ತುಮಕೂರು: ನಮ್ಮ ಸರ್ಕಾರ ಮಾಧ್ಯಮ ಕ್ಷೇತ್ರದ ಅಭಿವೃದ್ಧಿಗೆ ಬದ್ಧವಾಗಿದೆ. ಮಾಧ್ಯಮ ಅಕಾಡೆಮಿಯ ಮೂಲಕ ತರಬೇತಿ ಶಿಬಿರಗಳು, ಸಂವಾದ ಸಭೆಗಳು, ಗ್ರಾಮೀಣ ಪತ್ರಕರ್ತರ ಪ್ರೋತ್ಸಾಹ, ಡಿಜಿಟಲ್ ಮಾಧ್ಯಮ ತರಬೇತಿ ಶಿಬಿರಗಳನ್ನು ಆಯೋಜಿಸುವ ಮೂಲಕ ಸತ್ಯನಿಷ್ಠ ಸಮಾಜಮುಖಿ ಪತ್ರಕರ್ತರನ್ನು ರೂಪಿಸುವ ದಿಕ್ಕಿನಲ್ಲಿ ಪ್ರಯತ್ನಿಸುತ್ತಿದೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಹೇಳಿದರು.
ತುಮಕೂರು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಆಯೋಜಿಸಿದ್ದ ಮಾಧ್ಯಮ ಹಬ್ಬ “ಇಂಪ್ರೆಷನ್ -2025” ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಪ್ರಜಾಪ್ರಭುತ್ವದ 4ನೇ ಅಂಗ ಮಾಧ್ಯಮದ ಕುರಿತು ಚರ್ಚಿಸಲು, ಇದನ್ನು ಅಧ್ಯಯನ ಮಾಡುವ ಯುವ ಮನಸ್ಸುಗಳೊಂದಿಗೆ ಸಂವಾದ ನಡೆಸಲು, ಇಂತಹ ಮಾಧ್ಯಮ ಹಬ್ಬದಲ್ಲಿ ಭಾಗವಹಿಸುತ್ತಿರುವುದು ನನಗೆ ಹೆಮ್ಮೆ ಮತ್ತು ಸಂತೋಷದ ವಿಚಾರ.
ಮಗು ಮಾತಾಡುವ ಮೊದಲು ನೋಡಿ ಕಲಿಯುತ್ತದೆ, ನೋಟದ ಮೂಲಕವೇ ತನ್ನ ಸುತ್ತಲನ್ನು ಗ್ರಹಿಸುತ್ತದೆ. ಸಮಾಜದ ಬಗ್ಗೆ ಸ್ಪಷ್ಟ ನೋಟ-ಗ್ರಹಿಕೆ ಇದ್ದಾಗ ಪರಿಣಾಮಕಾರಿ ಪತ್ರಕರ್ತ ಹುಟ್ಟುತ್ತಾನೆ ಎಂದರು.
ಹೊಸ ಪತ್ರಕರ್ತರಲ್ಲಿ ಅಧ್ಯಯನಶೀಲತೆ ಮತ್ತು ಗ್ರಹಿಕೆಯ ಕೊರತೆ ಇರುವುದನ್ನು ನಾನು ಗಮನಿಸಿದ್ದೇನೆ. ಪತ್ರಕರ್ತರಾಗುವವರಿಗೆ ಮಗುವಿನ ಮನಸ್ಸು ಮುಖ್ಯ. ಪ್ರತಿಯೊಂದು ಮಗುವೂ ಮಾತಾಡುವ ಮೊದಲು ನೋಟದ ಮೂಲಕವೇ ತಿಳಿಯುತ್ತದೆ, ಅರಿಯುತ್ತದೆ, ಗ್ರಹಿಸುತ್ತದೆ. ಹೀಗಾಗಿ ನೋಟದ ಮೂಲಕ ಕಲಿಯುವುದು ಸಹಜವಾದ, ನೈಸರ್ಗಿಕವಾದ ಪ್ರಕ್ರಿಯೆ.
ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪದೇ ಪದೇ ಕುವೆಂಪು ಅವರ ಒಂದು ಮಾತನ್ನು ನೆನಪಿಸಿಕೊಳ್ಳುತ್ತಾರೆ. “ಮಗು ಹುಟ್ಟುವಾಗ ವಿಶ್ವ ಮಾನವನಾಗಿ ಹುಟ್ಟುತ್ತದೆ. ಬೆಳೆಯುತ್ತಾ ಅಲ್ಪ ಮಾನವನನ್ನಾಗಿ ಮಾಡಲಾಗುತ್ತದೆ”.
ಪತ್ರಕರ್ತರಾಗುವವರು ಪೂರ್ವಾಗ್ರಹ ಮುಕ್ತ ಮಗುವಿನ ಮನಸ್ಸಿನಿಂದ ಸಾಮಾಜಿಕ ವ್ಯವಸ್ಥೆಯನ್ನು, ಸಾಮಾಜಿಕ ತಾರತಮ್ಯಗಳನ್ನು ಇರುವುದನ್ನು ಇರುವ ಹಾಗೆ ಗಮನಿಸಬೇಕು. ಹೀಗಾದಾಗ ಮಾತ್ರ ಸಾಮಜಿಕ ಸಮಸ್ಯೆಗಳು ಮತ್ತು ಈ ಸಮಸ್ಯೆಗಳಿಗೆ ಕಾರಣವಾದ ಸಂಗತಿಗಳ ಬಗ್ಗೆ ಸ್ಪಷ್ಟ ಗ್ರಹಿಕೆ ಬರುತ್ತದೆ. ಈ ಸ್ಪಷ್ಟತೆಯೇ ಪರಿಣಾಮಕಾರಿ ಪತ್ರಕರ್ತನನ್ನು ರೂಪಿಸುತ್ತದೆ. ಇದರಿಂದಾಗಿ ಅಭಿವೃದ್ಧಿ ಪತ್ರಿಕೋದ್ಯಮಕ್ಕೆ ಹೆಚ್ಚು ಅನುಕೂಲ ಮತ್ತು ಮಹತ್ವ ಸಿಗುತ್ತದೆ ಎಂದರು.
ಇತ್ತೀಚಿನ ದಶಕಗಳಲ್ಲಿ ಮಾಧ್ಯಮ ಕ್ಷೇತ್ರದಲ್ಲಿ ತಂತ್ರಜ್ಞಾನದ ಕಾರಣಕ್ಕೆ ಕ್ರಾಂತಿಕಾರಿ ಬದಲಾವಣೆಗಳು ಸಂಭವಿಸುತ್ತಿವೆ. ಮುದ್ರಣ ಮಾಧ್ಯಮದಿಂದ ಡಿಜಿಟಲ್ ಮಾಧ್ಯಮವನ್ನೂ ದಾಟಿ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಕಡೆಗೆ ಧಾವಿಸಿ ಬಂದಿದ್ದೇವೆ. ಈ ಬದಲಾವಣೆಯು ಮಾಹಿತಿ ಹರಿವಿನ ವೇಗವನ್ನು ಹೆಚ್ಚಿಸಿದೆ, ಆದರೆ ಅದೇ ವೇಳೆ ಸುಳ್ಳು ಸುದ್ದಿ, clickbait, ದ್ವೇಷ ಭಾಷೆ ಇತ್ಯಾದಿಗಳ ಹೊಸ ಹೊಸ ಸವಾಲುಗಳನ್ನೂ, ಅಪಾಯಗಳನ್ನೂ ಮನುಷ್ಯ ಜಗತ್ತಿನ ಮುಂದಿಟ್ಟಿದೆ.
ಇಂತಹ ಸಂದರ್ಭದಲ್ಲಿ ಪತ್ರಿಕೋದ್ಯಮ ಮತ್ತು ಮಾಧ್ಯಮ ಶಿಕ್ಷಣವು ನೈತಿಕತೆ ಮತ್ತು ಜವಾಬ್ದಾರಿಯನ್ನೂ ಜೊತೆಗೆ ಕಲಿಸಬೇಕಾಗಿದೆ. ಮೊದಲು ಸತ್ಯ, ನಂತರ ವೇಗ ಎಂಬ ನುಡಿಯು ಈಗ ಇನ್ನೂ ಹೆಚ್ಚು ಪ್ರಸ್ತುತವಾಗಿದೆ.
Chat GPT ಇರಬಹುದು ಅಥವಾ AI ಯುಗದಲ್ಲಿ ನಿಮ್ಮತನವನ್ನು ಕಳೆದುಕೊಳ್ಳದೆ ಕಾರ್ಯನಿರ್ವಹಿಸಿದರೆ, ಕೃತಕತೆ ಇಲ್ಲದ ಯಶಸ್ಸು ಸಾಧ್ಯ. ಇದನ್ನು ಸಾಧಿಸಲು ಶಿಕ್ಷಣ ಮತ್ತು ತರಬೇತಿಯ ಅಗತ್ಯತೆ ಇದೆ.
ಪ್ರತಿಯೊಬ್ಬ ಮಾಧ್ಯಮ ವಿದ್ಯಾರ್ಥಿಗೆ ನಿಖರ ಮಾಹಿತಿ ಸಂಗ್ರಹಣೆ, ಬೋಧನೆಯ ಶೈಲಿ, ವಿಶ್ಲೇಷಣಾತ್ಮಕ ದೃಷ್ಟಿಕೋನ ಹಾಗೂ ಸಮಾಜದ ಅಸಮಾನತೆಗಳನ್ನು ಗುರುತಿಸುವ ನೈತಿಕ ಬದ್ಧತೆ ಅತ್ಯಗತ್ಯ. ಮಾಧ್ಯಮ ಇಂದಿನ ಕಾಲದಲ್ಲಿ ಕೇವಲ ಸುದ್ದಿಯನ್ನು ನೀಡುವುದಲ್ಲ. ಇವು ಆಲೋಚನೆಗಳನ್ನು, ಅಭಿಪ್ರಾಯಗಳನ್ನು ರೂಪಿಸುವ ಶಕ್ತಿಯನ್ನೂ ಹೊಂದಿವೆ. ಈ ಕಾರಣಕ್ಕಾಗಿಯೇ ಮಾಧ್ಯಮಗಳನ್ನು opinion makers ಎಂದು ಪರಿಗಣಿಸಲಾಗುತ್ತಿದೆ.