ಅಪಘಾತ : ಮೃತರಿಗೆ ಸಾಮೂಹಿಕ ಪೂಜೆ

ಅಪಘಾತ : ಮೃತರಿಗೆ ಸಾಮೂಹಿಕ ಪೂಜೆ

ಧಾರವಾಡ : ಜ. 15ರಂದು ಹುಬ್ಬಳ್ಳಿ-ಧಾರವಾಡ ಬೈಪಾಸ್‌ನಲ್ಲಿ ನಡೆದಿದ್ದ ಭೀಕರ ರಸ್ತೆ ಅಪಘಾತದ ಸ್ಥಳದಲ್ಲಿ ಶನಿವಾರ ಮೃತರ ಕುಟುಂಬಸ್ಥರು ಭಾವಚಿತ್ರಗಳನ್ನು ಇಟ್ಟು ಸಾಮೂಹಿಕ ಪೂಜೆ ಸಲ್ಲಿಸಿ, ಆಕ್ರೋಶ ವ್ಯಕ್ತಪಡಿಸಿದರು. ಎರಡೂವರೆ ಗಂಟೆಗಳ ಕಾಲ ಇಡೀ ಬೈಪಾಸ್ ರಸ್ತೆ ಸಂಚಾರ ಸಂಪೂರ್ಣ ಬಂದ್ ಆಗಿತ್ತು.

ಸಾಂಕೇತಿಕ ಪ್ರತಿಭಟನೆ ಮೂಲಕ ಅಷ್ಟಪಥ ರಸ್ತೆ ನಿರ್ಮಾಣ, ಅಕ್ಕಪಕ್ಕದ ಹಳ್ಳಿಗಳ ಜಾನುವಾರಗಳಿಗೆ ಸೂಕ್ತ ರಸ್ತೆಯಾಗೋವರೆಗೂ ಟೋಲ್ ಸಂಗ್ರಹಕ್ಕೆ ಕಡಿವಾಣ ಹಾಕಬೇಕು. ಉತ್ತರ ಕರ್ನಾಟಕ ಭಾಗದ ಜನಪ್ರತಿನಿಧಿಗಳಿಗೆ ಏನಾಗಿದೆ..? ಯಾಕೆ ಮೌನವಹಿಸಿದ್ದಾರೆ..? ರಸ್ತೆ ಅವ್ಯವಸ್ಥೆಯ ವಿರುದ್ಧ ಕಿಡಿಕಾರಿದರು.

40ಕ್ಕೂ ಹೆಚ್ಚು ವಾಹನಗಳಲ್ಲಿ ದಾವಣಗೆರೆಯಿಂದ ಘಟನಾ ಸ್ಥಳಕ್ಕೆ ಆಗಮಿಸಿದ ಕುಟುಂಬ ಸದಸ್ಯರು ಹಾಗೂ ಹಿತೈಷಿಗಳು ಅಪಘಾತ ಸ್ಥಳದಲ್ಲೇ ಪೂಜೆ ಮಾಡಿ, ಶಾಂತಿಯುತ ಪ್ರತಿಭಟನೆ ನಡೆಸಿ, ಇನ್ನು ಮುಂದೆ ಯಾವುದೇ ಸಾವುಗಳು ಈ ರಸ್ತೆಯಲ್ಲಿ ಆಗದಿರಲಿ ಎಂದರು.

ಜ.15ರಂದು ಧಾರವಾಡದ ಇಟ್ಟಿಗಟ್ಟಿ ಬೈಪಾಸ್‌ನಲ್ಲಿ ಟಾಟಾ 407 ಪ್ರಯಾಣಿಕರ ವಾಹನ ಮತ್ತು ಟಿಪ್ಪರ್ ಮಧ್ಯ ಅಪಘಾತ ಸಂಭವಿಸಿ, ದಾವಣಗೆರೆ ಮೂಲದ 10 ಮಹಿಳೆಯರು ಸೇರಿ ಒಟ್ಟು 13 ಜನ ಮೃತಪಟ್ಟಿದ್ದರು.

ಈ ಸಂದರ್ಭದಲ್ಲಿ ಮಾಜಿ ಸಂಸದ ಐ.ಜಿ. ಸನದಿ, ಕಾಂಗ್ರೆಸ್ ನಗರ ಜಿಲ್ಲಾಧ್ಯಕ್ಷ ಅಲ್ತಾಫ್ ಹಳ್ಳೂರ, ಗ್ರಾಮೀಣ ಜಿಲ್ಲಾಧ್ಯಕ್ಷ ಅನಿಲ್ ಪಾಟೀಲ್, ಹುಡಾ ಮಾಜಿ ಅಧ್ಯಕ್ಷ ಅನ್ವರ್ ಮುಧೋಳ, ಶಾಕೀರ್ ಸನದಿ, ಕಾಂಗ್ರೆಸ್ ಮುಖಂಡರಾದ ಬಾಬಾಜಾನ್ ಮುಧೋಳ, ದೇವಕಿ ಯೋಗಾನಂದ, ವಿಜಯಲಕ್ಷ್ಮಿ, ಮುಖಂಡರಾದ ಶಾಕೀರ್ ಸನದಿ, ದಲಾಲ್ ವರ್ತಕರ ಸಂಘದ ಅಧ್ಯಕ್ಷ ಶಿವಶಂಕರ ಹಂಪಣ್ಣವರ, ಧಾರವಾಡ ಹೋಟೆಲ್ ಒಡೆಯರ್ ಸಂಘದ ಅಧ್ಯಕ್ಷ ಮಹೇಶ ಶೆಟ್ಟಿ, ಬಾಲನಂದನ ಟ್ರಸ್ಟ್ ಸದಸ್ಯ ನಾಗರಾಜ ಕಿರಣಗಿ, ಜಯ ಕರ್ನಾಟಕ ಸಂಘದ ಜಿಲ್ಲಾಧ್ಯಕ್ಷ ಸುಧೀರ ಮುಧೋಳ, ಗಣೇಶ ಕುಲಕರ್ಣಿ ಸೇರಿ ಹಲವರು ಉಪಸ್ಥಿತರಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos