ನೆನೆಗುದಿಗೆ ಬಿದ್ದಿದ್ದ ಮೇಕೆದಾಟು ಯೋಜನೆ ಮುನ್ನೆಲೆಗೆ

ನೆನೆಗುದಿಗೆ ಬಿದ್ದಿದ್ದ ಮೇಕೆದಾಟು ಯೋಜನೆ ಮುನ್ನೆಲೆಗೆ

ರಾಮನಗರ: ಮೇಕೆದಾಟು ಪ್ರದೇಶಕ್ಕೆ ಭೇಟಿ ನೀಡಿ ಅಣೆಕಟ್ಟೆ ನಿರ್ಮಾಣದ ಸ್ಥಳ ಪರಿಶೀಲಿಸಲು ಜಲ ಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಮುಂದಾಗಿದ್ದಾರೆ. ಈ ಮೂಲಕ ಮತ್ತೊಮ್ಮೆ ಮೇಕೆದಾಟು ವಿಚಾರ ಮುನ್ನಲೆಗೆ ಬಂದಂತಾಗಿದೆ.
೨೦೧೮ರ ಡಿಸೆಂಬರ್‌ನಲ್ಲಿ ಜಿಲ್ಲೆಯವರೇ ಆದ ಅಂದಿನ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಇಲ್ಲಿಗೆ ತೆರಳಿ ಸ್ಥಳ ಪರಿಶೀಲಿಸಿದ್ದರು. ಜೊತೆಗೆ ಯೋಜನೆ ಖರ್ಚು-ವೆಚ್ಚಗಳ ಕುರಿತು ಮಾಧ್ಯಮಗಳಿಗೆ ಮಾಹಿತಿಯನ್ನೂ ನೀಡಿದ್ದರು. ಅದಕ್ಕೆ ತಾತ್ವಿಕ ಒಪ್ಪಿಗೆ ದೊರೆತಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಸಚಿವರು ಕಳೆದ ವಾರವೇ ಸ್ಥಳ ಪರಿಶೀಲನೆಗೆ ಮುಂದಾಗಿದ್ದರು. ಆದರೆ ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ನಿಧನದ ಕಾರಣ ಅವರ ಭೇಟಿ ರದ್ದಾಗಿತ್ತು. ಶೀಘ್ರದಲ್ಲೇ ಅವರು ಸ್ಥಳ ಪರಿಶೀಲನೆ ನಡೆಸಲಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ಬಹುದಿನಗಳ ಕನಸು ನನಸಾದೀತೆ?
ಮೇಕೆದಾಟು ಅಣೆಕಟ್ಟೆ ನಿರ್ಮಾಣಕ್ಕೆ ಆರಂಭದಲ್ಲಿ ರಾಜ್ಯ ಸರ್ಕಾರ ಮೇಕೆದಾಟು, ಮಹಾಮಡು ಸಹಿತ ಮೂರು ಸ್ಥಳಗಳನ್ನು ಗುರುತಿಸಿತ್ತು. ಇದರಲ್ಲಿ ಎರಡು ಬೆಟ್ಟ ಶ್ರೇಣಿಗಳ ನಡುವಿನ ಒಂಟಿಗುಂಡ್ಲುವನ್ನು ಅಣೆಕಟ್ಟೆ ನಿರ್ಮಾಣಕ್ಕೆ ಅಂತಿಮಗೊಳಿಸಲಾಗಿದೆ. ಈ ಪ್ರದೇಶವು ಸಂಗಮದಿಂದ ೪ ಕಿಲೋಮೀಟರ್ ದೂರವಿದೆ. ಇದರಾಚೆಗೆ ೧.೮ ಕಿ.ಮೀ. ದೂರದಲ್ಲಿ ಮೇಕೆದಾಟು ಸಿಗಲಿದೆ. ಮೇಕೆ ದಾಟಿತ್ತು ಎನ್ನಲಾದ ಬೃಹತ್ ಬಂಡೆಕಲ್ಲುಗಳುಳ್ಳ ಕಂದಕ ಶ್ರೇಣಿಯ ಸೌಂದರ್ಯಕ್ಕೆ ಯಾವುದೇ ಧಕ್ಕೆ ಆಗದಂತೆ ಅಣೆಕಟ್ಟೆ ನಿರ್ಮಾಣ ಮಾಡಲು ಜಲ ಸಂಪನ್ಮೂಲ ಇಲಾಖೆಯು ಯೋಜಿಸಿದೆ.
ಜಲಾಶಯಕ್ಕಾಗಿ ಸುಮಾರು ೪,೯೯೬ ಹೆಕ್ಟೇರ್ ಪ್ರದೇಶವು ಮುಳುಗಡೆ ಆಗಲಿದ್ದು, ಇದರಲ್ಲಿ ೪೭೧೬ ಹೆಕ್ಟೇರ್ ಅರಣ್ಯ ಪ್ರದೇಶವೇ ಆಗಿದೆ. ಅದರಲ್ಲಿಯೂ ೨೮೦೦ ಹೆಕ್ಟೇರ್‌ನಷ್ಟು ಪ್ರದೇಶ ಕಾವೇರಿ ವನ್ಯಧಾಮಕ್ಕೆ ಸೇರಿದೆ. ಉದ್ದೇಶಿತ ಅಣೆಕಟ್ಟೆಯು ೬೬.೮೫ ಟಿಎಂಸಿ ಸಂಗ್ರಹ ಸಾಮರ್ಥ್ಯ ಹೊಂದಲಿದ್ದು, ಇದರಲ್ಲಿ ವಾಸ್ತವದಲ್ಲಿ ೬೪ ಟಿಎಂಸಿಯಷ್ಟು ನೀರು ಸಂಗ್ರಹವಾಗಲಿದೆ. ಆ ಪೈಕಿ ೭.೭ ಟಿಎಂಸಿ ಡೆಡ್ ಸ್ಟೋರೇಜ್ ಆಗಿದ್ದು, ಉಳಿದ ೫೬.೩೦ ಟಿಎಂಸಿ ಬಳಕೆಗೆ ಲಭ್ಯವಿರಲಿದೆ.

ಫ್ರೆಶ್ ನ್ಯೂಸ್

Latest Posts

Featured Videos