ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಹಬ್ಬಗಳು ಎಂದರೆ ನಮಗೆ ಒಂದು ದೊಡ್ಡ ಸಂಭ್ರಮಾಚರಣೆಯಾಗುತ್ತದೆ. ಅದರಲ್ಲೂ ಗಣೇಶ ಹಬ್ಬಬಂತೆಂದರೆ ಪ್ರತಿ ಗಲ್ಲಿ ಗಲ್ಲಿಯಲ್ಲೂ ಗಣೇಶ ಹಬ್ಬ ಆಚರಣೆ ಮಾಡಲಾಗುತ್ತದೆ.
ನಗರದಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆ ಹಿನ್ನೆಲೆಯಲ್ಲಿ ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆ ಇದೆ. ಹೀಗಾಗಿ ಸಂಚಾರಿ ಪೊಲೀಸರು ಮಾರ್ಗ ಬದಲಾವಣೆಗೆ ಮುಂದಾಗಿದ್ದಾರೆ. ನಾಳೆ ಕೆ.ಜಿ.ಹಳ್ಳಿ ಮತ್ತು ಪುಕೇಶಿನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗಣಪತಿ ಮೂರ್ತಿಗಳ ಮೆರವಣಿಗೆ ಇರಲಿದೆ. ಹಾಗೂ ಹಲಸೂರು ಕೆರೆಯಲ್ಲಿ ಗಣೇಶ ವಿಸರ್ಜನೆ ಕಾರ್ಯಕ್ರಮ ಇರುವುದರಿಂದ ಸುಗಮ ಸಂಚಾರದ ಹಿತದೃಷ್ಟಿಯಿಂದ ಬೆಳಗ್ಗೆ 10 ಗಂಟೆಯಿಂದ ರಾತ್ರಿ 10 ಗಂಟೆಯ ವರೆಗೆ ಕೆಲವೆಡೆ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದೆ.
ಸೆ.22 ಮತ್ತು ಸೆ. 24ರಂದು ಈ ಸ್ಥಳಗಳಲ್ಲಿ ಎಲ್ಲಾ ರೀತಿಯ ವಾಹನಗಳ ಪಾರ್ಕಿಂಗ್ಗೆ ನಿರ್ಬಂಧ ಹೇರಲಾಗಿದೆ. ಪಾಟರಿ ಸರ್ಕಲ್ ನಿಂದ ನಾಗವಾರ ಸಿಗ್ನಲ್, ಗೋವಿಂದಪುರ ಜಂಕ್ಷನ್‌ನಿಂದ ಗೋವಿಂದಪುರ ಕಾ&ಸು ಪೊಲೀಸ್ ಠಾಣೆಯವರೆಗೆ ಮತ್ತು ಹೆಚ್.ಬಿ.ಆರ್ ಬಡಾವಣೆಯ ಸಿದ್ದಪ್ಪ ರೆಡ್ಡಿ ಜಂಕ್ಷನ್‌ನಿಂದ ನರೇಂದ್ರ ಟೆಂಟ್ ಜಂಕ್ಷನ್ ವರೆಗೆ ಎರಡು ಬದಿಯಲ್ಲಿ ವಾಹನಗಳ ಪಾರ್ಕಿಂಗ್ ಅನ್ನು ನಿರ್ಬಂಧಿಸಲಾಗಿದೆ. ಹಾಗೂ ಪಾಟರಿ ಸರ್ಕಲ್ ಎಂ.ಎಂ. ರಸ್ತೆಯಿಂದ ಲಾಜರ್ ರಸ್ತೆಯ ವರೆಗೆ ಹಾಗೂ ಸಿಂಧಿ ಕಾಲೋನಿ ಜಂಕ್ಷನ್ನಿಂದ ವಾರ್ ಮೆಮೊರಿಯಲ್ ಜಂಕ್ಷನ್ ವರೆಗೆ ಎರಡು ಬದಿಯಲ್ಲಿ ವಾಹನಗಳ ಪಾರ್ಕಿಂಗ್ ಅನ್ನು ನಿರ್ಬಂಧಿಸಲಾಗಿದೆ. ಇನ್ನು ಹಲಸೂರು ಕೆರೆಯ ಮುಖ್ಯದ್ವಾರ ಮತ್ತು ಸುತ್ತಲೂ ಇರುವ ರಸ್ತೆಗಳಲ್ಲಿ ಪಾರ್ಕಿಗ್ ಅನ್ನು ನಿರ್ಬಂಧಿಸಲಾಗಿದೆ.