ಮೈಸೂರು: ಸಂಸಾರವನ್ನು ಕಾಪಾಡುವವಳು ಹೆಣ್ಣು. ಈ ರಾಜ್ಯವನ್ನು ಕಾಪಾಡುತ್ತಿರುವುದು ಹೆಣ್ಣು ದೇವತೆಗಳು. ಸ್ತ್ರೀ ಶಕ್ತಿಯೇ ನಮ್ಮ ಕರ್ನಾಟಕದ ಶಕ್ತಿ ಎಂದು ಉಪಮುಖ್ಯ ಡಿ.ಕೆ.ಶಿವಕುಮಾರ್ ಅವರು ಅಭಿಪ್ರಾಯಪಟ್ಟರು.
ಮೈಸೂರಿನ ಚಾಮುಂಡಿ ಬೆಟ್ಟದಲ್ಲಿಇಂದು (ಗುರುವಾರ ಅ. 03) ರಂದು ನಡೆದ ನಾಡಹಬ್ಬ ದಸರಾ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಕಳೆದ ವರ್ಷ ದಸರಾ ಉದ್ಘಾಟನೆ ವೇಳೆ ಮಳೆ ಚೆನ್ನಾಗಿ ಬೀಳಲಿ ಎಂದು ಚಾಮುಂಡೇಶ್ವರಿ ಬಳಿ ಬೇಡಿಕೊಂಡಿದ್ದೆವು. ಪ್ರಯತ್ನ ಮಾಡಿ ಸೋಲಬಹುದು, ಆದರೆ ಪ್ರಾರ್ಥನೆ ಮಾಡಿ ಸೋಲಲು ಸಾಧ್ಯವಿಲ್ಲ. ಅದರಂತೆ ಉತ್ತಮ ಮಳೆ ಬಂದು ನಾನು ಮತ್ತು ಮುಖ್ಯಮಂತ್ರಿ ಇಬ್ಬರೂ ರಾಜ್ಯದ 4 ಅಣೆಕಟ್ಟುಗಳಿಗೆ ಬಾಗಿನ ಅರ್ಪಿಸಿದ್ದೇವೆ ಎಂದರು.
ಉತ್ತಮ ಮಳೆಯಿಂದ ರೈತರು ಸಂತಸ
ದುಃಖದಿಂದ ನಮ್ಮನ್ನು ದೂರ ಮಾಡುವವಳು ದುರ್ಗಾ ದೇವಿ. ಚಾಮುಂಡೇಶ್ವರಿಯ ಆಶೀರ್ವಾದದಿಂದ ತಾಯಂದಿರು, ರೈತರು ಮತ್ತು ರಾಜ್ಯದ ಜನ ಸಂತೋಷವಾಗಿದ್ದಾರೆ. ಮುಖ್ಯಮಂತ್ರಿಗಳ ಜೊತೆ ಬಂದು ಕಳೆದ ವರ್ಷ ದೇವಿಗೆ ಗೃಹಲಕ್ಷ್ಮಿ ಹಣದ 2 ಸಾವಿರ ಹಾಗೂ ಒಂದು ವರ್ಷದ ಹಣವನ್ನು ಕಾಣಿಕೆ ಸಲ್ಲಿಸಿದ್ದೆವು.” ಎಂದು ಹೇಳಿದರು.
ಸಾಹಿತ್ಯ ಲೋಕದ ಪೈಲ್ವಾನ್ ಹಂಪನಾ
ಕಳೆದ ವರ್ಷ ನಾಡಿನ ಸಾಂಸ್ಕೃತಿಕ ಹೆಗ್ಗುರುತು ಹಂಸಲೇಖ ಅವರಿಂದ ಉದ್ಘಾಟನೆ ನೆರವೇರಿಸಲಾಗಿತ್ತು. ಈ ವರ್ಷ ಸಾಹಿತ್ಯ ಲೋಕದ ಪೈಲ್ವಾನ್ ಹಂಪ ನಾಗರಾಜಯ್ಯ ಅವರಿಂದ ದಸರಾ ಉದ್ಘಾಟನೆ ನೆರವೇರಿಸಿರುವುದು ಹೆಚ್ಚು ಸಂತಸ ನೀಡಿದೆ ಎಂದು ಹೇಳಿದರು.
ನವ ದುರ್ಗೆಯರ ಶಕ್ತಿ 9 ವರ್ಷಗಳ ಕಾಲ ಸರ್ಕಾರದ ಮೇಲಿರಲಿದೆ
ನವರಾತ್ರಿ ಎಂದರೆ ಒಂಬತ್ತು ದಿನ. ಈ ಒಂಬತ್ತು ದಿನವೂ ದೇವಿಯ ನಾನಾ ಅವತಾರಗಳನ್ನು ಪೂಜೆ ಮಾಡುತ್ತೇವೆ. ನವ ದುರ್ಗೆಯರ ಶಕ್ತಿ ಮುಂದಿನ 9 ವರ್ಷಗಳ ನಮ್ಮ ಸರ್ಕಾರದ ಮೇಲೆ ಇರುತ್ತದೆ ಎಂಬುದು ನನ್ನ ಅಚಲ ನಂಬಿಕೆ ಎಂದರು.
ಶಕ್ತಿ ದೇವತೆಗಳನ್ನು ನೆನೆದ ಡಿಸಿಎಂ
ಮೈಸೂರಿನಲ್ಲಿ ಚಾಮುಂಡೇಶ್ವರಿ, ಉತ್ತರ ಕರ್ನಾಟಕದಲ್ಲಿ ಬನಶಂಕರಿ, ಕರಾವಳಿಯಲ್ಲಿ ದುರ್ಗಾಪರಮೇಶ್ವರಿ, ಮಲೆನಾಡಿನಲ್ಲಿ ಸಿಗಂದೂರೇಶ್ವರಿ, ಬೆಂಗಳೂರಿನಲ್ಲಿ ಅಣ್ಣಮ್ಮ, ನಮ್ಮ ಊರಿನಲ್ಲಿ ಕೆಂಕೇರಮ್ಮ, ಕಬ್ಬಾಳಮ್ಮ ಹೀಗೆ ರಾಜ್ಯದ ಅಷ್ಟ ದಿಕ್ಕುಗಳಲ್ಲೂ ನೆಲೆಸಿರುವ ತಾಯಂದಿರು ನಮ್ಮನ್ನು ಕಾಪಾಡುತ್ತಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಮೈಸೂರು ದಸರಾ ಉತ್ಸವಕ್ಕೆ ಹಂಪನಾ ನಾಗರಾಜ್ ಉದ್ಘಾಟನೆ
ಅಮ್ಮನ ನೆನಪು ಪ್ರೀತಿಯ ಮೂಲ, ಗುರುವಿನ ನೆನೆಪು ಜ್ಞಾನದ ಮೂಲ, ದೇವರ ನೆದಸರಾ ಶಕ್ತಿ ಹಬ್ಬ, ವಿಜಯದ ಹಬ್ಬ, ಕರ್ನಾಟಕದ ಸಂಸ್ಕೃತಿ ಸಾರುವ ಹಬ್ಬ.ನಪು ಭಕ್ತಿಯ ಮೂಲ ಇವೆಲ್ಲಾ ಮನುಷ್ಯತ್ವಕ್ಕೆ ಮೂಲ. ಮನುಷ್ಯತ್ವ ಮೋಕ್ಷಕ್ಕೆ ಮೂಲ. ದಸರಾ ಶಕ್ತಿ ಹಬ್ಬ, ವಿಜಯದ ಹಬ್ಬ, ಕರ್ನಾಟಕದ ಸಂಸ್ಕೃತಿ ಸಾರುವ ಹಬ್ಬ ಎಂದರು.
ಗುರು ಸಮಾನರಾದ ಹಂಪ ನಾಗರಾಜಯ್ಯ ಅವರು ನನಗೆ ಕಳೆದ 55 ವರ್ಷಗಳಿಂದಲೂ ಚಿರಪರಿಚಿತರು. ಅವರ ಮಗ ಹರ್ಷ ಮತ್ತು ನಾನು ಸಹಪಾಠಿಗಳು. ನಾಗರಾಜಯ್ಯ ಅವರಿಗೆ ಶಕ್ತಿಯಾಗಿದ್ದ ಪತ್ನಿ ಕಮಲಾ ಹಂಪನಾ ಅವರ ಅನುಪಸ್ಥಿತಿ ಕಾಡುತ್ತಿದೆ ಎಂದರು.