ಪುರಿ ಜಗನ್ನಾಥ ದೇವಾಲಯದಲ್ಲಿ ವಿಸ್ಮಯ

ಪುರಿ ಜಗನ್ನಾಥ ದೇವಾಲಯದಲ್ಲಿ ವಿಸ್ಮಯ

ಒರಿಸ್ಸಾ, ನ. 7 : ಭಾರತವು ಪ್ರಸಿದ್ಧ ತೀರ್ಥ ಕ್ಷೇತ್ರಗಳಿಗೆ ಹೆಸರುವಾಸಿ. ಇಲ್ಲಿರುವ ದೇವಾಲಯಗಳು ವಿಭಿನ್ನ ವಾಸ್ತುಶಿಲ್ಪಗಳು, ಕೆತ್ತನೆಗಳು ಹಾಗೂ ಪುರಾಣ ಇತಿಹಾಸಗಳಿಂದ ಕೂಡಿದ್ದು, ಜನರನ್ನು ತನ್ನೆಡೆಗೆ ಸುಲಭವಾಗಿ ಸೆಳೆದುಕೊಳ್ಳುವ ಶಕ್ತಿಯನ್ನು ಪಡೆದುಕೊಂಡಿದೆ. ಅದ್ಭುತ ಹಿನ್ನೆಲೆಯನ್ನು ಪಡೆದುಕೊಂಡಿರುವ ದೇವಾಲಯಗಳಲ್ಲಿ ಒರಿಸ್ಸಾದ ಪುರಿಯ ಜಗನ್ನಾಥ ದೇವಾಲಯವು ಒಂದು. ವಿಶಿಷ್ಟವಾದ ಹಿನ್ನೆಲೆ ಹಾಗೂ ದೈವ ಶಕ್ತಿಯನ್ನು ಹೊಂದಿರುವ ಈ ದೇವಾಲಯಕ್ಕೆ ಭಕ್ತ ಸಾಗರವೇ ಹರಿದು ಬರುತ್ತದೆ.
ಮರದಿಂದಲೇ ನಿರ್ಮಿಸಲಾಗಿರುವ ಈ ಅದ್ಭುತ ದೇವಾಲಯವು ಭಾರತದ ಚಾರ್ಧಾಮ್ ತೀರ್ಥಯಾತ್ರೆಯ ತಾಣಗಳಲ್ಲಿ ಒಂದು. ಇಲ್ಲಿ ನಡೆಯುವ ವಾರ್ಷಿಕ ರಥೋತ್ಸವ ಹಾಗೂ ರಥಯಾತ್ರೆ ಹೆಸರುವಾಸಿಯಾಗಿದೆ. ದೇವಾಲಯಕ್ಕೆ ಸಂಬಂಧಿಸಿದ ಕಥೆಯ ಪ್ರಕಾರ ಇಂದ್ರದ್ಯುಮ್ನ ಎಂಬ ರಾಜನಿಗೆ ಕನಸಿನಲ್ಲಿ ವಿಷ್ಣು ಕಾಣಿಸಿಕೊಂಡ ತರುವಾಯ ಇಂದ್ರದ್ಯುಮ್ನನು ಈ ದೇವಾಲಯವನ್ನು ಕಟ್ಟಿಸಿದ ಎನ್ನಲಾಗುತ್ತದೆ.
ಒಮ್ಮೆ ಇಂದ್ರದ್ಯುಮ್ನ ರಾಜನು ಸಮೀಪದಲ್ಲಿರುವ ಪವಿತ್ರವಾದ ನದಿಯ ಜಲವನ್ನು ಪ್ರೋಕ್ಷಣೆ ಮಾಡುತ್ತಿರುವ ಸಂದರ್ಭದಲ್ಲಿ ಕಬ್ಬಿಣದ ಸಲಾಕೆಯೊಂದು ತೇಲುತ್ತಿರುವುದನ್ನು ಕಂಡನು. ಆ ಸಲಾಕೆಯು ತನ್ನ ಹೃದಯ, ಅದು ಭೂಮಿಯ ಮೇಲೆ ಶಾಶ್ವತವಾಗಿ ಉಳಿಯುವಂತೆ ಮಾಡು ಎಂದು ವಿಷ್ಣು ಪಿಸುಮಾತಿನಲ್ಲಿ ನುಡಿದಂತೆ ಭಾಸವಾಯಿತು. ನಂತರ ಜಗನ್ನಾಥ ದೇವರ ಬಳಿ ಓಡಿ ಹೋಗಿ, ಎಚ್ಚರಿಕೆಯಿಂದ ಅದನ್ನು ಅಲ್ಲಿ ಇರಿಸಿದನು. ಅಂದಿನಿಂದ ರಾಜನು ಆ ಕಬ್ಬಿಣದ ಸಲಾಕೆಯನ್ನು ಯಾರಿಗೂ ಮುಟ್ಟಲು ಅವಕಾಶ ನೀಡಲಿಲ್ಲ.

ಇನ್ನೊಂದು ಕಥೆಯ ಪ್ರಕಾರ ಪಾಂಡವರು ಮಹಾಭಾರತ ಯುದ್ಧಾನಂತರ ಯಮರಾಜನ ತೀರ್ಥಯಾತ್ರೆಯನ್ನು ಪ್ರಾರಂಭಿಸಿದರು. ಆಗ ಸಪ್ತ ಋಷಿಗಳು ಮೋಕ್ಷ ಪ್ರಾಪ್ತಿಯಾಗಬೇಕೆಂದರೆ ಮೊದಲು ಚಾರ್ ಧಾಮ್ಗಳಿಗೆ ಭೇಟಿ ನೀಡಬೇಕು ಎಂದು ಸಲಹೆ ನೀಡಿದರು. ಆ ಸಂದರ್ಭದಲ್ಲಿ ಚಾರ್ ಧಾಮಗಳಲ್ಲಿ ಒಂದಾದ ಪುರಿಯ ಜಗನ್ನಾಥ್ ದೇವಾಲಯಕ್ಕೂ ಭೇಟಿ ನೀಡಿದ್ದರು ಎಂದು ಹೇಳಲಾಗುತ್ತದೆ.

ಫ್ರೆಶ್ ನ್ಯೂಸ್

Latest Posts

Featured Videos