ಶ್ವೇತಪುರದ ಇತಿಹಾಸ ಬೆಳಗುತ್ತಿರುವ ಬಿಳಗಿ

ಶ್ವೇತಪುರದ ಇತಿಹಾಸ ಬೆಳಗುತ್ತಿರುವ ಬಿಳಗಿ

ಬಿಳಗಿ, ಜ. 23: ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಇಂದಿನ ಬಿಳಗಿ ವಿಜಯನಗರ ಅರಸರ ಕಾಲದಲ್ಲಿ “ಶ್ವೇತಪುರ”ಎಂಬ ಹೆಸರಿನಿಂದ ಗುರುತಿಸಲ್ಪಟ್ಟಿತ್ತು. ಅಂದು ಹೈವನಾಡಿನ ರಾಜಧಾನಿಯಾಗಿ ಮೆರೆದ ಬಿಳಗಿಯ ಸಂಸ್ಥಾನಕ್ಕೆ 500 ವರ್ಷಗಳ ಇತಿಹಾಸವಿದೆ. ಹೀಗಾಗಿಯೇ ಈಗಲೂ ಸಹಾ ಬಿಳಗಿಯ ಪ್ರತಿಯೊಂದು ಸ್ಥಳವೂ, ಇಲ್ಲಿಯ ಒಂದೊಂದು ಶಿಲೆಯಕಲ್ಲೂ ಓಂದೊಂದು ಇತಿಹಾಸವನ್ನು ಪ್ರತಿಧ್ವನಿಸುತ್ತಿದೆ.ಬಿಳಗಿ ಪಟ್ಟಣದಲ್ಲಿ ಒಂದಕ್ಕೊಂದು ಹೊಂದಿಕೊಂಡಂತೆ ಅತ್ಯಂತ ಸನಿಹದಲ್ಲಿ ಐದಾರು ದೇವಾಲಯಗಳು ಕಂಗೊಳಿಸುತ್ತಿವೆ. ಶ್ರೀ ಮಾರಿಕಾಂಬಾ ದೇವಾಲಯ, ಶ್ರೀ ದುರ್ಗಾಂಬಿಕಾ ದೇವಾಲಯ, ವಂದಾನೆ-ಬಾಳಗೋಡ ಶ್ರೀ ಸೀತಾರಾಮಚಂದ್ರ ದೇವಾಲಯ, ಬೇಡ್ಕಣಿ ಶ್ರೀ ಸೀತಾರಾಮಚಂದ್ರ ದೇವಾಲಯ ಸೇರಿದಂತೆ ಅನೇಕ ದೇವಾಲಯಗಳು ಇಲ್ಲಿವೆ. ಬಿಳಗಿಯ ಅನೇಕ ಕಟ್ಟಡಗಳು ಕಲಾಪ್ರಜ್ಞೆ, ಇತಿಹಾಸದ ಶ್ರೇಷ್ಠ ಪರಂಪರೆ ಸಾರುತ್ತಿವೆ. ಬಿಳಗಿಯ ರತ್ನಾತ್ರಯ ಬಸದಿ, ವಿರೂಪಾಕ್ಷ ದೇವಾಲಯ ಮುಂತಾದವುಗಳಲ್ಲಿ ಹಲವು ಶಿಲಾಶಾಸನಗಳು ಕಂಡುಬರುತ್ತಿದ್ದು, ಚರಿತ್ರೆಯ ಮೇಲೆ ಬೆಳಕುಚೆಲ್ಲುತ್ತಿವೆ. ವಿಜಯನಗರ ಸಾಮ್ರಾಜ್ಯದ ಮಾಂಡಲಿಕನಾಗಿದ್ದ ಅಂಡಣ್ಣ ಅವರ ವಂಶಸ್ಥರಿಂದ ಬಿಳಗಿಯ ಅನೇಕ ತಾಣಗಳು ನಿರ್ಮಾಣವಾಯಿತೆಂದು ತಿಳಿದುಬರುತ್ತದೆ. ಕ್ರಿ.ಶ.1570ರ ಆಜುಬಾಜಿನಲ್ಲಿ ಬಿಳಗಿಯನ್ನು ಆಳಿದ 3ನೇ ನರಸಿಂಹ ಅಥವಾ ರಂಗರಾಜನ ಕಾಲಾವಧಿಯಲ್ಲಿ ಇಲ್ಲಿಯ ಅತ್ಯಂತ ಆಕರ್ಷಕ ಗೋಲಬಾವಿ ನಿರ್ಮಾಣವಾಯಿತೆಂಬುದು ಹಿರಿಯರ ಅನಿಸಿಕೆ. ಕ್ರಿ.ಶ.1730ರಲ್ಲಿ ಬಿಳಗಿ ರಾಜ ಸೋಮಶೇಖರ ಅರಮನೆಯ ಭಾಗವಾಗಿ ಗೋಲಬಾವಿಯನ್ನು ನಿರ್ಮಿಸಿದ ಎಂತಲೂ ಹೇಳಲಾಗುತ್ತಿದೆ. ಕ್ರಿ.ಶ.1790ರಲ್ಲಿ ಶಾಂತವೀರ ರಾಯರು ಈ ಬಾವಿಯಿಂದ ಕಾರಂಜಿ ಪುಟಿಯುವಂತೆ ಮಾಡಲು ಯತ್ನಿಸಿದ್ದು ಐತಿಹಾಸಿಕ ದಾಖಲೆಗಳಿಂದ ತಿಳಿದುಬರುತ್ತಿದೆ. ಇಂದು ಗೋಲಬಾವಿಗೆ ಕಾಯಕಲ್ಪ ನೀಡಲಾಗಿದ್ದು ಆಕರ್ಷಕ ಪ್ರವಾಸಿ ತಾಣವಾಗುವ ಎಲ್ಲಾ ಲಕ್ಷಣಗಳನ್ನೂ ಹೊಂದಿದೆ. ಗೋಲಬಾವಿಯ ಮೇಲುಭಾಗದಲ್ಲಿ ಸಮತಟ್ಟು ಮಾಡಿ ಕೆಳಗೆ ಇಣುಕಿದರೆ ಅಪಾಯವಾಗದಂತೆ ತಡೆ ನಿರ್ಮಿಸಲಾಗಿದೆ. ಗೋಲಬಾವಿಯ ಒಳಗಡೆ ಸಹ ಇದೇರೀತಿಯ ತಡೆ ನಿರ್ಮಿಸಿದ್ದು ಮಕ್ಕಳು ಸಹ ಒಳಭಾಗಕ್ಕೆ ಹೋಗಿ ಗೋಲಬಾವಿಯ ಸೌಂದರ್ಯವನ್ನು ಸವಿಯುವಂತಾಗಿದೆ.ಪುರಾತನ ತಂತ್ರಜ್ಞಾನಕ್ಕೆ ಸಾಕ್ಷಿಯಾಗಿ ಗೋಲಬಾವಿ ನಿಂತಿದೆ. ರಾಜರ ಕಾಲದಲ್ಲಿ ನಿಸರ್ಗದತ್ತವಾದ ನೀರಿನ ಹರಿವಿನ ರಭಸವನ್ನು ಬಳಸಿಕೊಂಡು ಬೃಹದಾಕಾರದ ಶಿಲಾ ಕಾರಂಜಿಯಿAದ ನೀರು ಚಿಮ್ಮುವಂತೆ ಮಾಡಿದ್ದಕ್ಕೆ ಕುರುಹಾಗಿ ಆಕರ್ಷಕ ಕಾರಂಜಿ ಕಲ್ಲು ಇಲ್ಲಿ ಕಂಡುಬರುತ್ತಿದೆ. ಕುದುರೆಗೆ ನೀರು ಕುಡಿಸಲು ತಯಾರಿಸಿದ ಶಿಲೆಯಕಲ್ಲಿನ ನೀರಿನ ತೊಟ್ಟಿಯೂ ಇಲ್ಲಿದೆ. ಬಿಳಗಿಯ ರತ್ನತ್ರಯ ಬಸದಿಯನ್ನು ಬಿಳಗಿವಂಶದ 10ನೇ ರಾಜನಾಗಿದ್ದ ಇಮ್ಮಡಿ ಘಂಟೇAದ್ರ ಕ್ರಿ.ಶ.1588ರಲ್ಲಿ ನಿರ್ಮಿಸಿದ್ದು ಬಸದಿಯ ರಂಗಮಂಟಪ, ಚಂದ್ರಶಾಲೆ, ಮುನಿವಾಸದಂತಹ ಬಹುತೇಕ ಭಾಗವನ್ನು ಈತ ನಿರ್ಮಿಸಿದನೆಂದು ತಿಳಿದುಬರುತ್ತದೆ. ರತ್ನತ್ರಯ ಬಸದಿಯ ಶಿಲಾಕಲೆಯನ್ನು ಶಬ್ದಗಳಲ್ಲಿ ಹಿಡಿದಿಡಲಾಗದಷ್ಟು ಕುಸುರಿ ಕೆತ್ತನೆಯಿಂದ ಕೂಡಿದೆ. ಹೀಗೆ ಬಿಳಗಿಯ ಐತಿಹಾಸಿಕ ಕುರುಹುಗಳೆಲ್ಲಾ ಗತಕಾಲದ ವೈಭವವನ್ನು ಸಾಕ್ಷೀಕರಿಸುತ್ತಿವೆ. ಸ್ವಾತಂತ್ರ್ಯ ಹೋರಾಟ ಸಂದರ್ಭದಲ್ಲಿ ಸಹ ಬಿಳಗಿ ತನ್ನ ಧೀರೋದ್ಧಾತ್ತ ವ್ಯಕ್ತಿತ್ವ,ತ್ಯಾಗ ಪ್ರದರ್ಶಿಸಿದೆ. ಮಹಿಳೆಯರೂ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಇಲ್ಲಿಯ ಜನತೆ ಧುಮುಕಿದ್ದು ಜನರ ಪ್ರಜ್ಞಾವಂತಿಕೆಯನ್ನು ತಿಳಿಸುತ್ತದೆ. ಕನ್ನಡ ನಾಡಿನ ಐತಿಹಾಸಿಕ ಕ್ಷೇತ್ರ ಬಿಳಗಿ ಪ್ರವಾಸಿ ತಾಣವಾಗಿ ರಾಜ್ಯದ ನಕ್ಷೆಯಲ್ಲಿ ಗುರುತಿಸುವ ಎಲ್ಲಾ ಲಕ್ಷಣಗಳನ್ನೂ ಹೊಂದಿದೆ ಎಂದರೆ ಅತಿಶಯೋಕ್ತಿಯಲ್ಲ.

 

ಫ್ರೆಶ್ ನ್ಯೂಸ್

Latest Posts

Featured Videos