ಗ್ರಾಮೀಣ ನೀರು ಪೂರೈಕೆಗೆ ಸರ್ಕಾರದ ಆದ್ಯತೆ: ಸಚಿವ ಮಾಧುಸ್ವಾಮಿ

ಗ್ರಾಮೀಣ ನೀರು ಪೂರೈಕೆಗೆ ಸರ್ಕಾರದ ಆದ್ಯತೆ: ಸಚಿವ ಮಾಧುಸ್ವಾಮಿ

ಹಾಸನ, ಡಿ. 14: ಗ್ರಾಮೀಣ ಪ್ರದೇಶದ ಜನರ ಕುಡಿಯುವ ಹಾಗೂ ಕೃಷಿ ಚಟುವಟಿಕೆಗಳಿಗೆ ನೀರು ಪೂರೈಸುವ ಯೋಜನೆಗಳಿಗೆ ಸರ್ಕಾರ ಮೊದಲ ಆಧ್ಯತೆ ನೀಡಲಿದೆ ಎಂದು ಕಾನೂನು ಸಂಸದೀಯ ವ್ಯವಹಾರ ಹಾಗೂ ಸಣ್ಣ ನೀರಾವರಿ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಜೆ.ಸಿ. ಮಾಧುಸ್ವಾಮಿ ಅವರು ತಿಳಿಸಿದಾರೆ.

ಅರಕಲಗೂಡು ತಾಲ್ಲೂಕು ಮಲ್ಲಿಪಟ್ಟಣ ಹೋಬಳಿ ಮಸವತ್ತೂರು ಗ್ರಾಮದ ಬಳಿ ಜಲ ಸಂಪನ್ಮೂಲ ಇಲಾಖೆ ಏರ್ಪಡಿಸಿದ್ದ ಮಲ್ಲಿಪಟ್ಟಣ ಏತ ನೀರಾವರಿ ಯೋಜನೆ ಕಾಮಗಾರಿಯ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ಗ್ರಾಮೀಣ ಭಾಗದಿಂದ ನಗರಕ್ಕೆ ವಲಸೆ ಹೊಗುವ ರೈತರನ್ನು ತಡೆಯಬೇಕು ಅದಕ್ಕಾಗಿ ಕೃಷಿಗೆ ಗರಿಷ್ಠ ನೀರು ಪೂರೈಕೆ ಮಾಡಬೇಕು ಈ ಬಗ್ಗೆ ಮುಖ್ಯಮಂತ್ರಿಯವರೊಂದಿಗೂ ಸಮಾಲೋಚಿಸಿ, ಅವರು ಇದಕ್ಕೆ ಸಂಪೂರ್ಣ ಸಹಮತ ವ್ಯಕ್ತಪಡಿಸಿ ಆ ನಿಟ್ಟಿನಲ್ಲಿ ಯೋಜನೆಗಳನ್ನು ಅನುಷ್ಠಾನಗೊಳಿಸುವ ಭರವಸೆ ನೀಡಿದ್ದಾರೆ ಎಂದು ಸಚಿವರು ಹೇಳಿದರು.

ಈ ಸರ್ಕಾರ ಕೆರೆಕಟ್ಟೆಗಳಿಗೆ ನೀರು ತುಂಬಿಸುವ ಕಾಮಗಾರಿಗಳಿಗೆ ಹಾಗೂ ಗ್ರಾಮೀಣಾಭಿವೃದ್ಧಿ ಬಗ್ಗೆ ಹೆಚ್ಚು ಒತ್ತು ನೀಡಲಿದೆ. ಇದಕ್ಕೆ ಪಕ್ಷ, ಪ್ರಾಂತ್ಯ ಜಾತಿ ಅಡ್ಡಿ ಬರದಂತೆ ಕೆಲಸ ಮಾಡುತ್ತೇವೆ ಎಂದರು.

ಪ್ರವಾಹ ಪರಿಹಾರಕ್ಕೆ 7000 ಕೋಟಿ ಖರ್ಚು ಮಾಡಬೇಕಾಯ್ತು ಅದರ ಜೊತೆಗೆ ಇತರ ಅಭಿವೃದ್ಧಿ ಕಾರ್ಯಗಳಿಗೂ ಆಧ್ಯತೆ ನೀಡುತ್ತಿದ್ದೇವೆ ರಾಜ್ಯದಲ್ಲಿ ಹರಿಯುವ ನೀರಿನ್ನು ಸರಿಯಾಗಿ ಬಳಸಲು ಆಗಿಲ್ಲ ಈ ವರ್ಷ ಪ್ರವಾಹದಿಂದಾಗಿ 780-800 ಟಿ.ಎಂ.ಸಿ. ನೀರು ಉಪಯೋಗವಾಗದೆ ಹೊರ ಹರಿದಿದೆ. ಮುಂದಿನ ದಿನಗಳಲ್ಲಿ ಇದರ ಸಂಪೂರ್ಣ ಸದ್ಬಳಕೆಗೆ ಸರ್ಕಾರ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಲಿದೆ ಎಂದು ಸಚಿವ ಮಾಧುಸ್ವಾಮಿ ತಿಳಿಸಿದರು.

ಮಲ್ಲಿಪಟ್ಟಣ ಏತ ನೀರಾವರಿ ಯೋಜನೆಯಡಿ ಅರಕಲಗೂಡಿನಲ್ಲಿ 4.4 ಟಿ.ಎಂ.ಸಿ. ನೀರಲ್ಲಿ 200 ಕೆರೆ ಕಟ್ಟೆ ತುಂಬಿಸಲಾಗುತ್ತಿದೆ, ಹೇಮಾವತಿ ಪಕ್ಕದಲ್ಲಿ ಹರಿಯುತ್ತಿದ್ದ ಈ ಕಾಮಗಾರಿ ಹಲವು ವರ್ಷಗಳ ಹಿಂದೆಯೇ ನಡೆಯಬೇಕಿತ್ತು ಇದನ್ನು ಪೂರ್ಣಗೊಳಿಸಲು ಎಲ್ಲಾ ನೆರವು ಒದಗಿಸಲಾಗುವುದು ಇದಲ್ಲದೆ ಇತರ ಕಡೆಗಳಲ್ಲಿಯೂ ನೀರಾವರಿ ಅಂತರ್ಜಲ ಅಭಿವೃದ್ಧಿಗೆ ಶ್ರಮಿಸುತ್ತಿದೆ ಎಂದರು.

ರಾಜ್ಯದ ಎಲ್ಲಾ ಕೆರೆಗಳ ಅಂಕಿಅಂಶ ಸಂಗ್ರಹಿಸುತ್ತಿದ್ದು ರಾಜ್ಯದಲ್ಲಿ 37000 ಕೆರೆಗಳನ್ನು ಸಣ್ಣ ನೀರಾವರಿ ಇಲಾಖೆ ಸುರ್ಪದಿಗೆ ವ್ಯವಸ್ಥಿತವಾಗಿ ಪಡೆದು ಅವುಗಳ ರಕ್ಷಣೆ ಹಾಗೂ ಅಭಿವೃದ್ಧಿ ಕ್ರಮವಹಿಸಲಾಗುವುದು ಎಂದು ಸಚಿವ ಮಾಧುಸ್ವಾಮಿ ಹೇಳಿದರು.

ಕಾಮಗಾರಿಯಲ್ಲಿ ಗುಣಮಟ್ಟ ಇಲ್ಲದಿದ್ದರೆ, ಪೈಪ್‍ಲೈನ್ ಆಳವಡಿಕೆಯಲ್ಲಿ ಜವಾಬ್ದಾರಿ ವಹಿಸದಿದ್ದರೆ ಬಿಲ್ ಪಾವತಿಸಲಾಗುವುದಿಲ್ಲ, ಕೆರೆ ಸಂಸ್ಕøತಿ ಶ್ರೇಷ್ಠ ಸಂಸ್ಕøತಿ ನೀರಿನ ವಿಚಾರಕ್ಕೆ ಯಾವುದೇ ರಾಜಕಾರಣ ಬೇಡ ಎಂದು ಅವರು ತಿಳಿಸಿದರು.

ಶಾಸಕರಾದ ಎ.ಟಿ.ರಾಮಸ್ವಾಮಿ ಅವರು ಮಾತನಾಡಿ ರೈತರಿಗೆ ವರದಾನವಾಗುವ ಯೋಜನೆ ಇದಾಗಿದೆ. ಸೋಮವಾರಪೇಟೆ ತಾಲ್ಲೂಕಿನ ಕಟ್ಟೇಪುರದಿಂದ ನೀರು ಎತ್ತಿ ಮಲ್ಲಿಪಟ್ಟಣ ಬಳಿಯ ಅಲದಹಳ್ಳಿಯಲ್ಲಿ ಕಟ್ಟೆಕಟ್ಟಿ ಅಲ್ಲಿಂದ ಗುರುತ್ವವಕರ್ಷಣೆ ಶಕ್ತಿ ಮೇಲೆ 200 ಕೆರೆ ಕಟ್ಟೆಗಳಿಗೆ ಕುಡಿಯುವ ನೀರು ಪೂರೈಸಲಾಗುವುದು ಎಂದರು.

ಒಂದು ವರ್ಷದಲ್ಲಿ ಕಾಮಗಾರಿ ಅನುಮೊದನೆಗೊಂಡು ಕೆಲಸ ಪ್ರಾರಂಭವಾಗಿರುವುದು ಅಭಿವೃದ್ಧಿಯ ವೇಗಕ್ಕೆ ಸಾಕ್ಷಿಯಾಗಿದೆ. ತಾಲ್ಲೂಕಿನ 79 ಹಳ್ಳಿಗಳಿಗೆ ಇದರಿಂದ ಅನುಕೂಲವಾಗಲಿದೆ. ಬಿಟ್ಟುಹೊಗಿರುವ ಹಳ್ಳಿ ಹಾಗೂ ಕೆರೆಕಟ್ಟೆಗಳನ್ನು ಸೇರ್ಪಡೆಗೊಳಿಸಲು ಇಲಾಖಾ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.

ಇದು ರೈತರಿಗೊಸ್ಕರ ಮಾಡಿರುವ ಯೋಜನೆ ಎಲ್ಲಾರೂ ಸಹಕರಿಸಬೇಕು. ಇದರಿಂದ ಕುಡಿಯುವ ನೀರು ಹಾಗೂ ಅಂತರ್ಜಲ ವೃದ್ದಿಗೆ ಅನುಕೂಲವಾಗಲಿದೆ. ಈ ಕಾಮಗಾರಿಯನ್ನು 18 ತಿಂಗಳಲ್ಲಿ ಪೂರ್ಣಗೊಳಿಸುವ ಗುರಿ ನಿಗಧಿ ಪಡಿಸಿದೆ. ಎಲ್ಲಾ ಕೆರೆಗಳಲ್ಲಿ ನೀರು ತುಂಬಿಸಿ 3 ವರ್ಷ ನಿರ್ವಹಿಸಿ ನಂತರ ಇಲಾಖೆಗೆ ಹಸ್ತಾಂತರಿಸಬೇಕು  ಎಂದು ಶಾಸಕರಾದ ಎ.ಟಿ. ರಾಮಸ್ವಾಮಿ ಹೇಳಿದರು.

ಈ ಯೋಜನೆಯಲ್ಲಿ 200 ಕೆರೆ ಕಟ್ಟೆಗಳನ್ನು ತುಂಬಿಸಲಾಗುವುದು ಆದರೆ ಇದೇ ವೇಳೆ ಎಲ್ಲಾ ಕೆರೆ ಕಟ್ಟೆಗಳ ಏರಿ, ತೂಬುಗಳ ಸುಸ್ಥಿತಿ ಪರಿಶೀಲಿಸಿ ದುರಸ್ಥಿ ಮಾಡಬೇಕಿದೆ. ಒತ್ತುವರಿ ತೆರವುಗೊಳಿಸಬೇಕಿದೆ. ಜಿಲ್ಲಾ ಉಸ್ತುವಾರಿ ಸಚಿವರು ಸಣ್ಣ ನೀರಾವರಿ ಇಲಾಖೆಯ ಜವಾಬ್ದಾರಿ ವಹಿಸುತ್ತಿರುವುದರಿಂದ ಹೆಚ್ಚಿನ ನೆರವು ಒದಗಿಸಲು ಮನವಿ ಮಾಡುವುದಾಗಿ ಅವರು ಕೋರಿದರು.

190ಕೋಟಿಯ ಅಂದಾಜು ವೆಚ್ಚ ಯೋಜನೆ ಮಂಜೂರಾತಿ ದೊರೆತ್ತು ಕಾಮಗಾರಿ ಪ್ರಾರಂಭವಾಗುತ್ತಿದೆ. ಈ ವರ್ಷ 120 ಕೋಟಿ ರೂಪಾಯಿ ಬಿಡುಗಡೆಯಾಗಿದೆ ಮುಂದಿನ ವರ್ಷ 70 ಕೋಟಿ ರೂಪಾಯಿ ಒದಗಿಸಬೇಕಿದೆ. ಗುತ್ತಿಗೆದಾರರು ಗುಣಮಟ್ಟದೊಂದಿಗೆ ಕೆಲಸ ಮಾಡಿ ಅಭಿವೃದ್ದಿಯೊಳಗೆ ಬಿಟ್ಟುಕೊಡಬೇಕು ಎಂದರು.

ಅರಕಲಗೂಡು ದೊಡ್ಡಮಠದ ಮಲ್ಲಿಕಾರ್ಜುನ ಸ್ವಾಮೀಜಿ ಆಶಿರ್ವಚನ ನೀಡಿ ನೀರಿನ ಮಹತ್ವದ ಬಗ್ಗೆ ವಿವರಿಸಿದರು, ಶಾಸಕರ ಪ್ರಯತ್ನದ ಫಲವಾಗಿ ಯೋಜನೆ ಅನುಷ್ಠಾನಗೊಳ್ಳುತ್ತಿರುವುದು ಅಭಿನಂದನಾರ್ಹ ಎಂದರು.

ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಬಿ.ಎಸ್.ಶ್ವೇತಾ ದೇವರಾಜ್ ಅರಕಲಗೂಡು ತಾಲ್ಲೂಕು ಪಂಚಾಯತ್ ಅಧ್ಯಕ್ಷರಾದ ವಿಣಾ ಮಂಜುನಾಥ್, ಉಪಾಧ್ಯಕ್ಷರಾದ ಎಸ್.ಆರ್ .ನಾಗರಾಜ್ ,ಜಿಲ್ಲಾ ಪಂಚಾಯತ್ ಸದಸ್ಯರಾದ ಎಸ್ .ಪಿ ರೇವಣ್ಣ, ರತ್ನಮ್ಮ ಲೋಕೇಶ್, ಜಿಲ್ಲಾಧಿಕಾರಿ ಆರ್. ಗಿರೀಶ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಎ.ಪರಮೇಶ್, ವಿಶ್ವಕರ್ಮ ಮಠದ ಗುರುಶಿವ ಸದ್ಭವ ಸ್ವಾಮೀಜಿ, ಕೆಸವತ್ತೂರು ಮಠದ ಬಸವರಾಜೇಂದ್ರ ಸ್ವಾಮಿಜಿ, ಕಾವೇರಿ ನೀರಾವರಿ ನಿಗಮದ ಮುಖ್ಯ ಇಂಜಿನಿಯರ್ ಶಂಕರೇಗೌಡ, ಆಧಿಕ್ಷಕ ಇಂಜಿನಿಯರ್, ಎನ್.ಬಿ.. ಚನ್ನಕೇಶವ, ಉಪ ವಿಭಾಗಾಧಿಕಾರಿ  ಗಿರೀಶ್ ನಂದನ್, ಮಲ್ಲಿಪಟ್ಟಣ ತಾಲ್ಲೂಕು ಪಂಚಾಯತ್ ಸದಸ್ಯರಾದ ಮೀನಾಕ್ಷಿ ಸಿದ್ದಯ್ಯ, ಆಲದಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಕುಸುಮ ಮತ್ತಿತರರು ಹಾಜರಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos