವಿಶ್ವಕ್ಕೆ ಯೋಗದ ಮಹತ್ವದ ಬಗ್ಗೆ ಹೇಳಿಕೊಟ್ಟರು ಎಂದರು.