‘ಪ್ರಜಾವಾಹಿನಿ’ ದೈನಿಕ ಲೋಕಾರ್ಪಣೆ

 ‘ಪ್ರಜಾವಾಹಿನಿ’ ದೈನಿಕ ಲೋಕಾರ್ಪಣೆ

ಬೆಂಗಳೂರು, ಅ. 24: ಕನ್ನಡ ಮಾಧ್ಯಮ ಲೋಕಕ್ಕೆ ಒಂದು ರೀತಿ ಬುಧವಾರ ಅವಿಸ್ಮರಣೀಯ ದಿನ. ರಾಜಧಾನಿ ಬೆಂಗಳೂರಿಗರು ಬಹು ಇಷ್ಟಪಡುವ, ಜನಮೆಚ್ಚುವ ಬಹುನಿರೀಕ್ಷಿತ ಒಂದು ಮುದ್ರಣ, ಮತ್ತೊಂದು ದೃಶ್ಯ ಮಾಧ್ಯಮ ಕಾಲಿಟ್ಟಿವೆ.

ಪ್ರತಿಷ್ಠಿತ ಬೆಂಗಳೂರು ಪ್ರೆಸ್‌ಕ್ಲಬ್ ನಡೆದ ಅದ್ದೂರಿ ಸಮಾರಂಭದಲ್ಲಿ `ಪ್ರಜಾವಾಹಿನಿ’ ಕನ್ನಡ ದಿನಪತ್ರಿಕೆ ಮತ್ತು ‘ಬ್ಲೂಮ್ ಟಿವಿ’ ಕನ್ನಡ ಸುದ್ಧಿವಾಹಿನಿ ಅಪಾರ ಗಣ್ಯಾತಿಗಣ್ಯರ ಸಮ್ಮುಖದಲ್ಲಿ ಲೋಕಾರ್ಪಣೆಗೊಂಡವು.

ಬೆಂಗಳೂರು ಮಹಾಪೌರ ಗೌತಮ್ ಕುಮಾರ್ ಜೈನ್ ಮತ್ತು ಉಪಮಹಾಪೌರ ರಾಂ ಮೋಹನ್ ರಾಜ್ ಅವರು `ಪ್ರಜಾವಾಹಿನಿ’ ಕನ್ನಡ ದಿನಪತ್ರಿಕೆ ಮತ್ತು ಕನ್ನಡ ಸುದ್ಧಿವಾಹಿನಿ ‘ಬ್ಲೂಮ್ ಟಿವಿ’ಯನ್ನು ಲೋಕಾರ್ಪಣೆಗೊಳಿಸಿದರು.

ಕೃಪಾನಿಧಿ ವಿದ್ಯಾಸಂಸ್ಥೆಯ ಮುಖ್ಯಸ್ಥೆ ಗೀತಾ ನಾಗ್‌ಪಾಲ್ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳು ಮುಖಂಡರು, ಸಂಘಸಂಸ್ಥೆಗಳ ನೇತಾರರು, ಸಮಾಜ ಸೇವಕರು, ಓದುಗರು, ಹಿತೈಷಿಗಳು ಅಭಿಮಾನಿಗಳು ಈ ಅದ್ದೂರಿ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

ಜನ ಮೆಚ್ಚುಗೆ ಗಳಿಸಲಿ-ಮೇಯರ್

ಮಹಾಪೌರ ಗೌತಮ್ ಕುಮಾರ್ ಜೈನ್, ಸಮಾಜದ ಕಟ್ಟ ಕಡೆಯ ಶೋಷಿತರ ಧ್ವನಿಯಾಗಿ, ಸಮಾಜಮುಖಿಯ ಪ್ರತಿಬಿಂಬವಾಗಿ ಪ್ರತಿಷ್ಠಿತ ಪ್ರಜಾವಾಹಿನಿ ದಿನಪತ್ರಿಕೆ ಮತ್ತು ಬ್ಲೂಮ್ ಟಿವಿ ರಾಜ್ಯದ ಸಮಸ್ತ ಜನತೆಯ ಮೆಚ್ಚುಗೆ ಗಳಿಸಲಿ ಎಂದು ಶುಭ ಹಾರೈಸಿದರು.

ಯಾರೇ ತಪ್ಪು ಮಾಡಲಿ ನಿರ್ಭೀತಿಯಿಂದ ಹೊರಹಾಕಿ ಎಂದು ಕರೆ ನೀಡಿದ ಗೌತಮ್ ಕುಮಾರ್ ಜೈನ್, ವಾಸ್ತವಿಕತೆಯನ್ನು ಬಿಂಬಿಸಲಿ ಎಂದು ಆಶಿಸಿದರಲ್ಲದೆ, ಇಂದು ದೃಶ್ಯ ಮಾಧ್ಯಮಗಳ ಪೈಪೋಟಿಯ ನಡುವೆಯೂ `ಪ್ರಜಾವಾಹಿನಿ’ ಕನ್ನಡ ದಿನಪತ್ರಿಕೆ ಮತ್ತು ಕನ್ನಡ ಸುದ್ಧಿವಾಹಿನಿ ‘ಬ್ಲೂಮ್ ಟಿವಿ’ ಸಮರ್ಥವಾಗಿ ನಿಬಾಯಿಸಿ, ರಾಜ್ಯದೆಲ್ಲೆಡೆ ಜನಪ್ರಿಯ ಮಾಧ್ಯಮಗಳಾಗಿ ಹೊರಹೊಮ್ಮಲಿ ಎಂದು ಹೇಳಿದರು.

ಸಮಾಜಕ್ಕೆ ಚಾಟಿಯಾಗಲಿ

ಸ್ಥಳೀಯವಾಗಿ ಬೆಂಗಳೂರು ನಗರದ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಚಾಟಿ ಮುಟ್ಟಿಸಬೇಕು. ಸಮಾಜಮುಖಿಯಾಗಿ ಕಾರ್ಯನಿರ್ವಹಿಸಲು ‘ಪ್ರಜಾವಾಹಿನಿ’ ನಮ್ಮೆಲ್ಲರಿಗೂ ಮಾರ್ಗದರ್ಶನವಾಗಬೇಕು ಎಂದು ಎಂದರು.

ಇತ್ತೀಚೆಗೆ ದೃಶ್ಯ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳು ಅತ್ಯಂತ ಪ್ರಭಾವ ಶಾಲಿಯಾಗಿದ್ದು, ಇವುಗಳ ನಡುವೆ ಆರೋಗ್ಯಕರ ಪೈಪೋಟಿಯೊಂದಿಗೆ ಸಮಾಜಕ್ಕೆ ಬೇಕಾದ ವಸ್ತುನಿಷ್ಟ ಸುದ್ದಿಗಳನ್ನು ಬಿತ್ತರಿಸಿ, ರಾಜ್ಯದ ಎಲ್ಲೆಡೆ ಮನೆ ಮಾತಾಗಲೆಂದ ಮೇಯರ್ ಗೌತಮ್ ಕುಮಾರ್ ಜೈನ್, ಆಶಿಸಿದರು.

ನಾಡಿನ ಒಡನಾಡಿ-ಉಪಮೇಯರ್

ಉಪ ಮೇಯರ್ ರಾಂ ಮೋಹನ್ ರಾಜ್ ಮಾತನಾಡಿ, ಈಗಾಗಲೇ ‘ಪ್ರಜಾವಾಹಿನಿ’ ಕೂಸಲ್ಲೇ ಜನರ ಮನೆ ಮಾತಾಗಿದೆ. ಪ್ರಜಾವಾಹಿನಿ ಹೆಸರಲ್ಲೇ ದೊಡ್ಡ ಅದ್ಭುತವಿದೆ ಎಂದು ವ್ಯಾಖ್ಯಾನಿಸಿದ ಅವರು, ನಾಡಿನ ಜನರ ಜೀವನಾಡಿಯಾಗಲಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಮಾಜದ ಅಂಕುಡೊಂಕು, ಓರೆ ಕೋರೆಗಳನ್ನು ಎತ್ತಿ ಹಿಡಿದು ದಮನಿತರ ಧ್ವನಿಯ ಪ್ರತಿಬಿಂಬದಂತೆ ಮನೆ ಮನೆಯ ವಾಹಿನಿಯಾಗಿ ಸತ್ಯವನ್ನು ಜನರ ಮುಂದಿಡುವ ಮೂಲಕ ಜನ ಮೆಚ್ಚುವ ಪತ್ರಿಕೆಯಾಗಿ ಹೊರ ಹೊಮ್ಮಲೆಂದು ಆಶಿಸಿದ, ಉಪಮೇಯರ್, ಬೆಂಗಳೂರಿನ  ಸ್ಥಳೀಯ ಪತ್ರಿಕೆಗಳು ಪರಿಣಾಮಕಾರಿಯಾಗಿ ಪ್ರಸರಣ ಹೊಂದಿಲ್ಲ. ಆದರೆ, ಪ್ರಜಾವಾಹಿನಿ ಬೆಂಗಳೂರು ಸೇರಿದಂತೆ ನಾಡಿನೆಲ್ಲೆಡೆ ಓದುಗರ ಮನಗೆಲ್ಲುವ ಕೆಲಸ ಮಾಡಲಿ ಎಂದು ರಾಂ ಮೋಹನ್ ರಾಜ್ ಮನವಿ ಮಾಡಿದರು.

ಮುಖಂಡರ ದಂಡು

ಸಮಾರಂಭದಲ್ಲಿ ಬಿಜೆಪಿ ಮುಖಂಡ ಹೂಡಿ ಜಯಕುಮಾರ್, ಕರ್ನಾಟಕ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಂದ್ರ ಕುಮಾರ್, ಪ್ರಜಾವಾಹಿನಿ ದಿನಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕರಾದ ಮಹಮ್ಮದ್ ಬಾಷಾ ಗುಳ್ಯಂ, ಬ್ಲೂಮ್ ಟಿವಿ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಮತಿ ಲತಾ ಮಂಜುನಾಥ್, ಬಿಜೆಪಿ ಮುಖಂಡ ಟಿ.ಬಿ. ಬಾಬು, ಜಿಲ್ಲಾ ಪಂಚಾಯಿತಿ ಸದಸ್ಯ ಕೆಂಪರಾಜು, ಬಿಜೆಪಿ ನಾಯಕ ಶ್ರೀನಿವಾಸ್ ಸೇರಿದಂತೆ ಗಣ್ಯಾತಿಗಣ್ಯರು ಮುಖಂಡರು ಭಾಗವಹಿಸಿದ್ದರು.

ಗೌರವ ಸಮರ್ಪಣೆ

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮೇಯರ್ ಗೌತಮ್ ಕುಮಾರ್ ಜೈನ್, ಉಪ ಮೇಯರ್ ರಾಂ ಮೋಹನ್ ರಾಜ್ ಸೇರಿದಂತೆ ಎಲ್ಲಾ ಗಣ್ಯರಿಗೂ ಮೈಸೂರು ಪೇಟೆ ತೊಡಸಿ, ಹಾರ ಹಾಕಿ, ಶಾಲು ಹೊಂದಿಸಿ, ಸ್ಮರಣ ಫಲಕ ನೀಡಿ ಗೌರವಿಸಲಾಯಿತು.

ಭಾವುಕರಾದ ಮೇಯರ್!

‘ಪ್ರಜಾವಾಹಿನಿ’ ಪತ್ರಿಕೆ ಲೋಕಾರ್ಪಣೆಗೆ ವೇಳೆ ಗಾಯಕ ಹೊನ್ನಪ್ಪ, ಭಾವಗೀತೆಗಳ ಗಾಯನದ ಸರದಾರ ಡಾ.ಸಿ.ಎಸ್ ಅಶ್ವತ್ಥ್ರವರ ‘ಒಳಿತು ಮಾಡು ಮನುಜ ನೀನಿರೋದೊ ಮೂರು ದಿವಸ…’ ಗೀತೆಗೆ ಬೆಂಗಳೂರು ಮೇಯರ್ ಗೌತಮ್ ಕುಮಾರ್ ಜೈನ್ ಭಾವುಕರಾದರು. ನಮ್ಮೆಲ್ಲರ ಜೀವನದಲ್ಲಿ ಸಿ.ಎಸ್ ಅಶ್ವತ್ಥರವರು ಶಾಶ್ವತವಾಗಿ ನೆಲೆವೂರಿದ್ದಾರೆ. ಕೇಂದ್ರ ಸಚಿವರಾಗಿದ್ದ ಅನಂತಕುಮಾರವರು ನ್ಯಾಷನಲ್ ಕಾಲೇಜು ಮೈದಾನದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮೊದಲ ಬಾರಿಗೆ ಸಿ.ಎಸ್ ಅಶ್ವತ್ಥ್ರವರ ‘ಒಳಿತು ಮಾಡು ಮನುಜ… ಈ ಭಾವಗೀತೆ ಕೇಳಿ ಭಾವುಕನಾಗಿದ್ದೆ. ಅಲ್ಲಿಂದ ಇಲ್ಲಿಯವರೆಗೂ ತಾವು ಈ ಹಾಡನ್ನು ಕೇಳಿಸಿಕೊಳ್ಳುವುದು ಲೆಕ್ಕವಿಲ್ಲ, ಬೇಜಾರವಾದಾಗ ವಾರಕೊಮ್ಮೆಯಾದರೂ ಈ ಗೀತೆಯನ್ನು ಗುನುಗುತ್ತ ನನ್ನ ಬದುಕನ್ನು ತಿದ್ದಿಕೊಳ್ಳುವೆನೆಂದು ಹೇಳಿದರು.

ಮೇಯರ್‌ರಿಂದ ಮುಖ್ಯಮಂತ್ರಿಗಳ ಶುಭಾಶಯ 

ನಮ್ಮೆಲ್ಲರ ಆತ್ಮೀಯ ಸ್ನೇಹಿತರಾದ, ಹಿರಿಯ ಪತ್ರಕರ್ತ ನಕಿರೆಕಂಟಿ ಸ್ವಾಮಿಯವರ ಸಂಪಾದಕತ್ವದ ಪ್ರಜಾವಾಹಿನಿ ಮತ್ತು ಬ್ಲೂಮ್ ಟಿವಿಯನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಲೋಕಾರ್ಪಣೆ ಮಾಡಬೇಕಿತ್ತು. ಆದರೆ, ವಿಧಾನಸೌಧದಲ್ಲಿ ನೆರೆ, ಇನ್ನಿತರ ರಾಜ್ಯದ ಜಲ್ವಂತ ಸಮಸ್ಯೆಗಳ ಬಗ್ಗೆ ತುರ್ತು ಸಭೆ ಕರೆದು ಚರ್ಚಿಸುತ್ತಿದ್ದರು. ಈ ಕಾರ್ಯಒತ್ತಡದ ಹಿನ್ನಲೆಯಲ್ಲಿ ಮುಖ್ಯಮಂತ್ರಿಯವರು ಈ ಕಾರ್ಯಕ್ರಮಕ್ಕೆ ಬರಲಾಗಲಿಲ್ಲ. ಇದಕ್ಕೆ ಯಾರೂ ಅನ್ಯತಾ ಭಾವಿಸುವುದು ಬೇಡ. ಅವರ ಪರವಾಗಿ ಪತ್ರಿಕೆ ಮತ್ತು ಟಿವಿಯನ್ನು ಲೋಕಾರ್ಪಣೆ ಮಾಡಿದ್ದು, ಮುಖ್ಯಮಂತ್ರಿಯವರ ಶುಭಾಶಯಗಳನ್ನು ತಮ್ಮೆಲ್ಲರಿಗೂ ಹೇಳುತ್ತಿದ್ದೇನೆಂದು ಕಾರ್ಯಕ್ರಮದಲ್ಲಿ ಮೇಯರ್ ಗೌತಮ್ ಕುಮಾರ್ ಜೈನ್ ತಿಳಿಸಿದರು.

ಎರಡೂ ಅದ್ಭುತ ಮಾಧ್ಯಮಗಳು

ಸಮಾರಂಭದಲ್ಲಿ ಕೃಪಾನಿಧಿ ವಿದ್ಯಾಸಂಸ್ಥೆಯ ಮುಖ್ಯಸ್ಥೆ ಶ್ರೀಮತಿ ಗೀತಾ ನಾಗಾಪಾಲ್ ಮಾತನಾಡಿ, ಇಂದಿನ ಕಾರ್ಯಕ್ರಮ ಬಹಳ ಅರ್ಥಪೂರ್ಣವಾದುದು. ನಾಡಿಗೆ ಒಂದು ಮುದ್ರಣ ಮಾಧ್ಯಮ, ಮತ್ತೊಂದು ದೃಶ್ಯ ಮಾಧ್ಯಮ ಕಾಲಿಟ್ಟಿದ್ದು, ನಮ್ಮ ಆಪ್ತರಲ್ಲೊಬ್ಬರಾದ ಹಿರಿಯ ಪತ್ರಕರ್ತರಾದ ನಕಿರಕಂಟಿ ಸ್ವಾಮಿಯವರು ಮತ್ತು ಅರ್ಚನಾರವರು ಬಹಳ ದಿನಗಳಿಂದ ನಮಗೆಲ್ಲ ಚಿರಪರಿಚಿತರು. ಅವರ ನೇತೃತ್ವದಲ್ಲಿ ಈಗ ಹೊರಬಂದಿರುವ ಎರಡು ಅದ್ಭುತ ಮಾಧ್ಯಮಗಳು ಕ್ರೀಡೆ, ಮನರಂಜನೆ, ಸಾಮಾಜಿಕ ಸಮಸ್ಯೆ ಸೇರಿದಂತೆ ಜನರಿಗೆ ಇಷ್ಟುವಾಗುವ ಎಲ್ಲವನ್ನೂ ಕವರ್ ಮಾಡಲಿ ಎಂದು ಅವರು ಮನವಿ ಮಾಡಿದರು.

  ಕಳೆಕಟ್ಟಿದ ವಿದ್ಯಾರ್ಥಿಗಳು

ಪ್ರಜಾವಾಹಿನಿ, ಬ್ಲೂಮ್ ಟಿವಿ ಲೋಕಾರ್ಪಣೆ ಸಮಾರಂಭದಲ್ಲಿ ಬೆಂಗಳೂರಿನ ಪ್ರತಿಷ್ಠಿತ ಕೃಪಾನಿಧಿ ವಿದ್ಯಾಸಂಸ್ಥೆ ವಿದ್ಯಾರ್ಥಿಗಳು ಸ್ವಯಂಪ್ರೇರಿತರಾಗಿ ಪಾಲ್ಗೊಳ್ಳುವ ಮೂಲಕ ಎಲ್ಲರ ಮೆಚ್ಚುಗೆ ಪಾತ್ರರಾದರು. ಪ್ರಜಾವಾಹಿನಿ ಮತ್ತು ಬ್ಲೂಮ್ ಟಿವಿ ಹೆಸರೇಳುತ್ತಿದ್ದಂತೆಯೇ ವಿದ್ಯಾರ್ಥಿಗಳು ಚಪ್ಪಾಳೆ ತಟ್ಟಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು. ಹಾಗಾಗಿ ಎಲ್ಲರ ಕಣ್ಣು ಆ ಮಕ್ಕಳತ್ತ ಹಾಯಿಸುತ್ತಿದ್ದು, ಸಮಾರಂಭಕ್ಕೆ ಒಂದು ರೀತಿ ಕಳೆತಂದರು.

ನಾಡಿನೆಲ್ಲೆಡೆ ಪಸರಿಸಲಿ; ಗಣ್ಯರ ಆಶಯ

ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾದ ಮಾಧ್ಯಮ ರಂಗದಲ್ಲಿ ‘ಪ್ರಜಾವಾಹಿನಿ’ ಮತ್ತು ‘ಬ್ಲೂಮ್ ಟಿವಿ’ ನಾಡಿನೆಲ್ಲೆಡೆ ಹರಡಲಿ ಕೇಂದ್ರ ರೇಷ್ಮೆ ಮಂಡಳಿ ಮಾಜಿ ಅಧ್ಯಕ್ಷ ಹನುಮಂತರಾಯಪ್ಪ ಎಂದು ಆಶಿಸಿದರು.

ಬೆಂಗಳೂರು ಪ್ರೆಸ್ ಕ್ಲಬ್‌ನಲ್ಲಿ ನಡೆದ ‘ಪ್ರಜಾವಾಹಿನಿ’ ಮತ್ತು ‘ಬ್ಲೂಮ್ ಟಿವಿ’ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಈಗ್ಗೆ 15 ವರ್ಷಗಳ ಹಿಂದೆ ಈಗಿನಿಂತಹ ಯಾವುದೇ ಚಾನೆಲ್‌ಗಳು ಇರಲಿಲ್ಲ. ಅದರಲ್ಲೂ ಇಂದು ವಿಶ್ವದ ಯಾವುದೇ ಮೂಲೆಯಲ್ಲಿ ಕಾರ್ಯಕ್ರಮ ನಡೆಯುತ್ತಿದ್ದರೂ ಕ್ಷಣಾರ್ಧದಲ್ಲಿ ಜನರಿಗೆ ತಲುಪುವಂತಾಗಿದೆ ಎಂದರು.

ಸಾಮಾಜಿಕ ಜಾಲತಾಣಗಳದೇ ಸುದ್ಧಿ

ಹಿರಿಯ ಪತ್ರಕರ್ತ ರವಿಶಂಕರ್ ಮಾತನಾಡಿ, ಪತ್ರಿಕೋದ್ಯಮ ಬಲಿಷ್ಠ ಭಾರತ ನಿರ್ಮಾಣದ ಕರ್ತೃ. ಕಳೆದ ನಾಲ್ಕೈದು ದಶಕಗಳ ಹಿಂದೆ ದೃಶ್ಯ ಮಾಧ್ಯಮ ಬಂದಾಗ ಮುದ್ರಣ ಮಾಧ್ಯಮಕ್ಕೆ ಉಳಿಗಾಲವಿಲ್ಲವೆಂದು ಬಿಂಬಿಸಲಾಗುತ್ತಿತ್ತು. ಆದರೆ, ಈ ಕಾಲಘಟ್ಟದಲ್ಲಿ ದೃಶ್ಯ, ಮುದ್ರಣ ಮಾಧ್ಯಮಗಳ ಜೊತೆಗೆ ಸ್ಥಳೀಯ ಮಾಧ್ಯಮಗಳು ಪ್ರವರ್ಧಮಾನಕ್ಕೆ ಬಂದವು. ಇತ್ತೀಚೆಗೆ ಸಾಮಾಜಿಕ ಜಾಲತಾಣಗಳ ಮೂಲಕ ಸುದ್ಧಿಗಳು ಈಗ ಜನಮಾನಸದಲ್ಲಿ ತಟ್ಟುತ್ತಿವೆ ಎಂದು ಹೇಳಿದರು.

ಸಮಾಜದ ಓರೆಕೋರೆ ತಿದ್ದಲಿ

ಬಿಜೆಪಿ ಮುಖಂಡ ಶಿವಪ್ಪ ಮಾತನಾಡಿ, ಕಳೆದ 15-20 ವರ್ಷಗಳ ಹಿಂದೆ ಬೆರಳಣಿಕಯಷ್ಟು ಪತ್ರಿಕೆಗಳು ಇದ್ದವು. ಆದರೆ, ಇಂದು ನೂರಾರು ಚಾನೆಲ್, ಪೇಪರ್‌ಗಳಿವೆ. ಈ ನಡುವೆಯೂ ಸಮಾಜದ ಹುಳುಕನ್ನು ಎತ್ತಿ ತೋರಿಸುವ ಮಾಧ್ಯಮಗಳು ಪ್ರಾಮಾಣಿಕವಾಗಿ ಓರೆಕೋರೆಗಳನ್ನು ತಿದ್ದಬೇಕಿದೆ. ಸಮಾಜದ ಮಧ್ಯೆ ಅನೇಕ ವಿಚಾರಧಾರಗಳನ್ನು ಜನರಿಗೆ ಮುಟ್ಟಿಸಬೇಕು. ಈ ಮಧ್ಯೆಯೂ ಯಾರು ತಪ್ಪು ಮಾಡುತ್ತಾರೆ, ಆಗ ಅದನ್ನು ಎತ್ತಿ ತೋರಿಸುವ ಕೆಲಸ ಆಗಬೇಕು ಎಂದರು.

ಸಮಾಜಕ್ಕೆ ಇನ್ನು ಉತ್ತಮ ಪತ್ರಿಕೆಗಳು, ವಾಹಿನಿಗಳು ಬರಬೇಕು. ಸಮಾಜದ ಹುಳುಕನ್ನು ಮತ್ತಷ್ಟು ತೆಗೆಯಬೇಕು. ಈ ನಿಟ್ಟಿನಲ್ಲಿ ಪ್ರಜಾವಾಹಿನಿ ಮತ್ತು ಬ್ಲೂಮ್ ಟಿವಿ ಯಶಸ್ವಿಯಾಗಬೇಕು ಎಂದು ಅವರು ಆಶಿಸಿದರು.

ಮಾನಸ ಆಸ್ಪತ್ರೆಯ ನರಸಿಂಹ ರೆಡ್ಡಿ ಮಾತನಾಡಿ, ಪ್ರಜಾವಾಹಿನಿ ಮತ್ತು ಬ್ಲೂಮ್ ಟಿವಿ ಎಲ್ಲೆಡೆ ಹೆಸರು ಮಾಡಲಿ, ಮಾಧ್ಯಮ ಲೋಕದಲ್ಲಿ ಈ ಎರಡು ಕೂಡ ಪ್ರಜ್ವಲಿಸಲಿ ಎಂದು ಹೇಳಿದರು.

ಸಮಾಜಕ್ಕೆ ಅಸ್ತ್ರ

ಭಾರತ ರಕ್ಷಣಾ ವೇದಿಕೆ ಅಧ್ಯಕ್ಷ, ಯುವ ಮುಖಂಡ ಭರತ್ ಶೆಟ್ಟಿ ಮಾತನಾಡಿ, ಮಾಧ್ಯಮ ಎನ್ನುವುದು ಉತ್ತಮ ಸಮಾಜ ಕಟ್ಟುವ ಅಸ್ತ್ರ. ಸರ್ಕಾರ ಮತ್ತು ಜನಸಾಮಾನ್ಯರ ನಡುವೆ ಇರುವ ಸೇತುವೆ ಕೂಡ. ಇಂತಹ ಅತ್ಯಂತ ಜವಾಬ್ದಾರಿಯುತ ಕಾರ್ಯನಿರ್ವಹಿಸುವ ಮಾಧ್ಯಮಗಳಲ್ಲಿ ಪ್ರಜಾವಾಹಿನಿ ಮತ್ತು ಬ್ಲೂಟಿವಿ ಎಲ್ಲರ ಮನೆ ಮನೆಗಳಿಗೆ ತಲುಪಲಿ. ಎಲ್ಲ ವರ್ಗ ಮತ್ತು ಸಮುದಾಯದ ಕೈಗನ್ನಡಿಯಾಗಲಿ ಎಂದು ಹೇಳಿದರು.

ನೈಜ, ನಿಷ್ಪಕ್ಷಪಾತ ಸುದ್ಧಿಗಳು ಬಿತ್ತರವಾಗಲಿ’

ಸಮಾಜದ ನೈಜ ಮತ್ತು ನಿಷ್ಪಕ್ಷಪಾತ ಸುದ್ಧಿಗಳನ್ನು ಬಿತ್ತರಿಸುವ ಕೆಲಸವನ್ನು ‘ಪ್ರಜಾವಾಹಿನಿ’ ಮತ್ತು ‘ಬ್ಲೂಮ್ ಟಿವಿ’ ಮಾಡಬೇಕು ಎಂದು ಕೆಪಿಸಿಸಿ ಕಾರ್ಮಿಕ ವಿಭಾಗದ ರಾಜ್ಯಾಧ್ಯಕ್ಷ ರಮೇಶ್ ಹೇಳಿದ್ದಾರೆ.

ಬೆಂಗಳೂರು ಪ್ರೆಸ್ ಕ್ಲಬ್‌ನಲ್ಲಿ ನಡೆದ ‘ಪ್ರಜಾವಾಹಿನಿ’ಮತ್ತು ‘ಬ್ಲೂಮ್ ಟಿವಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಾಡಿಗೆ ಪ್ರಜಾವಾಹಿನಿ ಮತ್ತು ಬ್ಲೂಮ್ ಟಿವಿ ಲೋಕಾರ್ಪಣೆ ಮಾಡುತ್ತಿರುವ ನಕಿರಕಂಟಿ ಸ್ವಾಮಿಯವರು ಮತ್ತು ಅವರ ಪತ್ರಿಕಾ ಬಳಗಕ್ಕೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದರು.

ನಂಬಿಕೆ ಉಳಿಸಿಕೊಳ್ಳಬೇಕು

ಇಂದು ರಾಷ್ಟ್ರದಲ್ಲಿ ಮಾಧ್ಯಮಗಳು ಯಾವ ರೀತಿ ನಡೆದುಕೊಳ್ಳುತ್ತಿವೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ನಾವೆಲ್ಲರೂ ಮಾಧ್ಯಮಗಳ ಬಗ್ಗೆ ಬಹಳಷ್ಟು ನಂಬಿಕೆ ಇಟ್ಟುಕೊಂಡಿದ್ದೇವೆ. ನೈಜ ಮತ್ತು ನಿಷ್ಪಕ್ಷಪಾತ ಸುದ್ಧಿಗಳನ್ನು ಈ ಎರಡೂ ಮಾಧ್ಯಮಗಳು ನೀಡುತ್ತವೆ ಎಂದು ನಂಬಿಕೆಯಿದ್ದು, ಈ ನಿಟ್ಟಿಲ್ಲಿ ಎಲ್ಲರೂ ಹೆಜ್ಜೆ ಹಾಕಬೇಕು ಎಂದರು.

ಕೆಪಿಸಿಸಿ ಹಿರಿಯ ಮುಖಂಡ ವಿನಾಯಕ ಬಾಬು ಮಾತನಾಡಿ, ಎರಡು ಮಾಧ್ಯಮಗಳು ಉತ್ತಮ ಮಾರ್ಗದಲ್ಲಿ ನಡೆಯಲಿ ಎಂದು ಮನವಿ ಮಾಡಿದರು.

ಅಪ್ಪಟ ಕನ್ನಡಿಗರಾದ ನಕಿರಕಂಟಿ ಸ್ವಾಮಿ

ಮತ್ತೊರ್ವ ಕಾಂಗ್ರೆಸ್ ಮುಖಂಡ ಚಿಕ್ಕಣ್ಣ ಮಾತನಾಡಿ, ಪ್ರಜಾವಾಹಿನಿ ಮತ್ತು ಬ್ಲೂಮ್ ಟಿವಿ ಈ ಎರಡೂ ಮಾಧ್ಯಮಗಳು ರಾಜಧಾನಿ ಬೆಂಗಳೂರಿನ ಆಗುಹೋಗುಗಳ ಜೊತೆಗೆ ಕ್ರೀ ಡೆ, ಹೊರರಾಜ್ಯಗಳ ಸುದ್ಧಿಗಳು, ಒಳ್ಳೆಯ ಕಾರ್ಯಕ್ರಮಗಳನ್ನು ಕೊಡಬೇಕು ಎಂದರು.

ಪ್ರಜಾವಾಹಿನಿ ಸಂಪಾದಕರಾದ ನಕಿರಕಂಟಿ ಸ್ವಾಮಿಯವರು ಮೂಲತಃ ತೆಲುಗು ಭಾಗದವರು. ಅವರು ಮೊದಲಿಗೆ ನಮ್ಮ ಬಡಾವಣೆಗೆ ಬಂದಾಗ ತೆಲುಗು ಮಾಧ್ಯಮವನ್ನು ಪರಿಚಿಯಿಸಿದ್ದರು. ಆಗಲೇ ನಾನು ನಕಿರಕಂಟಿ ಸ್ವಾಮಿಯವರಿಗೆ ಕನ್ನಡದಲ್ಲಿ ವಿಶಿಷ್ಟವಾದ ಮಾಧ್ಯಮಗಳನ್ನು ತನ್ನಿ ಎಂದು ಸಲಹೆ ನೀಡಿದ್ದೆ. ಅದರಂತೆ ಈಗ ಅವರು ಕನ್ನಡ ಮುದ್ರಣ ಮತ್ತು ದೃಶ್ಯ ಮಾಧ್ಯಮ ಲೋಕಕ್ಕೆ ಪ್ರಜಾವಾಹಿನಿ ಮತ್ತು ಬ್ಲೂಮ್ ಟಿವಿ ನೀಡಿದ್ದಾರೆ. ಈವೆರೆಡೂ ನಾಡಿನೆಲ್ಲೆಡೆ ಹೆಸರು ಮಾಡಲಿ ಎಂದು ಹೇಳಿದರು.

ಜನಸಮಸ್ಯೆಗಳ ದನಿಯಾಗಲಿ

ಸ್ನೇಹಿತರಾದ ನಕಿರಕಂಟಿ ಸ್ವಾಮಿಯವರ ಸಂಪಾದಕತ್ವದಲ್ಲಿ ಇಂದು ಹೊರಹೊಮ್ಮಿರುವ ಪ್ರಜಾವಾಹಿನಿ ಪತ್ರಿಕೆಯೂ ಇಂದು ಇಷ್ಟೊಂದು ಪತ್ರಿಕೆಗಳಿದ್ದರೂ ಮತ್ತೊಂದು ಪತ್ರಿಕೆ ಬೇಕಿತ್ತೇ ಎನ್ನುವ ಪ್ರಶ್ನೆ ಕಾಡುವುದು ಸಾಮಾನ್ಯ. ಆದರೆ, ಇನ್ನೂ ಹತ್ತಾರು ಪತ್ರಿಕೆಗಳು ಬಂದರು ಸ್ವಾಗತಿಸುವ ಮನಸ್ಥಿತಿ ನಮ್ಮ ಜನರಲ್ಲಿರಲಿದೆ. ಪ್ರಜಾವಾಹಿನಿ ಮತ್ತು ಬ್ಲೂಮ್ ಟಿವಿ ನಾಡಿನಾದ್ಯಂತ ಜನಮನದಲ್ಲಿ ಉಳಿಯಲಿ. ಜನಸಮಸ್ಯೆಗಳಿಗೆ ದನಿಯಾಗಲಿ ಎಂದು ಹಿರಿಯ ಪತ್ರಕರ್ತ ರವಿಶಂಕರ್ ಮೆಚ್ಚುಗೆ ವ್ಯಕ್ತಪಡಿಸಿದರು.

ಒಳ್ಳೆಯ ಟೈಟಲ್

‘ಪ್ರಜಾವಾಹಿನಿ’ ಎನ್ನುವುದು ಒಳ್ಳೆಯ ಟೈಟಲ್. ಇದು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಬೆಳೆಯಬೇಕು. ಎಲ್ಲೂ ಯಾವ ರೀತಿಯಿಂದಲೂ ರಾಜಕೀಯ ತರದೆ, ಎಲ್ಲರಿಗೂ ಸಮಾನವಾಗಿ ವೇದಿಕೆ ಕಲ್ಪಿಸಿ, ಜನಪರ ಸುದ್ಧಿಗಳನ್ನು ಜನರ ಮನಕ್ಕೆ ತಲುಪಿಸುವ ಕೆಲಸ ಮಾಡಬೇಕು ಎಂದು ಕೆಪಿಸಿಸಿ ಕಾರ್ಮಿಕ ವಿಭಾಗದ ಅಧ್ಯಕ್ಷ ರಮೇಶ್ ಹೇಳಿದರು.

 

 

 

 

 

 

 

 

 

ಫ್ರೆಶ್ ನ್ಯೂಸ್

Latest Posts

Featured Videos