ಗ್ಯಾಂಗ್ ರೇಪ್ ಪ್ರಕರಣ : ಐವರು ಕಾಮುಕರು ಪೊಲೀಸರ ಬಲೆಗೆ

ಗ್ಯಾಂಗ್ ರೇಪ್ ಪ್ರಕರಣ : ಐವರು ಕಾಮುಕರು ಪೊಲೀಸರ ಬಲೆಗೆ

ಮೈಸೂರು :ಸಾಂಸ್ಕೃತಿ ಕನಗರಿಯನ್ನು ಬೆಚ್ಚಿ ಬೀಳಿಸಿದ್ದ ವಿದ್ಯಾರ್ಥಿನಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡಿನ ತಿರುಪೂರಿನ ಐವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ರಾಜ್ಯದ ಪೊಲೀಸ್ ಮಹಾನಿರ್ದೇಶಕ ಮತ್ತು ನಿರೀಕ್ಷಕರಾದ ಪ್ರವೀಣ್ ಸೂದ್ ಅವರು ಶುಕ್ರವಾರ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಮೂಹಿಕ ಅತ್ಯಾಚಾರ ಪ್ರಕರಣದ ಆರೋಪಿಗಳ ಬಗ್ಗೆ ಸುದೀರ್ಘ ವಿವರಣೆ ನೀಡಿದರು. ಈ ಪ್ರಕರಣದಲ್ಲಿ ಆರು ಮಂದಿ ಆರೋಪಿಗಳು ಭಾಗಿಯಾಗಿದ್ದು, ಐವರನ್ನು ಬಂಧಿಸಲಾಗಿದೆ. ತಲೆಮರೆಸಿಕೊಂಡಿರುವ ಒಬ್ಬ ಆರೋಪಿಗಾಗಿ ಶೋಧ ನಡೆಸಲಾಗುತ್ತಿದೆ. ಆರೋಪಿಗಳು ಚಾಲಕ ವೃತ್ತಿ, ಕಾರ್ಪೆಂಟರ್ ಹಾಗೂ ಕೂಲಿ ಕೆಲಸ ಮಾಡುವವರು.ಆರೋಪಿಗಳಲ್ಲಿ ಒಬ್ಬನ ವಯಸ್ಸಿನ ಬಗ್ಗೆ ನಿಖರತೆ ಇಲ್ಲ. ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಬೇಕಿದೆ ಎಂದು ಹೇಳಿದರು.

ತಮಿಳುನಾಡಿನಿಂದ ಮೈಸೂರಿನ ಬಂಡಿಪಾಳ್ಯ ಮಾರುಕಟ್ಟೆಗೆ ಆರೋಪಿಗಳು ವಾಹನಗಳಲ್ಲಿ ತರಕಾರಿ ತಂದು ಮಾರಾಟ ಮಾಡಿ ಬಳಿಕ ಚಾಮುಂಡಿಬೆಟ್ಟದ ತಪ್ಪಲಿನ ಲಲಿತಾದ್ರಿಪುರದ ರಸ್ತೆ ಬದಿಯ ನಿರ್ಜನ ಪ್ರದೇಶಕ್ಕೆ ಹೋಗಿ ಅಲ್ಲಿ ಪಾರ್ಟಿ ಮಾಡಿ ನಂತರ ತಮ್ಮೂರಿಗೆ ಬಂದಿದ್ದ ವಾಹನದಲ್ಲೇ ವಾಪಸಾಗುತ್ತಿದ್ದರು.

ಕಳೆದ ಮಂಗಳವಾರ ಎಂದಿನಂತೆ ಲಲಿತಾದ್ರಿಪುರದ ರಸ್ತೆ ಸಮೀಪ ಪಾರ್ಟಿ ಮಾಡುತ್ತಿದ್ದರು. ಆ ಸಂದರ್ಭದಲ್ಲಿ ಯುವಕ ಮತ್ತು ಆತನ ಸ್ನೇಹಿತೆ ಅಲ್ಲಿ ಕುಳಿತು ಮಾತನಾಡುತ್ತಿದ್ದಾಗ ಈ ಆರೋಪಿಗಳು ಅದನ್ನು ಗಮನಿಸಿದರು. ಅಲ್ಲಿಗೆ ತೆರಳಿ ಯುವಕನಿಗೆ ಕಲ್ಲಿನಿಂದ ಹಲ್ಲೆ ಮಾಡಿ ಯುವತಿಯನ್ನು ಎಳೆದೊಯ್ದು ಅತ್ಯಾಚಾರ ಮಾಡಿ, ಯುವಕನ ತಂದೆಗೆ ಫೋನ್ ಮಾಡಿಸಿ 3 ಲಕ್ಷ ರೂ. ಕೊಡುವಂತೆ ಬೇಡಿಕೆ ಇಟ್ಟಿದ್ದರು. ಹಣ ಸಿಗದಿದ್ದಾಗ ಆರೋಪಿಗಳು ಯುವಕನ ಮೇಲೆ ಹಲ್ಲೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದರು.

ಯುವತಿಯನ್ನು ಆಕೆಯ ಸ್ನೇಹಿತ ಆಸ್ಪತ್ರೆಗೆ ಸೇರಿಸಿ ಆಲನಹಳ್ಳಿ ಪೊಲೀಸರಿಗೆ ಮಾಹಿತಿ ನೀಡಿದ. ಸುದ್ದಿ ತಿಳಿದ ಪೊಲೀಸರು ಯುವಕನಿಂದ ಹೆಚ್ಚಿನ ಮಾಹಿತಿ ಪಡೆದು ಸ್ಥಳ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರ, ಎಡಿಜಿಪಿ ಪ್ರತಾಪ್ರೆಡ್ಡಿ ಅವರಿಗೆ ತನಿಖೆ ಉಸ್ತುವಾರಿ ವಹಿಸಿತು.

ಮೈಸೂರಿಗೆ ದಾವಿಸಿ ಬಂದ ಅವರು ಏಳು ತಂಡಗಳನ್ನು ರಚಿಸಿ ಸ್ಥಳ ಪರಿಶೀಲಿಸಿ 34ಕ್ಕೂ ಹೆಚ್ಚು ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ವೈಜ್ಞಾನಿಕವಾಗಿ ತನಿಖೆ ನಡೆಸಿ ತಾಂತ್ರಿಕ ತಂಡದ ಸಹಾಯ ಪಡೆದು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಪ್ರವೀಣ್ ಸೂದ್ ಅವರು ವಿವರಿಸಿದರು. ಮೈಸೂರು ನಗರ ಹಾಗೂ ದಕ್ಷಿಣ ವಲಯ ಪೊಲೀಸರ ತಂಡಗಳು ಹಗಲು-ರಾತ್ರಿ ಜಂಟಿ ಕಾರ್ಯಾಚರಣೆ ಕೈಗೊಂಡು ಐದು ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿವೆ.ಸಂತ್ರಸ್ಥೆಯಿಂದ ಸದ್ಯಕ್ಕೆ ಹೇಳಿಕೆ ಪಡೆಯಲು ಸಾಧ್ಯವಾಗಿಲ್ಲ. ಮುಂದಿನ ದಿನಗಳಲ್ಲಿ ಅವರು ತಮ್ಮ ತನಿಖೆಗೆ ಸಹಕರಿಸುವ ವಿಶ್ವಾಸವಿದೆ. ಆರಂಭದಲ್ಲಿ ಆರೋಪಿಗಳ ಬಗ್ಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲ. ನಂತರ ವೈಜ್ಞಾನಿಕವಾಗಿ ತನಿಖೆ ನಡೆಸಿ ಬಂಧಿಸಿದ್ದೇವೆ. ಆರೋಪಿಗಳು ಇನ್ನಿತರ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆಯೇ ಎಂಬುದರ ಬಗ್ಗೆ ತಮಿಳುನಾಡು ಪೊಲೀಸರಿಂದ ಮಾಹಿತಿ ಕಲೆ ಹಾಕುತ್ತಿದ್ದೇವೆ ಎಂದು ತಿಳಿಸಿದರು.

5ಲಕ್ಷ ಬಹುಮಾನ: ವಿದ್ಯಾರ್ಥಿನಿ ಮೇಲೆ ನಡೆದ ಅತ್ಯಾಚಾರ ಪ್ರಕರಣವನ್ನು ಭೇದಿಸಿದ ಪೊಲೀಸರ ತಂಡಗಳಿಗೆ 5 ಲಕ್ಷ ರೂ.ಗಳ ಬಹುಮಾನ ಘೋಷಿಸಿರುವುದಾಗಿ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ಸೂದ್ ಹೇಳಿದರು. ಮೈಸೂರು ನಗರ ಪೊಲೀಸರು, ದಕ್ಷಿಣ ವಲಯ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪೊಲೀಸರ ಕಾರ್ಯದಕ್ಷತೆಯನ್ನು ನಾನು ಅಭಿನಂದಿಸುತ್ತೇನೆ. ಸರ್ಕಾರದ ವತಿಯಿಂದ 5 ಲಕ್ಷ ರೂ.ಗಳ ಬಹುಮಾನ ಘೋಷಿಸಿರುವುದಾಗಿ ಪ್ರವೀಣ್ಸೂದ್ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಫ್ರೆಶ್ ನ್ಯೂಸ್

Latest Posts

Featured Videos