ಉದ್ಯಮಿ ಅಪಹರಣಕೋರರ ಅರೆಸ್ಟ್

ಉದ್ಯಮಿ ಅಪಹರಣಕೋರರ ಅರೆಸ್ಟ್

ಬೆಂಗಳೂರು, ನ. 6: ಉದ್ಯಮಿಯೊಬ್ಬರನ್ನು ಗೃಹ ಪ್ರವೇಶದ ಆಮಂತ್ರಣ ನೆಪದಲ್ಲಿ ಕಿಡ್ನಾಪ್ ಮಾಡಿ 10ಲಕ್ಷ ರೂ. ಮೌಲ್ಯದ ಚಿನ್ನಾಭರಣ ದೋಚಿದ ಪ್ರಕರಣವನ್ನು ಬಾಣಸವಾಡಿ ಪೊಲೀಸರು ಬೇಧಿಸಿದ್ದಾರೆ.

ಅ.11ರಂದು ಕಲ್ಯಾಣನಗರದ ಪೂಜಪ್ಪ ಲೇಔಟ್ ನಿವಾಸಿ ರಾಮಾನುಜಂ ಎಂಬುವವರನ್ನು ಅಪಹರಿಸಿದ್ದ ದುಷ್ಕರ್ಮಿಗಳ ತಂಡ ಅವರನ್ನು ಮನೆಯೊಂದರಲ್ಲಿ ಕೂಡಿ ಹಾಕಿ ಚಿನ್ನಾಭರಣ ಸುಲಿಗೆ ಮಾಡಿದ್ದರು. ಈ ಕುರಿತು ರಾಮಾನುಜಂ ಅವರು ನೀಡಿದ ದೂರು ಆಧರಿಸಿ ತನಿಖೆ ಚುರುಕುಗೊಳಿಸಿದ ಬಾಣಸವಾಡಿ ಪೊಲೀಸರು, ಐವರು ಆರೋಪಿಗಳನ್ನು ಬಂಧಿಸಿದ್ದು ಸುಲಿಗೆ ಮಾಡಿದ್ದ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ.

ಆಮಂತ್ರಣದಿಂದ ಆಪತ್ತು

ರಾಮಾನುಜಂ ಅ.11 ರಂದು ಮನೆ ಸಮೀಪವೇ ಇರುವ ಅಮ್ಮನ್ ಟೀ ಹೌಸ್ ಬಳಿ ಬಂದು ಕುಳಿತಿದ್ದರು. ಇದೇ ವೇಳೆ ಬೌನ್ಸ್ ಬೈಕ್‌ನಲ್ಲಿ ಯುವಕನೊಬ್ಬ ಅಲ್ಲಿಗೆ ಬಂದಿದ್ದು ಪರಿಚಯಸ್ಥನಂತೆ ಮಾತು ಆರಂಭಿಸಿದ್ದಾನೆ. ಬಳಿಕ ಹೆಣ್ಣೂರು ಮುಖ್ಯರಸ್ತೆಯಲ್ಲಿರುವ ಬಿಎಂಟಿಸಿ ಸಮೀಪದಲ್ಲಿ ಹೊಸ ಮನೆಯನ್ನು ಕಟ್ಟಿಸಿದ್ದೇನೆ. ಸದ್ಯದಲ್ಲಿಯೇ ಗೃಹಪ್ರವೇಶವಿದೆ ನೀವು ಬರಬೇಕು ಎಂದು ಹೇಳಿದ್ದಾನೆ.ರಾಮಾನುಜಂ ಅವರ ಬಳಿ ನಗದು ಹಾಗೂ ಚಿನ್ನಾಭರಣ ಇರುವುದನ್ನು ಮೊದಲೇ ತಿಳಿದಿದ್ದ ಆರೋಪಿಯೊಬ್ಬ, ತನ್ನ ಸಹಚರರಿಗೆ ಮಾಹಿತಿ ನೀಡಿ ಇಡೀ ಕೃತ್ಯದ ನೇತೃತ್ವ ವಹಿಸಿದ್ದ ಎಂಬುದು ತನಿಖೆಯಲ್ಲಿ ತಿಳಿದು ಬಂದಿದೆ ಎಂದು ಮೂಲಗಳು ತಿಳಿಸಿವೆ.

ಆತನ ಮಾತನ್ನು ನಂಬಿದ ರಾಮಾನುಜಂ ಯುವಕ ಹೇಳಿದ ಸ್ಥಳಕ್ಕೆ ಹೋದಾಗ ಸಂಜೆ ಬನ್ನಿ ಎಂದಿದ್ದಾನೆ. ಹೀಗಾಗಿ ರಾಮಾನುಜಂ ಅವರು ಸಂಜೆ 6.30ರ ಸುಮಾರಿಗೆ ಪುನಃ ಬಿಎಂಟಿಸಿ ಡಿಪೋ ಹತ್ತಿರ ಹೋದಾಗ ಅವರನ್ನು ಬೈಕ್ನಲ್ಲಿ ಕೂರಿಸಿಕೊಂಡ ಆರೋಪಿ ಸೀದಾ ಬಾಗಲೂರು ರಸ್ತೆ ಕಡೆ ಬಂದಿದ್ದಾನೆ. ಬಳಿಕ ಆತನ ಜತೆ ನಾಲ್ವರು ದುಷ್ಕರ್ಮಿಗಳು ಸೇರಿಕೊಂಡು ಬಾಗಲೂರಿನ ಸಮೀಪದ ರೂಂ ಒಂದರಲ್ಲಿ ರಾಮಾನುಜಂ ಅವರನ್ನು ಕೂಡಿ ಹಾಕಿದ ದುಷ್ಕರ್ಮಿಗಳು ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ.

ಕೇಳಿದಷ್ಟು ಹಣಕೊದಿದ್ದರೆ ಕೊಲ್ಲುವುದಾಗಿ ಬೆದರಿಕೆ ಒಡ್ಡಿದ್ದಾರೆ. ದುಷ್ಕರ್ಮಿಗಳ ಈ ವ್ಯೂಹದಲ್ಲಿ ಸಿಲುಕಿದ ರಾಮಾನುಜಂ ಅವರು ತನ್ನ ಬಳಿ ಹಣ ಇಲ್ಲ ಎಂದು ಕಾಡಿ ಬೇಡಿದರೂ  ಕೇಳದ ದುಷ್ಕರ್ಮಿಗಳು ಕಡೆಗೆ ಪ್ರಾಣಭಯದಿಂದ ಮಗನಿಗೆ ದೂರವಾಣಿ ಕರೆ ಮಾಡಿ ಮನೆಯಲ್ಲಿದ್ದ ಚಿನ್ನಾಭರಣ ತರಿಸಿದ್ದಾರೆ. ಮಗನಿಂದ ಚಿನ್ನಾಭರಣ ಪಡೆದುಕೊಂಡ ದುಷ್ಕರ್ಮಿಗಳು ತಡರಾತ್ರಿ ರಾಮಾನುಜಂ ಅವರನ್ನು ಬಿಟ್ಟುಕಳುಹಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

 

 

ಫ್ರೆಶ್ ನ್ಯೂಸ್

Latest Posts

Featured Videos