ರಾಜ್ಯದ ಹಿತರಕ್ಷಣೆಗೆ ಕೈ ಜೋಡಿಸುವಂತೆ ಕೇಂದ್ರ ಸಚಿವರು, ಸಂಸದರಿಗೆ ಡಿಸಿಎಂ ಮನವಿ

ರಾಜ್ಯದ ಹಿತರಕ್ಷಣೆಗೆ ಕೈ ಜೋಡಿಸುವಂತೆ ಕೇಂದ್ರ ಸಚಿವರು, ಸಂಸದರಿಗೆ ಡಿಸಿಎಂ ಮನವಿ

ಬೆಂಗಳೂರು: ಕೇಂದ್ರ ಸಚಿವ ವಿ ಸೋಮಣ್ಣ ಅವರು ಕೇಂದ್ರ ಜಲಶಕ್ತಿ ಸಚಿವಾಲಯದ ಭಾಗ. ಆಲಮಟ್ಟಿ ಯೋಜನೆ ನಮ್ಮ ರಾಜ್ಯದ ಹಿತ. ನಮಗೆ ನೆರೆ ರಾಜ್ಯಗಳ ಜತೆ ತಿಕ್ಕಾಟ ಇಷ್ಟವಿಲ್ಲ. ಈ ಯೋಜನೆ ತಡವಾಗುತ್ತಿರುವುದರಿಂದ ಯೋಜನೆ ವೆಚ್ಚ ವಿಪರೀತ ಏರಿಕೆಯಾಗುತ್ತಿದೆ. ಯೋಜನೆ ಭೂಸ್ವಾಧೀನಕ್ಕೆ 1 ಲಕ್ಷ ಕೋಟಿ ರೂಪಾಯಿ ಬೇಕಾಗಿದೆ. ನಮ್ಮ ಪಾಲಿನ ನೀರು ಬಳಸಲು ಈ ಯೋಜನೆ ಮುಖ್ಯ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್  ಹೇಳಿದರು.

ವಿಧಾನಸೌಧದಲ್ಲಿ ಸೋಮವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಕೃಷ್ಣಾ  ನ್ಯಾಯಾಧೀಕರಣದ ತೀರ್ಪಿನಂತೆ ನಮ್ಮ ರಾಜ್ಯದ ಪಾಲಿನ ನೀರು ಬಳಸಿಕೊಳ್ಳಲು ಆಲಮಟ್ಟಿ ಅಣೆಕಟ್ಟೆ ಎತ್ತರವನ್ನು 524 ಮೀಟರ್ ಗೆ ಹೆಚ್ಚಿಸಬೇಕಿದೆ. ನ್ಯಾಯಧೀಕರಣದ ತೀರ್ಪು ಬಂದಾಗ ಸುಮ್ಮನಿದ್ದ ಮಹಾರಾಷ್ಟ್ರ ಸಿಎಂ ಈಗ ಹಠಾತ್ತನೇ ಕರ್ನಾಟಕದ ಸಿಎಂ ಅವರಿಗೆ ಪತ್ರ ಬರೆದು ಆಕ್ಷೇಪ ವ್ಯಕ್ತಪಡಿಸಿರುವುದು ತೀವ್ರ ಆಶ್ಚರ್ಯ ತಂದಿದೆ. ಈ ಹಿನ್ನೆಲೆಯಲ್ಲಿ, ಯೋಜನೆ ಜಾರಿ ಮಾಡಿ ರಾಜ್ಯ ಹಾಗೂ ರೈತರ ಹಿತ ಕಾಯಲು ಎಲ್ಲಾ ಸಂಸದರು, ಕೇಂದ್ರ ಸಚಿವರು ಸಹಕರಿಸಬೇಕು ಎಂದು ಕೈಮುಗಿದು ಕೇಳಿಕೊಳ್ಳುತ್ತೇನೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮನವಿ ಮಾಡಿದರು.

ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ಅವರು ನಮ್ಮ ಸಿಎಂ ಸಿದ್ದರಾಮಯ್ಯ ಅವರಿಗೆ ಮೇ 9 ರಂದು ಪತ್ರ ಬರೆದಿದ್ದಾರೆ. ಆಣೆಕಟ್ಟೆ ಎತ್ತರ ಹೆಚ್ಚಳ ಮಾಡಿದರೆ ಮಹಾರಾಷ್ಟ್ರದ ಸಾಂಗ್ಲಿ, ಕೊಲ್ಹಾಪುರ ಜಿಲ್ಲೆಗಳು ಪ್ರವಾಹ ಸಮಸ್ಯೆ ಎದುರಿಸುತ್ತವೆ. ಹೀಗಾಗಿ ಈ ತೀರ್ಮಾನ ಮರುಪರಿಶೀಲಿಸಿ ಎಂದು ಪತ್ರದಲ್ಲಿ ತಿಳಿಸಿದ್ದಾರೆ ಎಂದರು. ಇದನ್ನೂ ಓದಿ: ಬಾನು ಮುಷ್ತಾಕ್, ದೀಪಾ ಬಾಸ್ತಿ ಅವರಿಗೆ 10 ಲಕ್ಷ ಪುರಸ್ಕಾರ

ಮಹಾರಾಷ್ಟ್ರ ಸಿಎಂ ಅವರ ಈ ಪತ್ರ ನಮಗೆ ಆಘಾತ ತಂದಿದೆ. ಕಾರಣ ಇದುವರೆಗೂ ಈ ಯೋಜನೆ ವಿಚಾರವಾಗಿ ಮಹಾರಾಷ್ಟ್ರ ಎಂದೂ ಆಕ್ಷೇಪ ಸಲ್ಲಿಸಿರಲಿಲ್ಲ. 2010 ರ ತೀರ್ಪಿನ ಬಗ್ಗೆ ಮಹಾರಾಷ್ಟ್ರ ಎಲ್ಲೂ ಪ್ರಶ್ನೆ ಎತ್ತಿರಲಿಲ್ಲ. ಈ ಯೋಜನೆ ಜಾರಿ ಮಾಡಲಿ ಎಂದು ಮಹಾರಾಷ್ಟ್ರ ಕೂಡ ಅಫಿಡವಿಟ್ ಸಲ್ಲಿಸಿತ್ತು. ಆದರೆ ಈಗ ಇದ್ದಕ್ಕಿದ್ದಂತೆ ಈ ಪತ್ರ ಬರೆದಿದ್ದಾರೆ” ಎಂದು ತಿಳಿಸಿದರು.

ಈ ಯೋಜನೆ ನ್ಯಾಯಾಧಿಕರಣದಲ್ಲಿ ನಮಗೆ ಸಿಕ್ಕಿರುವ ಹಕ್ಕು. ಹೀಗಾಗಿ ನಮ್ಮ ಸಿಎಂ ಸಹ ಒಂದೆರಡು ದಿನಗಳಲ್ಲಿ ಪತ್ರ ಬರೆಯಲಿದ್ದಾರೆ. ನಮ್ಮ ರಾಜ್ಯದಿಂದ ಆಯ್ಕೆಯಾಗಿರುವ ಎಲ್ಲಾ ಸಂಸದರು, ಕೇಂದ್ರದ ಸಚಿವರು ಈ ವಿಚಾರವಾಗಿ ನಮಗೆ ಸಹಕಾರ ನೀಡಬೇಕು ಎಂದು ಕೈ ಮುಗಿದು ಮನವಿ ಮಾಡುತ್ತೇನೆ ಎಂದು ತಿಳಿಸಿದರು.

 

ಫ್ರೆಶ್ ನ್ಯೂಸ್

Latest Posts

Featured Videos