ಬೀದಿ ನಾಯಿಗಳಿಗೆ ‘ಬಾಟಲಿ ಬೆರ್ಚಪ್ಪ’ 

ಬೀದಿ ನಾಯಿಗಳಿಗೆ ‘ಬಾಟಲಿ ಬೆರ್ಚಪ್ಪ’ 

ಧಾರವಾಡ, ಜ. 24: ಧಾರವಾಡದ ಹೊಸಯಲ್ಲಾಪುರದ ಬೀದಿಗಳಲ್ಲಿ ಪ್ರತಿ ಮನೆಯ ಮುಂದೆಯೂ ಪೆಟ್ರೋಲ್ ಬಣ್ಣದ ದ್ರಾವಣ ತುಂಬಿರುವ ಬಾಟಲಿಗಳು ನೇತಾಡುತ್ತಿವೆ. ಇದು ಬೀದಿ ನಾಯಿಗಳ ಕಾಟಕ್ಕೆ ಸ್ಥಳೀಯರು ಕಂಡುಕೊಂಡಿರುವ ದೇಸಿ ಉಪಾಯ!

ಹೌದು, ಧಾರವಾಡದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಿದೆ. ವಿಶೇಷ ಎಂದರೆ, ಈ ರೀತಿ ಪೆಟ್ರೋಲ್ ಬಣ್ಣ ಹೋಲುವ ದ್ರಾವಣ ತುಂಬಿದ ಬಾಟಲಿಗಳನ್ನು ಕಟ್ಟಿದರೆ ನಾಯಿಗಳು ಮನೆ ಮುಂದೆ ಸುಳಿಯುವುದಿಲ್ಲವಂತೆ.

ಹೊಸಯಲ್ಲಾಪುರಕ್ಕೆ ಹೊಂದಿಕೊಂಡೇ ಕಸ ವಿಲೇವಾರಿ ಘಟಕ ಇದೆ. ಹೀಗಾಗಿ ನೂರಾರು ನಾಯಿಗಳು ಈ ಭಾಗದ ಜನ್ನತ್ ನಗರ ಹಾಗೂ ಛಪ್ಪರಬಂದ ಕಾಲನಿ, ರಾಮನಗರಗಳನ್ನೇ ತಮ್ಮ ರಾತ್ರಿ ಓಡಾಟದ ಅಡ್ಡೆಗಳನ್ನಾಗಿ ಮಾಡಿಕೊಂಡಿವೆ. ಮನೆಗಳ ಮುಂದೆಲ್ಲ ನಾಯಿಗಳು ರಾತ್ರಿ ಬಹಿರ್ದೆಸೆ ಮಾಡಿ ಹೋಗುವುದರಿಂದ ಜನ ರೋಸಿಹೋಗಿದ್ದರು. ಹೀಗಾಗಿ ಜನ್ನತ್ ನಗರದ 1ರಿಂದ 8ನೇ ಕ್ರಾಸ್ ಪ್ರದೇಶ ಹಾಗೂ ಛಪ್ಪರ್​ಬಂದ್ ಕಾಲೋನಿಯ ಜನ ಈ ವಿನೂತನ ಉಪಾಯ ಮಾಡಿ, ನಾಯಿಗಳ ಕಿರಿಕಿರಿಯಿಂದ ತಪ್ಪಿಸಿಕೊಂಡಿದ್ದಾರೆ.

ಏನಿದು ದ್ರಾವಣ?: ಪೆಟ್ರೋಲ್​ನಂತೆಯೇ ಕಾಣುವ ದ್ರಾವಣವನ್ನು ಶೂನ್ಯ ಬಂಡವಾಳದಲ್ಲಿ ಸರಳವಾಗಿ ತಯಾರಿಸಬಹುದು. ಖಾಲಿ ಪ್ಲಾಸ್ಟಿಕ್ ಬಾಟಲಿಯಲ್ಲಿ (ಲೀಟರ್ ನೀರಿನ ಪ್ರಮಾಣ) ಒಂದು ಟೀ ಚಮಚ ಅರಿಷಿನ ಹಾಗೂ ಒಂದೆರಡು ಚಿಟಿಕೆ ಹಸಿ ಸುಣ್ಣ ಸೇರಿಸಿ, ನೀರು ಹಾಕಿ ಅಲುಗಾಡಿಸಿದರೆ ಪೆಟ್ರೋಲ್ ಬಣ್ಣದ ದ್ರಾವಣ ಸಿದ್ಧವಾಗುತ್ತದೆ. ಆರಂಭದಲ್ಲಿ ಈ ಕಾಲನಿಯಲ್ಲಿ ಒಂದಿಬ್ಬರು ಮಾತ್ರ ಈ ರೀತಿ ಬಾಟಲಿಗಳನ್ನು ನೇತಾಕಿದ್ದರು. ಪ್ರಯೋಜನ ಕಂಡುಬಂತು. ಅದನ್ನೇ ಉಳಿದವರೂ ಅನುಸರಿಸುತ್ತಿದ್ದು, ಈಗ 50ಕ್ಕೂ ಹೆಚ್ಚು ಮನೆಗಳ ಮುಂದೆ ಬಾಟಲಿಗಳು ನೇತಾಡುತ್ತಿವೆ. ಬಾಟಲಿಗಳಿರುವ ಮನೆಗಳ ಮುಂದೆ ನಾಯಿಗಳು ಬರುತ್ತಿಲ್ಲ, ಗಲೀಜು ಸಹ ಇಲ್ಲ. ಕೆಲವರಂತೂ ರಂಗೋಲಿ ಹಾಕುವ ಸ್ಥಳ, ಬೈಕ್ ನಿಲ್ಲಿಸುವ ಜಾಗದಲ್ಲೂ ಬಾಟಲಿ ಇಡುತ್ತಿದ್ದಾರೆ.

ಏಕೆ ಭಯ ಗೊತ್ತಿಲ್ಲ!: ಪೆಟ್ರೋಲ್ ಬಣ್ಣದ ನೀರನ್ನು ಕಂಡರೆ ನಾಯಿಗಳಿಗೆ ಭಯವೇಕೆ ಎಂದು ಯಾರಿಗೂ ಗೊತ್ತಿಲ್ಲ. ಆದರೆ, ಬಾಟಲಿ ಕಟ್ಟುವುದರಿಂದ ನಾಯಿಗಳ ಗಲೀಜು ಬಳಿಯುವ ತೊಂದರೆ ನಿವಾರಣೆಯಾಗಿದೆ, ಅಷ್ಟೇ ಸಾಕು ಎನ್ನುತ್ತಾರೆ ಸ್ಥಳೀಯರು.

ಪೆಟ್ರೋಲ್ ಬಣ್ಣದ ನೀರು ನೋಡಿ ನಾಯಿಗಳು ಓಡಿ ಹೋಗುವುದಕ್ಕೆ ಯಾವುದೇ ವೈಜ್ಞಾನಿಕ ಕಾರಣ ಇಲ್ಲ. ಈ ವಿಷಯವನ್ನು ಇದೇ ಮೊದಲ ಸಲ ಕೇಳುತ್ತಿದ್ದೇವೆ ಎಂದು ಡಾ. ಪರಮೇಶ ನಾಯಕ, ಉಪನಿರ್ದೇಶಕ, ಪಶು ಸಂಗೋಪನಾ ಇಲಾಖೆ, ಧಾರವಾಡ ಇವರು ತಿಳಿಸಿದರು.

ಗೋವಾದಲ್ಲಿರುವ ನಮ್ಮ ಬೀಗರು ಮನೆ ಮುಂದೆ ಇಂತಹ ಬಾಟಲಿ ನೇತು ಹಾಕಿದ್ದರು. ಕೇಳಿದಾಗ ಇದರ ಹಿನ್ನೆಲೆ ಹೇಳಿದರು. ಅದೇ ಪ್ರಯೋಗವನ್ನು ಇಲ್ಲಿಯೂ ಮಾಡಿದಾಗ ಫಲ ನೀಡಿದೆ. ಉಳಿದವರೂ ಹಾಗೆ ಮಾಡಿದ್ದಾರೆ. ಇದರಿಂದ ನಮ್ಮ ಇಡೀ ಕಾಲೋನಿ ಈಗ ನಾಯಿಗಳ ಗಲೀಜಿನಿಂದ ಮುಕ್ತಿ ಪಡೆದಿದೆ ಎಂದು ಮಹಮ್ಮದ ರಫಿಕ್ ಕಿರಸ್ಯಾಳ, ಸ್ಥಳೀಯ ತಿಳಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos