ಸಿಗರೇಟ್ ಸುಲಿಗೆ ಪ್ರಕರಣ

  • In State
  • May 14, 2020
  • 175 Views
ಸಿಗರೇಟ್ ಸುಲಿಗೆ ಪ್ರಕರಣ

ಬೆಂಗಳೂರು; ಮೇ,೧೪: ಲಾಕ್‌ಡೌನ್ ನಿರ್ಬಂಧ ಉಲ್ಲಂಘಿಸಿ ಸಿಗರೇಟ್ ಮಾರಾಟಕ್ಕೆ ಅನುವು ಮಾಡಿಕೊಡುವ ನೆಪದಲ್ಲಿ ಸುಲಿಗೆ ಮಾಡಿದ ಆರೋಪ ಎದುರಿಸುತ್ತಿರುವ ಮೂವರು ಪೊಲೀಸ್ ಅಧಿಕಾರಿಗಳ ವಿರುದ್ಧ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿವೆ. ಬಂಧನದ ಭೀತಿ ಎದುರಾಗುತ್ತಿದ್ದಂತೆ ಮೂವರು ಪೊಲೀಸ್ ಅಧಿಕಾರಿಗಳು ನಿರೀಕ್ಷಣಾ ಜಾಮೀನಿಗಾಗಿ ನ್ಯಾಯಾಲಯದ ಕದ ತಟ್ಟಿದ್ದಾರೆ.

ಸಿಸಿಬಿ ಎಸಿಪಿ ಪ್ರಭುಶಂಕರ್ ಎಂ, ಪೊಲೀಸ್ ಇನ್ಸ್ಪೆಕ್ಟರ್‌ಗಳಾದ ಅಜರ್ ಆರ್.ಎಮ್, ನಿರಂಜನ್ ಕುಮಾರ್ ಸುಲಿಗೆ ಮಾಡಿದ ಆರೋಪಕ್ಕೆ ಗುರಿಯಾದವರು. ಸಿಸಿಬಿ ಡಿಸಿಪಿ ಎಸಿಪಿ ವಿಚಾರಣೆ ವರದಿ ಮೂಲಕ ಬಯಲಿಗೆ ಬಿದ್ದ ಸಿಸಿಬಿ ಪೊಲೀಸರ ಎರಡು ಸುಲಿಗೆ ಪ್ರಕರಣಗಳು ದಿನಕ್ಕೊಂದು ಹೊಸ ತಿರುವು ಪಡೆದುಕೊಳ್ಳುತ್ತಿವೆ. ಈ ಎರಡು ಸುಲಿಗೆ ಪ್ರಕರಣಗಳು ಲಾಕ್ ಡೌನ್ ವೇಳೆ ಸಿಸಿಬಿ ಪೊಲೀಸರು ನಡೆಸಿರುವ ದಾಳಿಗಳ ಬಗ್ಗೆಯೇ ಸಂಶಯ ಹುಟ್ಟುಹಾಕಿದ್ದು, ಮತ್ತಷ್ಟು ಪ್ರಕರಣ ಹೊರ ಬರುವ ಸಾಧ್ಯತೆಯಿದೆ.

ಸಿಗರೇಟ್ ಸುಲಿಗೆ ಪ್ರಕರಣ

ಕೋವಿಡ್ ೧೯ ಲಾಕ್ಡೌನ್ ವೇಳೆ ಸಿಗರೇಟು, ಗುಟ್ಕಾ ಮಾರಾಟದ ಮೇಲೆ ನಿರ್ಬಂಧ ವಿಧಿಸಲಾಗಿತ್ತು. ಅಂಗಡಿಗಳು ಬಾಗಿಲು ಹಾಕುತ್ತಿದ್ದಂತೆ ಸಿಗರೇಟು- ಗುಟ್ಕಾ ದುಪ್ಪಟ್ಟು ಬೆಲೆಗೆ ಅಕ್ರಮವಾಗಿ ಮಾರಾಟ ಮಾಡುವ ದಂಧೆ ಬೆಂಗಳೂರಿನಲ್ಲಿ ಶುರುವಾಗಿತ್ತು. ಐಟಿಸಿ ಕಂಪನಿ ಸಿಗರೇಟ್ ವಿತರಕ ಅದಿಲ್ ಅಜೀಜ್ ಬಳಿ ೧೦೦ಕ್ಕೂ ಹೆಚ್ಚು ಹುಡುಗರು ಸಿಗರೇಟ್ ವಿತರಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಸಿಗರೇಟ್ ವಹಿವಾಟು ಅಡೆತಡೆ ಇಲ್ಲದೆ ನಡೆದುಕೊಂಡು ಹೋಗಲು ಅಜೀಜ್ ಪರಿಚಿತ ಬಾಬು ರಾಜೇಂದ್ರ ಪ್ರಸಾದ್ ಅವರ ಬಳಿ ಪ್ರಸ್ತಾಪಿಸಿದ್ದಾರೆ.

ಸುಲಿಗೆ ಮೊತ್ತ ಒಟ್ಟು ೬೨ ಲಕ್ಷ

ಪ್ರಸಾದ್ ಗೆ ಪರಿಚಿತ ಭೂಷಣ್ ಮೂಲಕ ಎಸಿಪಿ ಪ್ರಭು ಶಂಕರ್ ಅವರ ಸಂಪರ್ಕಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ಭೂಷಣ್ ಎಂಬ ಮಧ್ಯವರ್ತಿ ಮೂಲಕ ಎಸಿಪಿ ಪ್ರಭು ಶಂಕರ್ ಮತ್ತು ಇನ್ಸ್ ಪೆಕ್ಟರ್ಸ್ ನಿರಂಜನ್ ಕುಮರ್ ಮತ್ತು ಅಜಯ್ ಅವರನ್ನು ಸಂಪರ್ಕಿಸಿದಾಗ ಬೆಂಗಳೂರಿನ ಪ್ರತಿ ಡೀಲರ್ ನಿಂದ ೧೪ ಲಕ್ಷ ರೂ. ತಂದುಕೊಡುವAತೆ ಸೂಚಿಸಿದ್ದಾರೆ. ಅದರಂತೆ ಅಜೀಜ್ ಏ. ೩೦ ರಂದು ೩೦ ಲಕ್ಷ, ಹಾಗೂ ಮೇ ಮೊದಲ ವಾರದಲ್ಲಿ ೩೨ ಲಕ್ಷ ಒಟ್ಟು ೬೨ ಲಕ್ಷ ರೂ.ಗಳನ್ನು ಸಿಸಿಬಿ ಪೊಲೀಸರಿಗೆ ತಲುಪಿಸಿದ್ದಾರೆ.

ತಪ್ಪೊಪ್ಪಿಕೊಂಡ ಇನ್ಸ್ಪೆಕ್ಟರ್ಸ್

ಈ ಕುರಿತು ಅಪರಾಧ ವಿಭಾಗದ ಡಿಸಿಪಿ ಕೆ. ಪಿ. ರವಿಕುಮಾರ್ ಅಜೀಜ್ ಅವರ ಹೇಳಿಕೆ ಆಧರಿಸಿ ವರದಿ ನೀಡಿದ್ದರು. ವರದಿ ಬೆನ್ನಲ್ಲೇ ಎಸಿಪಿ ಹಾಗೂ ಇಬ್ಬರು ಇನ್ಸ್ ಪೆಕ್ಟರ್ ಗಳನ್ನು ವಿಚಾರಣೆಗೆ ಒಳಪಡಿಸಿದಾಗ ತಪ್ಪೊಪ್ಪಿಕೊಂಡಿದ್ದಾರೆ. ಜತೆಗೆ ಸುಲಿಗೆ ಮಾಡಿದ್ದ ಹಣದ ಪೈಕಿ ೨೫ ಲಕ್ಷ ರೂ. ಹಣವನ್ನು ವಶಪಡಿಸಿಕೊಂಡಿದ್ದಾರೆ. ಈ ಬೆಳವಣಿಗೆ ಬೆನ್ನಲ್ಲೇ ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ಬಾಬು ರಾಜೇಂದ್ರಪ್ರಸಾದ್, ಭೂಷಣ್ ಸೇರಿದಂತೆ ಐವರ ವಿರುದ್ಧ ಸುಲಿಗೆ ಪ್ರಕರಣ ದಾಖಲಿಸಿ ತನಿಖೆಗೆ ಚಾಲನೆ ನೀಡಲಾಗಿದೆ.

ನಕಲಿ ಮಾಸ್ಕ್ ಪ್ರಕರಣ

ಸಿಗರೇಟ್ ದಂಧೆಯತೆಯೇ ನಕಲಿ ಮಾಸ್ಕ್ ತಯಾರಿಕೆ ಪ್ರಯೋಗಾಲಯದ ಮೇಲೆ ದಾಳಿ ಮಾಡಿದ ಪ್ರಕರಣದಲ್ಲಿ ಆರೋಪಿಯ ಹೆಸರು ಕೈಬಿಡಲು ೧೫ ಲಕ್ಷ ರೂ. ಸುಲಿಗೆ ಮಾಡಿದ ಪ್ರಕರಣದಲ್ಲಿ ಎಸಿಪಿ ಪ್ರಭುಶಂಕರ್ ಮತ್ತು ಇನ್ಸ್ ಪೆಕ್ಟರ್ ಅಜಯ್ ಆರೋಪಿಗಳಾಗಿದ್ದಾರೆ. ಈ ಕುರಿತು ಎರಡನೇ ಸುಲಿಗೆ ಪ್ರಕರಣ ಕೂಡ ಕಾಟನ್ಪೇಟೆ ಪೊಲೀಸ್ ಠಾಣೆಯಲ್ಲಿಯೇ ದಾಖಲಾಗಿದೆ.

ಬಾಣಸವಾಡಿ ಠಾಣಾ ವ್ಯಾಪ್ತಿಯ ಪ್ರಯೋಗಾಲಯದ ಮೇಲೆ ಎಸಿಪಿ ಪ್ರಭುಶಂಕರ್ ನೇತೃತ್ವದಲ್ಲಿ ದಾಳಿ ಮಾಡಿ ನಕಲಿ ಮುಖ ಗವುಸು ವಶಪಡಿಸಿಕೊಂಡಿದ್ದರು. ಈ ಸಂಬAಧ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದರಲ್ಲಿ ಆರೋಪಿಯಾಗಿದ್ದ ಸುರುಶ ಎಂಬಾತನ ಹೆಸರು ಕೈ ಬಿಡಲು ೨೫ ಲಕ್ಷ ರೂ. ನೀಡುವಂತೆ ಎಸಿಪಿ ಪ್ರಭುಶಂಕರ್ ಮತ್ತು ಇನ್ಸ್ಪೆಕ್ಟರ್ ಅಜಯ್ ಬೇಡಿಕೆ ಇಟ್ಟಿದ್ದರು. ಅಂತಿಮವಾಗಿ ೧೫ ಲಕ್ಷ ರೂ. ಹಣ ಪಡೆದುಕೊಂಡಿದ್ದಾರೆ.

 

ಸಿಸಿಬಿ ಪೊಲೀಸರು ಸುಲಿಗೆ ಮಾಡಿದ ಬಗ್ಗೆ ದೂರುದಾರ ಸಿಸಿಬಿ ಜಂಟಿ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದರು. ಎರಡು ದೂರುಗಳ ವಿಚಾರಣೆ ನಡೆಸಿದ ಡಿಸಿಪಿ ಕೆ.ಪಿ. ರವಿಕುಮಾರ್ ವರದಿ ನೀಡಿದ್ದರು. ವರದಿ ಆಧಾರದ ಮೇಲೆ ಎಸಿಪಿ ಪ್ರಭುಶಂಕರ್, ಪಿಐಗಳಾದ ನಿರಂಜನ್ ಮತ್ತು ಅಜಯ್ ಅವರನ್ನು ಅಮಾನತು ಮಾಡಲಾಗಿತ್ತು. ಲಾಕ್ಡೌನ್ ದಾಳವಾಗಿ ಬಳಸಿಕೊಂಡು ನಾನಾ ಕಡೆ ಸುಲಿಗೆ ಮಾಡಿರುವ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಪ್ರಕರಣದ ಬಗ್ಗೆ ಸಮಗ್ರ ವರದಿಯನ್ನು ಡಿಜಿಪಿ ಅವರಿಗೂ ಸಲ್ಲಿಸಲಾಗಿದೆ. ಇದರ ಬೆನ್ನಲ್ಲೇ ಎರಡು ಸುಲಿಗೆ ಪ್ರಕರಣ ದಾಖಲಾಗಿವೆ. ಮತ್ತಷ್ಟು ಪ್ರಕರಣ ದಾಖಲಾಗುವ ಸಾಧ್ಯತೆಯಿದೆ.

ಫ್ರೆಶ್ ನ್ಯೂಸ್

Latest Posts

Featured Videos