ಬೆಂಗಳೂರು: ನಾಗಮಂಗಲದಲ್ಲಿ ಗಲಭೆಗೆ ಸಂಬಂಧಿಸಿದಂತೆ ಈಗಾಗಲೇ ಪೊಲೀಸ್ ಅಧಿಕಾರಿಗಳು ನೂರಕ್ಕೂ ಹೆಚ್ಚು ಮಂದಿಗಳನ್ನು ಬಂಧಿಸಿದ್ದು, ಈ ಸಂಬಂಧ ಯಾರಾದರೂ ಕಾನೂನು ಕೈಗೆ ತೆಗೆದುಕೊಂಡರೆ ಅಂತವರ ವಿರುದ್ಧ ನಿರ್ದಾಕ್ಷಣವಾಗಿ ಕ್ರಮ ಕೈಗೊಳ್ಳುವುದಾಗಿ ಗೃಹ ಸಚಿವರಾಗಿರುವಂತಹ ಜಿ ಪರಮೇಶ್ವರ್ ಅವರು ಎಚ್ಚರಿಕೆ ನೀಡಿದ್ದಾರೆ.
ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ವಿರೋಧಪಕ್ಷದವರು ಇದನ್ನೇ ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದಾರೆ ಆದರೆ ಇದರಲ್ಲಿ ರಾಜಕೀಯವಾಗಿ ಮಾತನಾಡುವುದು ಏನು ಇಲ್ಲ. ಎರಡು ಗುಂಪುಗಳ ಮಧ್ಯೆ ಜಗಳವಾದರೆ ಅದು ಯಾರು ಬೇಕು ಅಂತ ಮಾಡಿಸಿರುವುದಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಈದ್ ಮಿಲಾದ್ ಆಚರಣೆಗೆ ಪೊಲೀಸ್ ಮಾರ್ಗಸೂಚಿ
ಇನ್ನು ಘಟನೆಯಿಂದಾಗಿ ಜೀವನೋಪಾಯಕ್ಕೆ ತೊಂದರೆಯಾದವರಿಗೆ ಪರಿಹಾರ ನೀಡುವ ಬಗ್ಗೆ ಸರ್ಕಾರ ಯೋಚಿಸುತ್ತಿದೆ ಎಂದು ಹೇಳಿದರು.
ಘಟನೆ ಸಂಬಂಧ ಪೊಲೀಸ್ ಇನ್ಸ್‌ಪೆಕ್ಟರ್ ರನ್ನು ಅಮಾನತುಗೊಳಿಸಲಾಗಿದೆ. ನಾವು ರಾಜ್ಯಾದ್ಯಂತ ಪೊಲೀಸ್ ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ ತಮ್ಮ ವ್ಯಾಪ್ತಿಯಲ್ಲಿ ಯಾವುದೇ ಘಟನೆಗಳು ನಡೆದರೆ ಅದಕ್ಕೆ ಅವರೇ ಹೊಣೆ ಎಂದು ನಾವು ಹೇಳಿದ್ದೆವು. ಇನ್ಸ್‌ಪೆಕ್ಟರ್ ನಿರ್ಲಕ್ಷ್ಯ ತೋರಿದ ಕಾರಣ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಪರಮೇಶ್ವರ ತಿಳಿಸಿದ್ದಾರೆ.
ಉಪ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಇತರ ಅಧಿಕಾರಿಗಳ ವಿರುದ್ಧ ವಿಚಾರಣೆ ನಡೆಯುತ್ತಿದೆ. ‘ವಾಸ್ತವಾಂಶ’ಗಳ ಕುರಿತು ವರದಿ ಸಲ್ಲಿಸುವಂತೆ ಹಿರಿಯ ಅಧಿಕಾರಿಗಳಿಗೆ ಸೂಚಿಸಲಾಗಿದ್ದು, ಅದರ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು.