ಬೆಂಗಳೂರು: ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯಾ ಸರ್ಜಾ ನಟಿಯಾಗಿದ್ದು 2018 ರಲ್ಲಿ ಕನ್ನಡದ ‘ಪ್ರೇಮ ಬರಹ’ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು. ಇದೇ ಸಿನಿಮಾ ತಮಿಳಿನಲ್ಲಿ ‘ಸೊಲ್ಲಿವಿಡುವಾ’ ಹೆಸರಿನಲ್ಲಿ ಬಿಡುಗಡೆ ಆಯ್ತು. ಸಿನಿಮಾವನ್ನು ಸ್ವತಃ ಅರ್ಜುನ್ ಸರ್ಜಾ ನಿರ್ದೇಶನ ಮಾಡಿ ನಿರ್ಮಾಣವನ್ನೂ ಮಾಡಿದ್ದರು.
ಐಶ್ವರ್ಯಾ ಸರ್ಜಾ ಅವರ ನಿಶ್ಚಿತಾರ್ಥ ನಿನ್ನೆ ಚೆನ್ನೈನಲ್ಲಿ ಅದ್ಧೂರಿಯಾಗಿ ನೆರವೇರಿದೆ. ಅದ್ಧೂರಿಯಾಗಿ ನೆರವೇರಿದ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಧ್ರುವ ಸರ್ಜಾ ಸೇರಿದಂತೆ ಸರ್ಜಾ ಕುಟುಂಬದ ಸದಸ್ಯರು ಭಾಗಿಯಾಗಿದ್ದರು. ಐಶ್ವರ್ಯಾ ಸರ್ಜಾ ಅವರು ತಮ್ಮ ಬಹು ಸಮಯದ ಗೆಳೆಯನನ್ನೇ ವರಿಸಲಿದ್ದು, ಅವರೊಟ್ಟಿಗೆ ವಿವಾಹ ನಿಶ್ಚಯ ಮಾಡಿಕೊಂಡಿದ್ದಾರೆ.
ಐಶ್ವರ್ಯಾ ಅವರ ನಿಶ್ಚಿತಾರ್ಥವು ತಮಿಳಿನ ಜನಪ್ರಿಯ ನಟ ತಂಬಿ ರಾಮಯ್ಯ ಅವರ ಪುತ್ರ ಉಮಾಪತಿ ರಾಮಯ್ಯ ಅವರೊಡನೆ ನಡೆದಿದೆ. ತಂಬಿ ರಾಮಯ್ಯ ತಮಿಳು ಚಿತ್ರರಂಗದ ಜನಪ್ರಿಯ ಹಾಸ್ಯ ನಟ ಮತ್ತು ಪೋಷಕ ನಟ. ಹಲವು ವರ್ಷಗಳಿಂದಲೂ ತಂಬಿ ರಾಮಯ್ಯ ತಮಿಳು ಸಿನಿಮಾಗಳಲ್ಲಿ ನಟಿಸುತ್ತಾ ಬಂದಿದ್ದಾರೆ.
ಉಮಾಪತಿ ರಾಮಯ್ಯ ಹಾಗೂ ಐಶ್ವರ್ಯಾ ಸರ್ಜಾ ಹಲವು ವರ್ಷಗಳಿಂದಲೂ ಪ್ರೀತಿಯಲ್ಲಿದ್ದರು ಎನ್ನಲಾಗಿದೆ. ಇದೀಗ ಹಿರಿಯರ ಒಪ್ಪಿಗೆ ಪಡೆದು ವಿವಾಹ ಮಾಡಿಕೊಳ್ಳಲು ಸಜ್ಜಾಗಿದ್ದು ಇಂದು ಕುಟುಂಬದ ಹಿರಿಯರ ಸಮ್ಮುಖದಲ್ಲಿ ಉಂಗುರ ಬದಲಾಯಿಸಿಕೊಂಡಿದ್ದಾರೆ.