ಕೊಲೆ ಸುಲಿಗೆ, ದರೋಡೆಯ ನಗರವಾದ ಬೆಂಗಳೂರು

ಕೊಲೆ ಸುಲಿಗೆ, ದರೋಡೆಯ ನಗರವಾದ ಬೆಂಗಳೂರು

ಬೆಂಗಳೂರು, ಅ. 31: ಹೈಟೆಕ್‌ಸಿಟಿ, ಸಿಲಿಕಾನ್‌ಸಿಟಿ, ಗಾರ್ಡ್ನ್‌ಸಿಟಿ ಎಂದೆಲ್ಲಾ ಕರೆಯಲ್ಪಡುವ ಬೆಂಗಳೂರೀಗ ಕೊಲೆ, ದರೋಡೆ,ಕಿಡ್ನಾಪ್, ಗಾಂಜಾ ಮಾಫೀಮು, ಮಾದಕ ದ್ರವ್ಯ ವ್ಯಸನಿಗಳಿಂದ ಸುಲಿಗೆಯ ರಕ್ತ ಪಿಪಾಸು ನಗರವಾಗಿ ಮಾರ್ಪಾಡಾಗುತ್ತಿದ್ದು, ಸಾಮಾನ್ಯ ಜನತೆ ಪ್ರತಿನಿತ್ಯ ಆತಂಕದಲ್ಲೇ ಕಾಲ ದೂಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಅಕ್ಟೋಬರ್ ತಿಂಗಳೊಂದರಲ್ಲೇ  ಬರೋಬ್ಬರಿ 8 ಕೊಲೆ, 200 ಕ್ಕೂ ಹೆಚ್ಚು ಸುಲಿಗೆ, ದರೋಡೆ, ಸರ ಅಪಹರಣ, ಮೊಬೈಲ್ ಕಳವು ಪ್ರಕರಣಗಳು ನಗರದ ಸಾರ್ವಜನಿಕರನ್ನು ಬೆಚ್ಚಿ ಬೀಳಿಸಿವೆ.

ಸಾರ್ವಜನಿಕರು ಹೇಳುವ ಪ್ರಕಾರ ಪೋಲಿಸ್ ಇಲಾಖೆಯ ವೈಫಲ್ಯ ಎಂದು ಬೊಟ್ಟು ಮಾಡಿ ತೋರಿಸುತ್ತಾರೆ.ರಾತ್ರಿ ಪಾಳಿಯ ಗಸ್ತು ವೈಫಲ್ಯ, ಹೋಯ್ಸಳ ವಾಹನಗಳಲ್ಲಿ ತಿರುಗವ ಪೋಲಿಸರ ಲಂಚಗುಳಿತ ಮತ್ತು ನಿರ್ಲಕ್ಷಯದಿಂದಾಗಿ ಕೊಲೆ, ಸುಲಿಗೆ, ದರೋಡೆ ಹೆಚ್ಚಲು ಕಾರಣ ಎನ್ನುವುದೇ ಬಹುತೇಕರ ಅಭಿಪ್ರಾಯವಾಗಿದೆ.

ಒಂದೇ ತಿಂಗಳಲ್ಲಿ 8 ಬಲಿ

ಅಲಯನ್ಸ್ ವಿವಿಯ ಅಯಪ್ಪನ್ ಕೊಲೆ ಪ್ರಕರಣ, ಮಹದೇವಪುರದ ವೃದ್ದ ದಂಪತಿಗಳ ಜೋಡಿ ಕೊಲೆ, ಕಾಮಾಕ್ಷಿಪಾಳ್ಯದಲ್ಲಿ ಮಂಗಳಮುಖಿಯಿಂದ ರೌಡಿ ಶೀಟರ್ ಹತ್ಯೆ, ಹಳೆ ದ್ವೇಷದ ಹಿನ್ನೆಲೆಯಲ್ಲಿ ವೈಟ್ ಫೀಲ್ಡ್ ರೌಡಿ ಮಂಜನ ಕೊಲೆ, ಸಂಜಯನಗರ ಮತ್ತು ನೆಲಮಂಗಲದಲ್ಲಿ ಒಂಟಿ ಮಹಿಳೆಯರ ಹತ್ಯೆ ಸೇರಿದಂತೆ 8 ಕೊಲೆ ಪ್ರಕರಣಗಳು ನಗರದ ಜನತೆಯನ್ನು ಬೆಚ್ಚಿ ಬೀಳಿಸಿದೆ.

ಪೋಲಿಸ್ ಇಲಾಖೆಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಸಾರ್ವಜನಿಕರೇ ಕಳ್ಳರನ್ನು ಹಿಡಿದು ಫೋನ್ ಮಾಡಿದರೂ ಬರುವುದಿಲ್ಲ. ಮೊಬೈಲ್ ಕಳ್ಳತನವಾಗಿದೆಯೆಂದು ದೂರು ನೀಡಿದರೂ ಸ್ವೀಕರಿಸುವಷ್ಟು ಪೋಲಿಸರಿಗೆ ತಾಳ್ಮೆ ಇಲ್ಲ. ಅದೇ ದುಡ್ಡು ಕೊಡ್ತೀವಿ ಪ್ರಕರಣ ದಾಖಲಿಸಿ ಎಂದರೆ ಕೂಡಲೇ ಕೇಸು ದಾಖಲಿಸುತ್ತಾರೆ ಇಂತಹ ದಾಖಲೆಗಳು ಸಾಕಷ್ಟು ನಡೆದಿವೆ.

ಪೋಲಿಸರು ನೇರವಾಗಿಯೇ ಹಣ ಪಡೆಯುತ್ತಾರೆ.ಯಾಕೆಂದರೆ, ಅವರು ಪೋಲಿಸ್ ಠಾಣೆಗೆ ಬರಲು ಲಕ್ಷಾಂತರ ರೂಪಾಯಿ ಕೊಟ್ಟು ಬಂದಿರುತ್ತಾರೆ ಅದರ ವಸೂಲಿಯನ್ನು ನಮ್ಮಂತಹ ಅಮಾಯಕರಿಂದ ವಸೂಲಿ ಮಾಡಿಕೊಳ್ಳುತ್ತಾರೆ.

ಕಳ್ಳನಿಡಿಯಲು ಲಂಚ ಕೊಡಬೇಕು

ನೆಲಮಂಗಲ ಗ್ರಾಮಾಂತರದ ಅರಿಶಿನಕುಂಟೆಯ ದೇವಾಲಯದಲ್ಲಿ ಗದೆ ಕದ್ದ ಕಳ್ಳನ ವಿರುದ್ದ ದೂರು ನೀಡಿದ ಗ್ರಾಮಸ್ಥರನ್ನೆ ದುಡ್ಡು ಕೊಟ್ಟರೆ ಕಳ್ಳನನ್ನು ಹಿಡದು ತರುವುದಾಗಿ ಹೇಳಿದ ಬಸವೇಶ್ವರ ನಗರ ಠಾಣೆಯ ಪಿಎಸ್‌ಐ ಪ್ರಭು ಮತ್ತು ಎಎಸ್‌ಐ ಮಹೇಶ್‌ಗೆ ಗ್ರಾಮಸ್ತರು ಛೀಮಾರಿ ಹಾಕಿದ್ದರು.

ಕಿಡ್ನಾಪರ್ ಇದ್ದಾರೆ

ಅಪಹರಣಕಾರರೇ ಇಲಾಖೆಯಲ್ಲಿದ್ದಾರೆ ಅಪಹರಣ ಪ್ರಕರಣಕ್ಕೆ ಸಂಭಂದಿಸಿದಂತೆ ಮೂರು ವರ್ಷ ಕಳೆದರೂ ಕಿಡ್ನಾಪ್ ಪ್ರಕರಣ ಇತ್ಯರ್ಥ ಮಾಡಿಲ್ಲ. ಪೋಲಿಸ್ ಇಲಾಖೆಯ ಒಬ್ಬರು ಇದರಲ್ಲಿ ಶಾಮೀಲಾಗಿ ನಮ್ಮಿಂದ ಹಣ ವಸೂಲಿ ಮಾಡಿದ್ದು ಬಿಟ್ಟರೆ ನಮಗೆ ನ್ಯಾಯ ಕೊಡಿಸಲಿಲ್ಲ ಸಾಕಪ್ಪ ಈ ಪೋಲಿಸರ ಸಹವಾಸ ಎಂದು ತಮ್ಮ ಅಸಹಾಯಕತೆಯನ್ನು ಹೆಸರೇಳಲಿಚ್ಚಿಸದ ಮಹಿಳೆಯೊಬ್ಬರು ವ್ಯಕ್ತಪಡಿಸಿದರು.

ಪೋಲಿಸರಲ್ಲಿನ ಭ್ರಷ್ಟತೆ,ಲಂಚಗುಳಿತನ,ಸಣ್ಣ ವಿಚಾರಕ್ಕೆಲ್ಲಾ ಹಣ ಕೀಳುವ ಕೀಳು ಪ್ರವೃತ್ತಿಯಿಂದಾಗಿ ಪೋಲಿಸರ ಮೇಲಿನ ಭಯ ಕಡಿಮೆ ಆಗಿರುವುದೇ ರೇಟ್ ಹೆಚ್ಚಲು ಕಾರಣವಾಗಿದೆ. ಇನ್ನೂ ಕಳವು ಪ್ರಕರಣಗಳಲ್ಲಿ ಮಾಲು ರಿಕವರಿಗಂತ ಹೋದರೆ ಪೋಲಿಸರಿಗೆ ಹಬ್ಬವೋ ಹಬ್ಬ!. ಮೊಬೈಲ್ ರಿಪೇರಿ ಅಂಗಡಿಯೊಂದರ ನವ ವಿವಾಹಿತ ಯುವಕನ ಅಂಗಡಿಯೊಂದರಲ್ಲೆ ವೈಟ್‌ಫೀಲ್ಡ್, ಅನೇಕಲ್ ಮತ್ತು ಕುಣಿಗಲ್, ಕೆ.ಆರ್.ಪುರಂ ಹಾಗೂ ತಮಿಳುನಾಡಿನ ಪೋಲಿಸರು ಒಬ್ಬನೇ ಕಳ್ಳನನ್ನು ಕರೆದೊಯ್ದು, ಬರೋಬ್ಬರಿ 2ಲಕ್ಷ 5ಸಾವಿರ ವಸೂಲಿ ಮಾಡಿದ್ದಾರೆ.

ರಾಜಕೀಯ ವ್ಯವಸ್ಥೆಯ ಭ್ರಷ್ಟತೆಯಿಂದಾಗಿ ಪೋಲಿಸ್ ಇಲಾಖೆಯ ವ್ಯವಸ್ಥೆ ಹದಗೆಟ್ಟಿದೆ.ಕ್ರೈಮ್ ರೇಟ್ ಸಂಪೂರ್ಣವಾಗಿ ನಿಯಂತ್ರಣಕ್ಕೆ ತರಬೇಕೆಂದರೆ ನಗರದ ಪ್ರತಿ ಗಲ್ಲಿ, ರಸ್ತೆಗಳು ಬಡೆವಣೆಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸ ಬೇಕು. ಹಿಂದಿನ ಗೃಹಸಚಿವ ಪರಮೇಶ್ವರ ನಗರದ ಕ್ರೈಮ್ ನಿಯಂತ್ರಣಕ್ಕೆ 5 ಸಾವಿರ ಸಿಸಿಟಿವಿ ಅಳವಡಿಸಿರುವುದಾಗಿ ಹೇಳಿದ್ದರು.ಎಲ್ಲೆಲ್ಲಿ ಅಳವಡಿಸಲಾಗಿದೆ ಎಂಬುದು ಗೊತ್ತಿಲ್ಲ. ಹಾಲಿ ಗೃಹ ಸಚಿವರಾದರೂ ಗಮನ ಹರಿಸಲಿ.

ನಾವಿಂದು ಎದುರಿಸುತ್ತಿರುವ ಆತಂಕವನ್ನು ನಮ್ಮ ಮುಂದಿನ ಪೀಳಿಗೆ ಎದುರಿಸುವುದು ಬೇಡ ಎಂದಾದರೆ ಪ್ರತಿಯೊಬ್ಬ ಸಾರ್ವಜನಿಕರು ಎಚ್ಚೆತ್ತುಕೊಂಡು ಪೋಲಿಸ್ ಇಲಾಖೆಯ ವೈಫಲ್ಯ ಮತ್ತು ಭ್ರಷ್ಟಾಚಾರದ ವಿರುದ್ದ ನ್ಯಾಯಾಲಯದ ಮೊರೆ ಹೋಗಬೇಕಿದೆ. ಸಣ್ಣ ತಪ್ಪು ಮಾಡಿದಾಗಲೇ ಶಿಕ್ಷೆ ವಿಧಿಸುವಂತಾಗಬೇಕು. ಪೋಲಿಸ್ ಇಲಾಖೆಯ ಭ್ರಷ್ಟಾಚಾರ ಮತ್ತು ವೈಫಲ್ಯಗಳನ್ನು ನ್ಯಾಯಾಂಗದಲ್ಲಿ ಸಾರ್ವಜನಿಕರು ಪ್ರಶ್ನಿಸುವಂತಾಗಬೇಕು.

 

 

 

 

ಫ್ರೆಶ್ ನ್ಯೂಸ್

Latest Posts

Featured Videos