ಇ-ಶಕ್ತಿ ಯೋಜನೆ ವ್ಯಾಪ್ತಿಗೆಮಹಿಳಾ ಸಂಘ 

ಇ-ಶಕ್ತಿ ಯೋಜನೆ ವ್ಯಾಪ್ತಿಗೆಮಹಿಳಾ ಸಂಘ 

ಕೋಲಾರ: ನಬಾರ್ಡ್ನ ಇ-ಶಕ್ತಿ ಯೋಜನೆಯಡಿ ಅವಿಭಜಿತ ಜಿಲ್ಲೆಯ ೭೩೦೦ ಮಹಿಳಾ ಸ್ವಸಹಾಯ ಸಂಘಗಳ ಕಾರ್ಯಚಟುವಟಿಕೆಗಳನ್ನು ಆನ್‌ಲೈನ್ ವ್ಯಾಪ್ತಿಗೆ ತರಲು ೨೪೩ ಮಂದಿ ಪ್ರೇರಕರನ್ನು ಆಯ್ಕೆ ಮಾಡಿ ತರಬೇತಿ ನೀಡಲಾಗಿದೆ ಎಂದು ಕೋಲಾರ,ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ತಿಳಿಸಿದರು.
ನಗರದ ಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ನಬಾರ್ಡ್,ಅಫೆಕ್ಸ್ ಬ್ಯಾಂಕ್ ಅಧಿಕಾರಿಗಳ ಸಮ್ಮುಖದಲ್ಲಿ ನಡೆದ ಇ-ಶಕ್ತಿ ಯೋಜನೆ ಅನುಷ್ಟಾನದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ದೇಶದಲ್ಲೇ ಅತಿ ಹೆಚ್ಚು ಮಹಿಳಾ ಸ್ವಸಹಾಯ ಸಂಘಗಳಿಗೆ ಸಾಲ ನೀಡಿದ ಖ್ಯಾತಿಗೆ ಡಿಸಿಸಿ ಬ್ಯಾಂಕ್ ಒಳಗಾಗಿದೆ, ಈ ಹಿನ್ನಲೆಯಲ್ಲಿ ಇ-ಶಕ್ತಿ ವ್ಯಾಪ್ತಿಗೆ ಸಂಘಗಳ ಕಾರ್ಯಚಟುವಟಿಕೆಗಳನ್ನು ತರುವ ಪ್ರಾಯೋಗಿಕ ಪ್ರಯತ್ನಕ್ಕಾಗಿ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎಂದರು.
ಮೊದಲ ಹಂತದಲ್ಲಿ ೭೩೦೦ ಮಹಿಳಾ ಸಂಘಗಳನ್ನು ಇ-ಶಕ್ತಿ ವ್ಯಾಪ್ತಿಗೆ ತರಲಿದ್ದು, ೭೩ ಸಾವಿರ ಮಂದಿ ತಾಯಂದಿರು ಈ ಸಂಘಗಳ ಸದಸ್ಯರಾಗಿದ್ದಾರೆ ಎಂದ ಅವರು, ಮೊದಲ ಹಂತವನ್ನು ಮಾರ್ಚ್ ಅಂತ್ಯದೊಳಗೆ ಮುಗಿಸಲು ಬ್ಯಾಂಕ್ ಅಧಿಕಾರಿಗಳಿಗೆ ಸೂಚಿಸಿದರು.
ನಬಾರ್ಡ್ ಎಜಿಎಂ ನಟರಾಜನ್ ಮಾತನಾಡಿ, ಈಗಾಗಲೇ ಮಹಿಳಾ ಸ್ವಸಹಾಯ ಸಂಘಗಳ ಹೆಚ್ಚು ಶಿಕ್ಷಣ ಪಡೆದ ಬುದ್ದಿವಂತ ಹೆಣ್ಣು ಮಕ್ಕಳನ್ನೇ ಪ್ರೇರಕರಾಗಿ ಆಯ್ಕೆ ಮಾಡಿದ್ದು, ೩೦ ಸಂಘಗಳಿಗೆ ಒಬ್ಬರಂತೆ ನೇಮಿಸಿಕೊಳ್ಳಲಾಗುತ್ತದೆ ಮತ್ತು ಅವರಿಗೆ ತಿಂಗಳಿಗೆ ೪೨೦೦ ರೂ ಸಂಭಾವನೆ ಸಿಗಲಿದೆ ಜತೆಗೆ ೨೫೦ ರೂ ಮೊಬೈಲ್ ಬಳಕೆಗೆ ಹಣ ಸಿಗಲಿದೆ ಎಂದು ವಿವರಿಸಿದರು.

ಮಹಿಳಾ ಸಂಘಗಳಿಗೆ ಅತಿ ಹೆಚ್ಚು ಸಾಲ ನೀಡಿರುವುದು ಮಾತ್ರವಲ್ಲ, ವಸೂಲಾತಿಯಲ್ಲೂ ಅತ್ಯಂತ ಉತ್ತಮ ಸಾಧನೆ ಮಾಡಿರುವುದಕ್ಕಾಗಿ ಕೋಲಾರ ಡಿಸಿಸಿ ಬ್ಯಾಂಕನ್ನು ನಬಾರ್ಡ್ ಪ್ರಾಯೋಗಿಕವಾಗಿ ಆಯ್ಕೆ ಮಾಡಿಕೊಂಡಿದೆ, ಈಗ ಮೊದಲ ಹಂತವಾಗಿದ್ದು,ಮುಂದಿನ ದಿನಗಳಲ್ಲಿ ಎಲ್ಲಾ ಸಂಘಗಳನ್ನೂ ಇ-ಶಕ್ತಿ ವ್ಯಾಪ್ತಿಗೆ ಒಳಪಡಿಸಲಾಗುತ್ತದೆ ಎಂದು ತಿಳಿಸಿದರು.

 

ಫ್ರೆಶ್ ನ್ಯೂಸ್

Latest Posts

Featured Videos