ಅಧ್ಯಕ್ಷರ ನೇಮಕಾತಿ ವಿಳಂಬ: ಅಭಿವೃದ್ಧಿ ಯೋಜನೆಗಳಿಗೆ ತೊಡಕು

ಅಧ್ಯಕ್ಷರ ನೇಮಕಾತಿ ವಿಳಂಬ: ಅಭಿವೃದ್ಧಿ ಯೋಜನೆಗಳಿಗೆ ತೊಡಕು

ಬೆಂಗಳೂರು, ಸೆ. 12: ಬಿಡಿಎ ಅಧ್ಯಕ್ಷರ ನೇಮಕವಾಗದೆ ಇರುವ ಕಾರಣ ಕಳೆದ ಆರು ತಿಂಗಳಿಂದ ಮಂಡಳಿಯಲ್ಲಿ ಯಾವುದೇ ಸಭೆ ನಡೆಯದ ಕಾರನ ಹೊಸ ಯೋಜನೆಗಳ ಜಾರಿಗೆ ತೊಡಕಾಗಿ ಪರಿಣಮಿಸಿದೆ. ನಗರಾಭಿವೃದ್ದಿ ಪ್ರಾಧಿಕಾರ(ಬಿಡಿಎ)ಗೆ ಸರ್ಕಾರ ಅಧ್ಯಕ್ಷರನ್ನು ನೇಮಕ ಮಾಡದಿರುವುದೇ ಸಾರ್ವಜನಿಕ ಅಭಿವೃದ್ದಿ ಕೆಲಸಗಳಿಗೆ ತೊಡಕಾಗಿದೆ.

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಅವದಿಯಲ್ಲಿ ಅಂದಿನ ಬಿಡಿಎ ಆಯುಕ್ತ ಹಾಗೂ ಅಧ್ಯಕ್ಷರ ಶೀತಲ ಸಮರದಿಂದಾಗಿ ಮಂಡಳಿಯ ಸಭೆಗಳು ನಿಯಮಿತವಾಗಿ ನಡೆದಿರಲಿಲ್ಲ. ಹಾಗಾಗಿ ಹಲವು ಪ್ರಸ್ತಾವನೆಗಳಿಗೆ ಒಪ್ಪಿಗೆ ಸಿಗದೆ ಕಡತಗಳು ವಿಲೇವಾರಿಯಾಗದೆ ದೂಳು ಹಿಡಿಯುತ್ತಿವೆ.

ಕೆಂಪೇಗೌಡ ಲೇಔಟ್ ಮತ್ತು ಅರ್ಕಾವತಿ ಬಡಾವಣೆಗಳಲ್ಲಿ ಈಗಾಗಲೇ ಹಂಚಿಕೆಯಾಗಿರುವ ನಿವೇಶನಗಳ ನೊಂದಣಿ, ಬದಲಿ ನಿವೇಶನ ಹಾಗು ಸಿಎ ನಿವೇಶನಗಳ ಹಂಚಿಕೆ ಪ್ರಸ್ತಾವನೆಗಳು ಬಾಕಿ ಉಳಿದಿವೆ.

ಎನ್‌ ಜಿಟಿ ಆದೇಶದಂತೆ ಬೆಳ್ಳಂದೂರು ಕೆರೆ ಅಭಿವೃದ್ದಿಗೆ ಕೋಟ್ಯಂತರ ರೂ. ವೆಚ್ಚದ ಕಾಮಗಾರಿ ಕೈಗೆತ್ತಿಕೊಳ್ಳುವ ಡಿಪಿಆರ್ ಒಪ್ಪಿಗೆ ನೀಡಬೇಕಿದ್ದು, ಇದರ ಜೊತೆಯಲ್ಲಿ ಪ್ರಾಧಿಕಾರ ಕೈಗೆತ್ತಿಕೊಳ್ಳಬೇಕಿರುವ ವಿವಿದ ಕಾಮಗಾರಿ ಅನುಷ್ಠಾನಕ್ಕೆ ಮಂಡಳಿ ಸಭೆಯ ಒಪ್ಪಿಗೆ ಅಗತ್ಯ ಇರುವ ಕಾರಣ ಸರ್ಕಾರ ಅಧ್ಯಕ್ಷರನ್ನು ನೇಮಕ ಮಾಡದೆ ಇರುವುದು ಅಭಿವೃದ್ಧಿ ಯೋಜನೆಗಳಿಗೆ ತೊಡಕಾಗಿದೆ.

ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರನ್ನು ಹಂಗಾಮಿ ಬಿಡಿಎ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.

ಹಂಗಾಮಿ ಅಧ್ಯಕ್ಷರ ನೇತೃತ್ವದಲ್ಲಿ ಸಭೆ ನಡೆಸಿದರೂ ಹಣಕಾಸು ಪ್ರಸ್ತಾವನೆಗೆ ಅನುಮೋದನೆ ನೀಡುವ ಅಧಿಕಾರ ಇಲ್ಲ. ಹಾಗಾಗಿ ಸಮಸ್ಯೆ ಮತ್ತಷ್ಟು ಉಲ್ಬಣಗೊಳ್ಳುವ ಸಾಧ್ಯತೆಗಳಿವೆ.

ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಯಶವಂತಪುರ ಶಾಸಕ ಎಸ್.ಟಿ.ಸೋಮಶೇಖರ್ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು. ಆಯುಕ್ತ ರಾಕೇಶ್ ಸಿಂಗ್ ಮತ್ತು ಅಧ್ಯಕ್ಷ ಸೋಮಶೇಖರ್ ನಡುವೆ ವೈಮನಸ್ಸು ಹಾಗೂ ಪರಸ್ಪರ ಹೊಂದಾಣಿಕೆ ಇಲ್ಲದ ಕಾರಣ ನಿಗದಿತ ವೇಳೆಗೆ ಸಭೆಗಳು ನಡೆಯಲಿಲ್ಲ.

ಅದೇ ಸಂದರ್ಭದಲ್ಲಿ ಲೋಕಸಭೆ ಚುನಾವಣೆ ನಡೆದು ಚುನಾವಣಾ ನೀತಿಸಂಹಿತೆ ಜಾರಿಯಾದ ಕಾರಣ ಯಾವುದೇ ಅಭಿವೃದ್ಧಿ ಯೊಜನೆಗಳು ಜಾರಿಯಾಗಲಿಲ್ಲ. ಸದ್ಯದ ರಾಜ್ಯದ ಪರಿಸ್ಥಿತಿ ಅವಲೋಕಿಸಿದರೆ ನಿಗಮ ಮಂಡಳಿ ಅಧ್ಯಕ್ಷರು ಮತ್ತು ಸದಸ್ಯರ ನೇಮಕ ಪ್ರಕ್ರಿಯೆ ವಿಳಂಬವಾಗುವ ಸಾಧ್ಯತೆಗಳೇ ಹೆಚ್ಚು ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.

ಅಧಿಕಾರದಲ್ಲಿರುವ ಆಡಳಿತ ಪಕ್ಷದ ಹಿರಿಯ ಶಾಸಕರು ಬಿಡಿಎ ಅಧ್ಯಕ್ಷ ಹುದ್ದೆ ಮೇಲೆ ಕಣ್ಣಿಟ್ಟಿದ್ದಾರೆ. ಸಚಿವ ಸ್ಥಾನ ವಂಚಿತರಾಗಿರುವ ಹಿರಿಯ ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಬಿಡಿಎ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದರಾದರೂ ಸಿಎಂ ರಾಜಕೀಯ ಕಾರ್ಯದರ್ಶಿ ಸ್ಥಾನ ನೀಡಿ ಸಮಾಧಾನ ಪಡಿಸಲಾಗಿದೆ. ಆದರೂ ಲಾಭದ ಬಿಡಿಎ ಹುದ್ದೆ ಮೇಲೆ ಅವರು ಕಣ್ಣಿಟ್ಟಿದ್ದಾರೆ.

ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಹಾಗೂ ಸಿ.ವಿ.ರಾಮನ್‌ ನಗರ ಕ್ಷೇತ್ರದ ಶಾಸಕ ಎಸ್.ರಘು ಅವರ ಹೆಸರುಗಳು ಮುನ್ನೆಲೆಯಲ್ಲಿವೆ. ಆದರೂ ಪಕ್ಷ ಅಧಿಕಾರಕ್ಕೆ ಬರಲು ಕಾರಣಕರ್ತರಾದ ಅನರ್ಹ ಶಾಸಕರಾದ ಬೈರತಿ ಬಸವರಾಜು ಮತ್ತು ಎಸ್.ಟಿ.ಸೋಮಶೇಖರ್ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ.

ಒಟ್ಟಾರೆ ನಗರದ ಬಿಡಿಎ ವ್ಯಾಪ್ತಿಯಲ್ಲಿ ನೆನೆಗುದಿಗೆ ಬಿದ್ದಿರುವ ಕೋಟ್ಯಂತರ ರೂ. ಯೋಜನೆಗಳ ಮತ್ತು ಕಾಮಗಾರಿಗಳ ಕಡತಗಳು ಅಧ್ಯಕ್ಷರು ನೇಮಕವಾಗುವ ತನಕ ವಿಲೇವಾರಿ ಆಗುವುದಿಲ್ಲ. ಹಣಕಾಸು ಬಿಡುಗಡೆ ಮಾಡುವಂತಿಲ್ಲ. ಇಷ್ಟೆಲ್ಲ ಅವಾಂತರಗಳ ನಡುವೆ ಗುತ್ತಿಗೆದಾರರು ಮತ್ತು ಅಧಿಕಾರಿಗಳು ಕೈಕಟ್ಟಿ ಕೂರುವಂತಾಗಿದೆ.

 

ಫ್ರೆಶ್ ನ್ಯೂಸ್

Latest Posts

Featured Videos