ಮನೆ ಕಟ್ಟಿದ ಅಧಿಕಾರಿಗಳು

ಮನೆ ಕಟ್ಟಿದ ಅಧಿಕಾರಿಗಳು

ಚಿಕ್ಕಮಗಳೂರು:ಏ,6: ಬಡ ಕುಟುಂಬವೊಂದಕ್ಕೆ ದಿನ ಬಳಕೆಯ ಸಾಮಗ್ರಿಗಳನ್ನು ವಿತರಿಸಲು ಹೋದ ಕಳಸ ಗ್ರಾಮ ಪಂಚಾಯಿತಿ ಅಧಿಕಾರಿಗಳು ಅಲ್ಲಿಯ ಪರಿಸ್ಥಿತಿಯನ್ನು ನೋಡಿ ತಾತ್ಕಾಲಿಕ ಮನೆಯನ್ನೆ ಕಟ್ಟಿಕೊಟ್ಟ ಮಾನವೀಯ ಘಟನೆ ಅಬ್ಬುಗುಡಿಗೆಯಲ್ಲಿ ನಡೆದಿದೆ.

ನಾನಾ ಕಾರಣಗಳಿಂದ ಆಶ್ರಯ ವಂಚಿತರಾಗಿ ಮನೆ ಬಿಟ್ಟು ಪಟ್ಟಣದ ಬಸ್‌ ನಿಲ್ದಾಣ ಸೇರಿದಂತೆ, ಎಲ್ಲೆಂದರಲ್ಲಿ ವಾಸ್ತವ್ಯ ಹೂಡಿರುವ ನಿರ್ಗತಿಕರನ್ನು ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಕಳಸ ಗ್ರಾಮ ಪಂಚಾಯಿತಿಯವರು ಗುರುತಿಸಿ ಮೊದಲಿದ್ದ ಅವರವರ ಊರುಗಳಿಗೆ ತಲುಪಿಸುವ ಕಾರ್ಯ ಮಾಡುತ್ತಿದ್ದಾರೆ. ಈ ಸಂದರ್ಭ ಹಲವು ವರ್ಷಗಳಿಂದ ಮನೆ ಬಿಟ್ಟು ತಿರುಗಾಡುತ್ತಿದ್ದ ಅಬ್ಬುಗುಡಿಗೆಯ ವೃದ್ಧ ಈರಪ್ಪ ಅವರು ಪಿಡಿಒ ಕವೀಶ್‌, ಕಾರ್ಯದರ್ಶಿ ಸಂತೋಷ್‌ ಅವರ ಕಣ್ಣಿಗೆ ಬಿದ್ದಿದ್ದರು. ಕೂಡಲೇ ಅವರನ್ನು ಪಟ್ಟಣದಿಂದ ಕರೆದುಕೊಂಡು ಹೋಗಿ ಅವರ ಮನೆಯಲ್ಲಿಇರಿಸಿ ಅವರಿಗೆ ಬೇಕಾದ ದಿನಸಿ ಸಾಮಾಗ್ರಿಗಳನ್ನು ಕೊಡಲು ನಿರ್ಧರಿಸಿದರು.

 

ಅದರಂತೆ ಪಟ್ಟಣದಿಂದ ಅವರನ್ನು ಕರೆದುಕೊಂಡು ಅಗತ್ಯ ದಿನಸಿ ಸಾಮಗ್ರಿಗಳೊಂದಿಗೆ ಮನೆಗೆ ಹೋದಾಗ, ಎರಡು ಕಂಬಗಳನ್ನು ಹಾಕಿ ಇಂದೋ ನಾಳೆಯೋ ಬೀಳೋ ಸ್ಥಿತಿಯಲ್ಲಿದ್ದ ಗುಡಿಸಲು ಕಾಣಿಸಿತು. ವಾಸಕ್ಕೆ ಯೋಗ್ಯವೇ ಇಲ್ಲದ ಮನೆಯನ್ನು ಬದಲಾಯಿಸಲು ನಿರ್ಧರಿಸಿದ ಅಧಿಕಾರಿಗಳು ಪಂಚಾಯಿತಿ ಸಿಬ್ಬಂದಿಯನ್ನು ಕರೆಯಿಸಿ ಕೂಡಲೇ ಮನೆ ನಿರ್ಮಾಣಕ್ಕೆ ಇಳಿದರು. ಸಂಜೆಯ ಹೊತ್ತಿಗಾಗಲೇ ತಾತ್ಕಾಲಿಕ ಶೀಟ್‌ ಹಾಕಿದ ಮನೆ ನಿರ್ಮಿಸಿ, ಈರಪ್ಪ ಅವರಿಗೆ ಬೇಕಾದ ದಿನಸಿ ಸಾಮಾಗ್ರಿಗಳನ್ನು ನೀಡಿ, ಮನೆಯಲ್ಲೇ ಇರುವಂತೆ ಸೂಚಿಸಿ ಬಂದರು.

ಫ್ರೆಶ್ ನ್ಯೂಸ್

Latest Posts

Featured Videos