ಡೀನೋಟಿಫಿಕೇಶನ್ ಪ್ರಕರಣ: ವರದಿಗೆ ಸುಪ್ರೀಂ ಸೂಚನೆ

ಡೀನೋಟಿಫಿಕೇಶನ್ ಪ್ರಕರಣ: ವರದಿಗೆ ಸುಪ್ರೀಂ ಸೂಚನೆ

ನವದೆಹಲಿ, ಜ. 07: ಯಡಿಯೂರಪ್ಪ ಮತ್ತು ಡಿಕೆ ಶಿವಕುಮಾರ್ ವಿರುದ್ಧದ ಬೆನ್ನಿಗಾನಹಳ್ಳಿ ಡೀನೋಟಿಫಿಕೇಶನ್ ಪ್ರಕರಣದಲ್ಲಿ ಎಸ್.ಆರ್. ಹಿರೇಮಠ್ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಇಂದು ನಡೆಸಿತು. ಲೋಕಾಯುಕ್ತದಲ್ಲಿ ತಾವು ಸಲ್ಲಿಸಿದ್ದ ದೂರಿನ ಸ್ಥಿತಿಗತಿ ಏನು? ಪ್ರಕರಣ ಇತ್ಯರ್ಥವಾಗುವುದು ಯಾಕೆ ತಡವಾಯಿತು? ಹೈಕೋರ್ಟ್ನಲ್ಲಿ ನೀವು ಯಾವ ಕಾರಣಕ್ಕೆ ಭಾಗಿಯಾಗಲಿಲ್ಲ? ಈ ಪ್ರಕರಣದಲ್ಲಿ ತಮ್ಮ ಪಾತ್ರ ಏನು ಇತ್ಯಾದಿಯನ್ನು  ವಿವರದೊಂದಿಗೆ ಅಫಿಡವಿಟ್ ಸಲ್ಲಿಸಿ ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಹಿರೇಮಠ್ ಅವರಿಗೆ ಸೂಚಿಸಿದ ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೋಬ್ಡೆ ಅವರಿದ್ದ ನ್ಯಾಯಪೀಠವು, ಈ ಅರ್ಜಿ ವಿಚಾರಣೆಯನ್ನು ಎರಡು ವಾರ ಮುಂದಕ್ಕೆ ಹಾಕಿತು.

ನೀವು ಬೇರೊಬ್ಬರು ಸಲ್ಲಿಸಿದ್ದ ಅರ್ಜಿಯನ್ನಿಟ್ಟುಕೊಂಡು ಮುಂದುವರಿಯುವುದು ಸಾಧ್ಯವಿಲ್ಲ. ನಿಮ್ಮ ಅರ್ಜಿಯ ವಿಚಾರ ಏನಾಯಿತು ಎಂಬುದನ್ನು ತಿಳಿಸಿ ಎಂದು ಎಸ್.ಆರ್. ಹಿರೇಮಠ್ ಅವರಿಗೆ ಕೋರ್ಟ್ ತಿಳಿಸಿತು. ಹಿರೇಮಠ್ ಪರವಾರಿ ವಕೀಲ ಪ್ರಶಾಂತ್ ಭೂಷಣ್ ವಾದ ಮಂಡಿಸಿದರು. ಎರಡು ವಾರದ ಬಳಿಕ ಸರ್ವೋಚ್ಚ ನ್ಯಾಯಾಲಯ ಮತ್ತೆ ವಿಚಾರಣೆ ಕೈಗೆತ್ತಿಕೊಳ್ಳಲಿದೆ.

ಏನಿದು ಬೆನ್ನಿಗಾನಹಳ್ಳಿ ನೋಟಿಫಿಕೇಶನ್ ಪ್ರಕರಣ?

ಓಲ್ಡ್ ಮದ್ರಾಸ್ ರಸ್ತೆಯಲ್ಲಿರುವ ಬೆನ್ನಿಗಾನಹಳ್ಳಿಯಲ್ಲಿರುವ ಕೆಲ ಭೂಮಿಯನ್ನು ಎನ್‌ಜಿಇಎಫ್ ಲೇಔಟ್ ನಿರ್ಮಾಣಕ್ಕಾಗಿ 1986ರಲ್ಲಿ ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಆದರೂ ಕೂಡ ಡಿಕೆ ಶಿವಕುಮಾರ್ ಅವರು ನಗರಾಭಿವೃದ್ಧಿ ಸಚಿವರಾಗಿದ್ದಾಗ 2003ರಲ್ಲಿ ಶ್ರೀನಿವಾಸನ್ ಎಂಬುವರಿಂದ ಈ ಭೂಸ್ವಾಧೀನಗೊಂಡ ಜಮೀನನ್ನು ಖರೀದಿ ಮಾಡಿದ್ದರು. 2010ರಲ್ಲಿ ಯಡಿಯೂರಪ್ಪ ಸಿಎಂ ಆಗಿದ್ದ ಅವಧಿಯಲ್ಲಿ ಇದರ 4 ಎಕರೆ 20 ಗುಂಟೆ ಜಮೀನನ್ನು ಡೀನೋಟಿಫಿಕೇಶನ್ ಮಾಡಲಾಯಿತು.

ಬಿಎಸ್‌ವೈ ಅವರ ಪ್ರಭಾವ ಬಳಸಿ ಡಿಕೆ ಶಿವಕುಮಾರ್ ಅವರು ಡೀನೋಟಿಫಿಕೇಶನ್ ಮಾಡಿಸಿಕೊಂಡಿದ್ಧಾರೆ ಎಂದು ಜಮೀನಿನ ಮೂಲ ಮಾಲೀಕ ಕಬ್ಬಾಳೇ ಗೌಡರು ಲೋಕಾಯುಕ್ತ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು. ಸಿಎಜಿ ವರದಿ ಆಧರಿಸಿ ಲೋಕಾಯುಕ್ತ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು. ಕಬ್ಬಾಳೇಗೌಡರು ತಮ್ಮ ದೂರನ್ನು ವಾಪಸ್ ಪಡೆದುಕೊಂಡಿದ್ದರಿಂದ 2015ರಲ್ಲಿ ರಾಜ್ಯ ಹೈಕೋರ್ಟ್ ಈ ಪ್ರಕರಣವನ್ನು ವಜಾಗೊಳಿಸಿತು. ಈ ತೀರ್ಪನ್ನು ಪ್ರಶ್ನಿಸಿ ಎಸ್.ಆರ್. ಹಿರೇಮಠ್ ಅವರು ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos