ಆದಿತ್ಯ ರಾವ್ ಬಗ್ಗೆ ಕಳವಳಕಾರಿ ಅಂಶ ಬಿಚ್ಚಿಟ್ಟ ಕಮೀಷನರ್ ಹರ್ಷ

ಆದಿತ್ಯ ರಾವ್ ಬಗ್ಗೆ ಕಳವಳಕಾರಿ ಅಂಶ ಬಿಚ್ಚಿಟ್ಟ ಕಮೀಷನರ್ ಹರ್ಷ

ಮಂಗಳೂರು, ಜ. 23: ಮಂಗಳೂರು ಏರ್‌ಪೋರ್ಟ್‌ನಲ್ಲಿ ಬಾಂಬ್‌ ಇಟ್ಟು ಸದ್ಯ ಮಂಗಳೂರು ಪೊಲೀಸರ ವಶದಲ್ಲಿರೋ ಆರೋಪಿ ಆದಿತ್ಯ ರಾವ್‌, ಬ್ಯಾಂಕ್‌, ಇನ್ಶುರೆನ್ಸ್‌, ಟೊಯೋಟಾದಂತಹ ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸ ಮಾಡೋದ್ರ ಜೊತೆ ಬಾರ್‌ಗಳಲ್ಲಿ, ಕಾಲೇಜುಗಳಲ್ಲಿ ಸೆಕ್ಯುರಿಟಿ ಗಾರ್ಡ್‌ ಆಗಿಯೂ ಕೆಲಸ ಮಾಡಿದ್ದ ಅನ್ನೋ ಮಾಹಿತಿಯನ್ನ ಮಂಗಳೂರು ಪೊಲೀಸರು ಬಹಿರಂಗಪಡಿಸಿದ್ದಾರೆ.

ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟಿದ್ದ ಪ್ರಕರಣದ ಆರೋಪಿ ಆದಿತ್ಯ ರಾವ್ನನ್ನು ಬಂಧಿಸಿದ್ದೇವೆ. ನಿನ್ನೆ ಬೆಂಗಳೂರಿನ ಕೋರ್ಟ್ಗೆ ಈತನನ್ನು ಹಾಜರು ಪಡಿಸಲಾಗಿತ್ತು. ಈಗ ಕೋರ್ಟ್ನಿಂದ ನಮ್ಮ ಕಸ್ಟಡಿಗೆ ಪಡೆದಿದ್ದೇವೆ. ಟ್ರಾನ್ಸಿಟ್ ವಾರಂಟ್ ಮೂಲಕ ವಶಕ್ಕೆ ಪಡೆದು ರಾತ್ರಿ 9ಕ್ಕೆ ಮಂಗಳೂರಿಗೆ ಕರೆತಂದಿದ್ದೇವೆ. ಬಳಿಕ ಆದಿತ್ಯನನ್ನು ವಿಚಾರಣೆ ಮಾಡಿದ್ದೇವೆ ಎಂದು ಆತನ ಕುರಿತು ಹಿನ್ನೆಲೆ ವಿವರಿಸಿದರು.

“ಮೂಲತಃ ಮಣಿಪಾಲ ನಿವಾಸಿಯಾದ 37 ವರ್ಷದ ಆದಿತ್ಯ, ಉನ್ನತ ಶಿಕ್ಷಣ ಪಡೆದಿದ್ದಾನೆ. ಮೈಸೂರಿನಲ್ಲಿ ಬಿಇ ಮೆಕ್ಯಾನಿಕಲ್ ಪದವಿ ಹಾಗೂ ಎಂಬಿಎ ಮಾರ್ಕೆಟಿಂಗ್ ಆಪರೇಷನ್ ಪದವಿ ಮಾಡಿದ್ದಾನೆ. ಇದಾದ ಬಳಿಕ ಬ್ಯಾಕಿಂಗ್ ಹಾಗೂ, ಇನ್ಶೂರೆನ್ಸ್ನ ವಿವಿಧ ಕಂಪನಿಗಳಲ್ಲಿ ಕೆಲಸ ಮಾಡಿದ್ದಾನೆ. ಈತ ಎಲ್ಲೂ ಕೂಡ ದೀರ್ಘ ಕೆಲಸ ಮಾಡಿಲ್ಲ. ಪದೇಪದೇ ಕೆಲಸ ಬದಲಾಯಿಸುತ್ತಿದ್ದ,” ಎಂದು ಹರ್ಷ ಮಾಹಿತಿ ನೀಡಿದರು.

“ಇದಾದ ಬಳಿಕ ತಾನು ಓದಿದ ಮೆಕಾನಿಕಲ್ ಕ್ಷೇತ್ರದಲ್ಲಿ ಕೆಲಸ ಅರಸಿ ಪೀಣ್ಯದಲ್ಲಿ ಆಟೋಮೊಬೈಲ್ ಕಂಪನಿಯೊಂದರಲ್ಲಿ ಕೆಲಕಾಲ ಕೆಲಸ ಮಾಡಿದ. ಇದಾದ ಬಳಿಕ ಸುಳ್ಳು ದಾಖಲೆ ಸಲ್ಲಿಸಿ ಬಿಡದಿ ಟೊಯೊಟಾ ಕಂಪನಿಯಲ್ಲಿದ್ದ, ಎರಡೇ ತಿಂಗಳಲ್ಲಿ ಅಲ್ಲಿಂದಲೂ ಹೊರಬಂದು  ಮಾನಸಿಕ ಖಿನ್ನತೆಗೆ ಒಳಗಾದ,” ಎಂದರು.

“ತನ್ನ ಅರ್ಹತೆಗೆ ತಕ್ಕ ಕೆಲಸ ಇಲ್ಲವೆಂದು ಖಿನ್ನತೆಗೆ ಜಾರಿದ ಈತ ಬಳಿಕ ಮೂಡಬಿದಿರೆಯ ಆಳ್ವಾಸ್ ಕಾಲೇಜಿನಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ನಿರ್ವಹಿಸಿದ.

“ನಂತರ ಮತ್ತೆ ಬೆಂಗಳೂರಿಗೆ ಬಂದ ಈತ ಇಲ್ಲೂ ಕೂಡ ಹಲವು ಹೊಟೇಲ್ಗಳಲ್ಲಿ ಕೆಲಸ ಮಾಡಿದ. ಎಂಟಿಆರ್, ಡೊಮಿನೊಸ್ಗಳಲ್ಲಿ ಕೆಲಸದಲ್ಲಿದ್ದ. ಇವೆಲ್ಲದರಿಂದ ಬೇಸತ್ತಾಗ ಬೆಂಗಳೂರು ವಿಮಾನ ನಿಲ್ದಾಣದಲ್ಲಿಸೆಕ್ಯುರಿಟಿ ಕೆಲಸಕ್ಕೆ ಸೇರಲು ಮುಂದಾದ. ಆದರೆ, ಹೆಚ್ಚಿನ ವಿದ್ಯಾರ್ಹತೆ ಹಿನ್ನೆಲೆ ಕೆಲಸ ಸಿಗದಿದ್ದಾಗ ಇದೇ ಕಾರಣಕ್ಕೆ ವಿಮಾನ ನಿಲ್ದಾಣಕ್ಕೆ ಬೆದರಿಕೆ ಕರೆ ಮಾಡಿದ,” ಎಂದು ಹಳೆಯ ಘಟನೆಯನ್ನು ಹರ್ಷ ತಿಳಿಸಿದರು.

“ಬೆದರಿಕೆ ಕರೆ ಮಾಡಿದ ಪ್ರಕರಣದಲ್ಲಿ ಈತ ಚಿಕ್ಕಬಳ್ಳಾಪುರದಲ್ಲಿ 1 ವರ್ಷ ಜೈಲುಶಿಕ್ಷೆ ಅನುಭವಿಸಿದ. ಉತ್ತಮ ವಿದ್ಯಾಭ್ಯಾಸ ಹೊಂದಿದ ಹಿನ್ನೆಲೆ ಈ ಬಗ್ಗೆ ಆಳವಾದ ಜ್ಞಾನ ಪಡೆದು, ಕಚ್ಚಾ ವಸ್ತು ಸಂಗ್ರಹಿಸಿ ಬಾಂಬ್ ತಯಾರಿಸಿದ,” ಎಂದು ತನಿಖೆಯಲ್ಲಿ ತಿಳಿದ ಅಂಶವನ್ನು ಮಾಧ್ಯಮದ ಮುಂದಿಟ್ಟರು.

ಆದಿತ್ಯನನ್ನು ಇಂದು ವಿಶೇಷ ಕೋರ್ಟ್ಗೆ ಹಾಜರು ಮಾಡಲಾಗುವುದು. ಈ ವೇಳೆ ಪೊಲೀಸ್ ಕಸ್ಟಡಿಗೆ ಕೇಳುತ್ತೇವೆ. ಸ್ಫೋಟಕ ವಸ್ತುಗಳು ಲ್ಯಾಬ್ಗೆ ರವಾನೆ ಮಾಡಲಾಗಿದ್ದು, ಪ್ರಯೋಗಾಲಯ ವರದಿಗೆ ಕಾಯುತ್ತಿದ್ದೇವೆ. ದೇಶದ ಆಂತರಿಕ ಭದ್ರತೆಗೆ ಆದಿತ್ಯ ಅಪಾಯಕಾರಿ ಎಂದು ಹರ್ಷ ಅಭಿಪ್ರಾಯಪಟ್ಟರು.

 

ಫ್ರೆಶ್ ನ್ಯೂಸ್

Latest Posts

Featured Videos