ಬೆಂಗಳೂರು: ದುಡ್ಡಿಗೆ ಬೇಡಿಕೆ ಇಟ್ಟು ಜಾತಿನಿಂದನೆ ಮಾಡಿದ್ದಾರೆ ಎಂಬ ಕಾರಣಕ್ಕೆ ಬಿಜೆಪಿ ಶಾಸಕರಾಗಿರುವಂತಹ ಮುನಿರತ್ನ ಅವರ ವಿರುದ್ಧ ಬಿಬಿಎಂಪಿಯ ಗುತ್ತಿಗೆದಾರ ಚೆಲುರಾಜ್ ಎಂಬುವವರು ದೂರು ದಾಖಲಿಸಿದ್ದು ಇದೀಗ ಬಿಜೆಪಿ ಶಾಸಕ ಮುನಿರತ್ನ ಸೇರಿದಂತೆ ನಾಲ್ಕು ಜನಗಳ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಇನ್ನು ಶಾಸಕರ ವಿರುದ್ಧ ಎಫ್ಐಆರ್ ದಾಖಲಿಸಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಗುತ್ತಿಗೆದಾರ ಚೆಲುವರಾಜ್ ಅವರು, ವಾರ್ಡ್ನಲ್ಲಿ ನನಗೆ ಕೆಲಸ ಮಾಡಲು ಬಿಡುತ್ತಿಲ್ಲ. ಸುಮಾರು 30 ಲಕ್ಷ ದುಡ್ಡಿನ ಬೇಡಿಕೆ ಇಟ್ಟಿದ್ದಾರೆ. ನಾನು ದಲಿತನಾಗಿರುವುದರಿಂದ ನನ್ನ ಜೊತೆ ಯಾರೂ ಕಾಫಿ, ಟೀ, ಟಿಫನ್ ಮಾಡದಂತೆ ಹೇಳುತ್ತಾರೆ. ನಾನೊಬ್ಬ ದಲಿತನಾಗಿರುವುದರಿಂದ ನನ್ನ ಜೊತೆ ಯಾರು ಸೇರಬಾರದು ಎಂದು ಶಾಸಕರು ಹೇಳುತ್ತಿದ್ದಾರೆ ಎಂದು ಗುತ್ತಿಗೆದಾರ ಚೆಲುವರಾಜ್ ಅವರು ಹೇಳಿದ್ದಾರೆ.
ನನಗೆ ಧಮ್ಕಿ ಹಾಕುವುದರ ಜೊತೆಗೆ ನನ್ನ ಹೆಂಡತಿ ಮಕ್ಕಳಿಗೂ ಕೂಡ ಬೆದರಿಕೆ ಹಾಕುತ್ತಿದ್ದಾರೆ. ನನ್ನ ಹಾಗೇನೇ ಬಿಜೆಪಿ ಶಾಸಕ ಮುನಿರತ್ನ ಅವರಿಗೂ ಕೂಡ ಎರಡು ಹೆಣ್ಣು ಮಕ್ಕಳಿದ್ದಾರೆ ಅವರನ್ನು ದೇವರೇ ನೋಡಿಕೊಳ್ಳುತ್ತಾರೆ ಎಂದು ಮಾಧ್ಯಮದವರ ಮುಂದೆ ಅಳಲು ತೋಡಿಕೊಂಡಿದ್ದಾರೆ.
ಕೆಲವು ದಿನಗಳ ಹಿಂದೆ ನಾನು ಆತ್ಮಹತ್ಯೆ ಮಾಡಲು ಪ್ರಯತ್ನಪಟ್ಟೆ ಆದರೆ ಬೇಡ ಎಂದು ತೀರ್ಮಾನಿಸಿ ಇದೀಗ ದೂರು ದಾಖಲಿಸಿದ್ದೇನೆ ಎಂದು ಹೇಳಿದ್ದಾರೆ.
ಇಂಥ ಕೆಟ್ಟ ಕ್ರಿಮಿಗಳ ಮುಖವಾಡ ಕಳಚಬೇಕೆಂದು ನಾನು ಆತ್ಮಹತ್ಯೆ ಮಾಡಿಕೊಳ್ಳದೆ ಧೈರ್ಯವಾಗಿ ದೂರು ದಾಖಲಿಸಿದ್ದೇನೆ ಎಂದು ಹೇಳಿದ್ದಾರೆ.