ಉಪವಾಸ, ಸತ್ಯಾಗ್ರಹವೇ ಇವರ ಆಯುಧ: ಡಿಕೆಶಿ

ಉಪವಾಸ, ಸತ್ಯಾಗ್ರಹವೇ ಇವರ ಆಯುಧ: ಡಿಕೆಶಿ

ಬೆಂಗಳೂರು: ಮಹಾತ್ಮ ಗಾಂಧೀಜಿ ಅವರು ಸರ್ವ ಜನಾಂಗದ ಶಾಂತಿಯ ತೋಟದ ನಾಯಕ. ಇವರು ಕೇವಲ ವ್ಯಕ್ತಿಯಲ್ಲ, ಶಕ್ತಿ ಮತ್ತು ಸ್ಪೂರ್ತಿ. ರಾಷ್ಟ್ರಪಿತ ದೇಶದ ಧೀಮಂತ, ಇಡೀ ವಿಶ್ವಕ್ಕೆ ಶಾಂತಿ ಮಂತ್ರ ಹೇಳಿಕೊಟ್ಟ ಮಹಾನ್ ನಾಯಕ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಅಭಿಪ್ರಾಯಪಟ್ಟರು.

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆದ ಮಹಾತ್ಮ ಗಾಂಧಿ ಅವರ 155 ನೇ ಜನ್ಮದಿನದ ಅಂಗವಾಗಿ ಸ್ವಚ್ಛತಾ ಆಂದೋಲನದ ಪ್ರತಿಜ್ಞಾವಿಧಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಉಪವಾಸ, ಸತ್ಯಾಗ್ರಹವೇ ಇವರ ಆಯುಧ. ಬಾಂಬು, ಬಂದೂಕುಗಳಿಲ್ಲದೆ ಅಹಿಂಸೆಯ ಮೂಲಕ ಹೋರಾಟದ ಹಾದಿಯನ್ನು ಹೇಳಿಕೊಟ್ಟವರು. ಮುಂದಿನ ಒಂದು ವರ್ಷಗಳ ಕಾಲ ಮಹಾತ್ಮನನ್ನು ಸ್ಮರಿಸಲು ‘ಗಾಂಧಿ ಭಾರತ’ ಎನ್ನುವ ಕಾರ್ಯಕ್ರಮ ರೂಪಿಸಲಾಗಿದೆ” ಎಂದರು.

ಶಿವನ ಧ್ಯಾನ, ರಾಮನ ತ್ಯಾಗ, ಬುದ್ಧನ ಪ್ರೀತಿ, ಏಸುವಿನ ಸಹನೆ, ಮಹಮದ್ ಪೈಗಂಬರ್ ಅವರ ಮಾನವೀಯತೆಯನ್ನು ಒಳಗೊಂಡ ಸ್ವರೂಪವೇ ಮಹಾತ್ಮಾ ಗಾಂಧಿ” ಎಂದರು.

ನನ್ನ ಜೀವನವೇ ನನ್ನ ಸಂದೇಶ ಎಂದು ನುಡಿದಂತೆ ನಡೆದವರು ಗಾಂಧಿ. ಇವರ ಆಚಾರ, ವಿಚಾರ, ತತ್ವ, ಆಶಯಗಳನ್ನು ಇಂದಿನ ಯುವ ಪೀಳಿಗೆಗೆ ತಲುಪಿಸುವ ಕೆಲಸ ನಮ್ಮ ಸರ್ಕಾರ ಮಾಡಲಿದೆ” ಎಂದು ಹೇಳಿದರು.

“ಲಾಠಿ ಪೆಟ್ಟು, ಬೂಟಿನ ಏಟನ್ನು ಸಹಿಸಿಕೊಂಡು, ಅಹಿಂಸೆಯಿಂದ ಏನು ಬೇಕಾದರೂ ಸಾಧಿಸಬಹುದು ಎಂದು ತೋರಿಸಿಕೊಟ್ಟವರು ಗಾಂಧಿ. ನೂರು ವರ್ಷದ ಹಿಂದೆ ಬೆಳಗಾವಿಯ ಅಧಿವೇಶನದಲ್ಲಿ ಸ್ವಾತಂತ್ರ ಹೋರಾಟದ ನೇತೃತ್ವ ವಹಿಸಿದ್ದು ಈ ದೇಶದ ಪುಣ್ಯ. ನಾವು ಇದನ್ನು ಸಂಭ್ರಮದಿಂದ ಆಚರಿಸಬೇಕು” ಎಂದು ತಿಳಿಸಿದರು.

“ಪ್ರತಿ ಹಳ್ಳಿಯೂ ಗಣರಾಜ್ಯವಾಗಬೇಕು ಎಂದು ಕನಸು ಕಂಡವರು. ನಾನು ಈ ಹಿಂದೆ ಸಹಕಾರ ಸಚಿವನಾಗಿದ್ದಾಗ ಒಂದು ಊರಿಗೆ ಶಾಲೆ ಹಾಗೂ ಸಹಕಾರ ಸಂಘವಿರಬೇಕು ಎಂದು ಯೋಜನೆ ರೂಪಿಸಿದ್ದೆವು. ಪಂಚಾಯಿತಿಯಿಂದ ಪಾರ್ಲಿಮೆಂಟಿನ ತನಕ ಅಧಿಕಾರ ವಿಕೇಂದ್ರೀಕರಣದ ಕನಸು ಕಂಡವರು” ಎಂದರು.

ಬದನವಾಳುವಿನಲ್ಲಿ ಸೌಹಾರ್ದ ರಸ್ತೆ ನಿರ್ಮಾಣ

“ನಂಜನಗೂಡು ಬಳಿಯ ಬದನವಾಳುವಿನಲ್ಲಿ,  ಸವರ್ಣೀಯರು ಮತ್ತು ಪರಿಶಿಷ್ಟ ಜಾತಿಗಳ ನಡುವೆ 30 ವರ್ಷಗಳ ಹಿಂದೆ ಸಂಘರ್ಷ ಉಂಟಾಗಿತ್ತು. ಇದನ್ನು ಹೋಗಲಾಡಿಸಲು, ಎರಡು ವರ್ಷದ ಹಿಂದೆ ಭಾರತ್ ಜೋಡೊ ಯಾತ್ರೆ ಸಂದರ್ಭದಲ್ಲಿ ಗಾಂಧಿ ಜಯಂತಿ ದಿನ, ರಾಹುಲ್ ಗಾಂಧಿ ಅವರ ಜೊತೆಗೂಡಿ ಆ ಊರಿನಲ್ಲಿ ಭಾರತ್ ಜೋಡೊ ರಸ್ತೆ ನಿರ್ಮಾಣ ಮಾಡಿ, ಇತಿಹಾಸ ಸೃಷ್ಟಿಸಲಾಯಿತು” ಎಂದರು.

 

ಫ್ರೆಶ್ ನ್ಯೂಸ್

Latest Posts

Featured Videos