ಭತ್ತದ ನಾಡಿನಲ್ಲಿತಾಳೆ ಬೆಳೆ

ಭತ್ತದ ನಾಡಿನಲ್ಲಿತಾಳೆ ಬೆಳೆ

ರಾಯಚೂರು, ಡಿ. 09 : ಹಲವು ವರ್ಷಗಳಿಂದ ಸತತ ಎರಡು ಬೆಳೆ ಭತ್ತ ಬೆಳೆಯುವ ರೈತರು ತುಂಗಭದ್ರ ಕಾಲುವೆ ನೀರಿನ ಕೊರತೆಯಿಂದ ಮಿತ ಬೆಳೆಗಳು ಮತ್ತು ತಾಳೆ ಬೆಳೆಯ ಮೊರೆ ಹೋಗಿದ್ದಾರೆ.
ರಾಯಚೂರು ಜಿಲ್ಲೆ ಮಾನ್ವಿ ತಾಲೂಕಿನ ಹರವಿ ಗ್ರಾಮದ ಶರಣಪ್ಪ ಸುಲ್ತಾನಪುರ ಎಂಬ ರೈತ ಈ ಹಿಂದೆ ಭತ್ತ ಬೆಳೆಯುತ್ತಿದ್ದರು. ಈಗ ಮಾಡಗಿರಿ ಗ್ರಾಮದಲ್ಲಿನ ತಮ್ಮ ಹೊಲದಲ್ಲಿ 16 ಎಕರೆಯಲ್ಲಿ ತಾಳೆ ಬೆಳೆಯುತ್ತಿದ್ದಾರೆ. ತಾಳೆ ಬೆಳೆ ಪ್ರತಿ ತಿಂಗಳು ನಿವೃತ್ತಿ ವೇತನದಂತೆ ಆದಾಯ ತರುತ್ತಿದೆ.
ಕನಕಗಿರಿ ಸಮೀಪದ ಎಫ್ಎಫ್ಎ ಸಂಸ್ಥೆ ಸಬ್ಸಿಡಿ ದರದಲ್ಲಿ ತಾಳೆಯ ಸಸಿಗಳನ್ನು ನೀಡಿದೆ. 16 ಎಕರೆಯಲ್ಲಿ ಒಟ್ಟು 900 ಸಸಿಗಳನ್ನು ನಾಟಿ ಮಾಡಲಾಗಿದೆ. 27 ಅಡಿ ಉದ್ದ ಹಾಗು 27 ಅಡಿ ಆಗಲದ ಸಾಲುಗಳಲ್ಲೊಂದರಂತೆ ಸಸಿಗಳನ್ನು ನಾಟಿ ಮಾಡಿದ್ದಾರೆ. ತೋಟಗಾರಿಕಾ ಇಲಾಖೆ ಅಧಿಕಾರಿಗಳ ಸಲಹೆ ಮೇರೆಗೆ ಬೆಳೆ ಬೆಳೆಯಲಾಗುತ್ತಿದೆ.
ಈಗ ಎಲ್ಲೆಡೆ ಶೇಂಗಾ ಎಣ್ಣೆಗಿಂತ ತಾಳೆ ಎಣ್ಣೆಯನ್ನು ಅಡುಗೆಗೆ ಹೆಚ್ಚು ಬಳಕೆ ಮಾಡಲಾಗುತ್ತಿದೆ. ಆದರೆ ರಾಜ್ಯದಲ್ಲಿ ತಾಳೆ ಬೆಳೆಯುವುದು ಕಡಿಮೆ. ಅದರಲ್ಲಿಯೂ ಉತ್ತರ ಕರ್ನಾಟಕದಲ್ಲಿ ಇನ್ನೂ ಕಡಿಮೆ. ಇಂಥ ಸಂದರ್ಭದಲ್ಲಿ ಬಿಸಿಲುನಾಡಿನಲ್ಲಿ ನಿವೃತ್ತ ನೌಕರರೊಬ್ಬರು 2007ರಲ್ಲಿ ನಾಟಿ ಮಾಡಿದ ತಾಳೆ ಬೆಳೆ 2012ರಲ್ಲಿ ಫಸಲು ನೀಡಲು ಆರಂಭಿಸಿತು. ಉತ್ತಮ ಫಸಲಿನ ಜೊತೆಗೆ ಆದಾಯ ಕೂಡ ಚೆನ್ನಾಗಿ ಬರುತ್ತಿದೆ.
ಶೇಂಗಾ ಎಣ್ಣೆ ದುಬಾರಿಯಾಗಿದೆ. ಅದಕ್ಕೆ ಪರ್ಯಾಯವಾಗಿ ಈಗ ತಾಳೆ ಎಣ್ಣೆ ಮಾರುಕಟ್ಟೆಯಲ್ಲಿ ಸಿಗುತ್ತಿದೆ. ವಿವಿಧ ಬ್ರಾಂಡಿನ ತಾಳೆಯನ್ನು ಬೆಳೆಯುವ ಬೆಳೆಗಾರರ ಸಂಖ್ಯೆ ಕರ್ನಾಟಕದಲ್ಲಿ ಅತ್ಯಂತ ಕಡಿಮೆ. ಅದರಲ್ಲಿಯೂ ಕಲ್ಯಾಣ ಕರ್ನಾಟಕದಲ್ಲಿ ಇನ್ನೂ ಕಡಿಮೆ. ಮಾಸಿಕ ಆದಾಯ ತರುವ ದೀರ್ಘಾವಧಿಯ ಬೆಳೆಯಾಗಿರುವ ತಾಳೆ ಬೆಳೆಯನ್ನು ಕಡಿಮೆ ಖರ್ಚಿನಲ್ಲಿ ನಿರ್ವಹಣೆ ಮಾಡಬಹುದು. ತಾಳೆ ಬೆಳೆಗೆ ಸರಕಾರದಿಂದ ಸಾಕಷ್ಟು ಉತ್ತೇಜನವಿದೆ.

ಫ್ರೆಶ್ ನ್ಯೂಸ್

Latest Posts

Featured Videos